ಗುಜರಾತ್​ ಬಿಜೆಪಿ ಉಪಾಧ್ಯಕ್ಷನ ವಿರುದ್ಧ ಅತ್ಯಾಚಾರ ಪ್ರಕರಣ,ರಾಜೀನಾಮೆ

ನವದೆಹಲಿ: ಅತ್ಯಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಗುಜರಾತ್‌ ಬಿಜೆಪಿ ಉಪಾಧ್ಯಕ್ಷ ಜಯಂತಿ ಭಾನುಶಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸೂರತ್‌ನ ಸಂತ್ರಸ್ತ ಮಹಿಳೆ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಜಯಂತಿ ಭಾನುಶಾಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುಳ್ಳು ಭರವಸೆಯನ್ನು ನೀಡಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಜಯಂತಿ ಭಾನುಶಾಲಿ, ಪ್ರಸಿದ್ಧ ಫ್ಯಾಶನ್ ಡಿಸೈನಿಂಗ್‌ ಕಾಲೇಜಿನಲ್ಲಿ ಪ್ರವೇಶ ಕೊಡಿಸುವುದಾಗಿ ಹೇಳಿ ವಂಚಿಸಿದ್ದರು ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ.

ಆದರೆ, ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಜಯಂತಿ ಭಾನುಶಾಲಿ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಕಳುಹಿಸಿದ್ದು, ಇದು ನನ್ನ ತೇಜೋವಧೆಗಾಗಿ ಮಾಡಿರುವ ಪಿತೂರಿ. ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಆಧಾರ ರಹಿತ ಆರೋಪ ಮಾಡಲಾಗಿದೆ ಎಂದಿದ್ದಾರೆ.

ಭಾನುಶಾಲಿ ಅವರು 2007 ರಿಂದ 2012ರ ವರೆಗೆ ಕುಚ್‌ನ ಅಬ್‌ದಾಸ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. (ಏಜೆನ್ಸೀಸ್)