ಪಾನಮತ್ತ ವೈದ್ಯ ಮಾಡಿದ ಹೆರಿಗೆಯಿಂದ ತಾಯಿ, ಮಗು ಸಾವು

ಅಹಮದಾಬಾದ್​: ಪಾನಮತ್ತ ವೈದ್ಯನೊಬ್ಬ ಮಾಡಿದ ಹೆರಿಗೆಯಿಂದ ತಾಯಿ ಮತ್ತು ಹಸುಗೂಸು ಸಾವಿಗೀಡಾಗಿದೆ ಎನ್ನಲಾದ ಅಮಾನವೀಯ ಘಟನೆ ಗುಜರಾತಿನ ಬೊಟೋಡ್​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಕಾಮಿನೆಬೆನ್​ ಛಾಂಛಿಯಾ(22) ಮೃತ ತಾಯಿ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಅವರನ್ನು ಬೋಟಾಡ್​ ಜಿಲ್ಲೆಯ ಸೋನಾವಾಲದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸೋಮವಾರ ತಡರಾತ್ರಿ ದಾಖಲಿಸಲಾಗಿತ್ತು. ಈ ವೇಳೆ ವೈದ್ಯ ಪಿ.ಜೆ.ಲಖನಿ ಹೆರಿಗೆ ಮಾಡಿದ್ದು, ಸ್ವಲ್ಪ ಸಮಯದ ನಂತರ ತಾಯಿ ಮತ್ತು ಮಗು ಇಬ್ಬರು ಸಾವಿಗೀಡಾಗಿದ್ದಾರೆ. ಇದಕ್ಕೆ ವೈದ್ಯನ ನಿರ್ಲಕ್ಷ್ಯವೇ ಕಾರಣ ಎಂದು ಸಂತ್ರಸ್ತ ಕುಟುಂಬದವರು ಆರೋಪಿಸಿದ್ದಾರೆಂದು ಬೋಟೋಡ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಹರ್ಷದ್​ ಮೆಹ್ತಾ ಅವರು ತಿಳಿಸಿದ್ದಾರೆ.

ವಿಚಾರಣೆ ನಡೆಸಿದಾಗ ವೈದ್ಯ ಕರ್ತವ್ಯದ ವೇಳೆ ಮದ್ಯಪಾನ ಮಾಡಿದ್ದ ಎಂಬುದು ಗೊತ್ತಾಗಿದ್ದು, ಆತನನ್ನು ಬಂಧಿಸಲಾಗಿದೆ. ಅಲ್ಲದೆ, ಆತನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೆಹ್ತಾ ಅವರು ಹೇಳಿದ್ದಾರೆ.

ಮೃತ ಛಾಂಛಿಯ ದೇಹವನ್ನು ಭಾವನಗರ ಸಿವಿಲ್​ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಯಮಗಳ ಪ್ರಕಾರ ಅದನ್ನು ಸಿವಿಲ್ ಸರ್ಜನ್ ನೇತೃತ್ವದ ಸಮಿತಿಗೆ ಆರೋಪಿಯ ನಿರ್ಲಕ್ಷ್ಯವನ್ನು ಕಂಡುಹಿಡಿಯಲು ಕಳುಹಿಸಲಾಗುವುದು ಎಂದು ಮೆಹ್ತಾ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್​ ಮಾರ್ಗದರ್ಶನದ ಪ್ರಕಾರ ಸಿವಿಲ್ ಸರ್ಜನ್ ನೇತೃತ್ವದ ಸಮಿತಿಗೆ ಮಾತ್ರ ಆರೋಪಿಯ ನಿರ್ಲಕ್ಷ್ಯವನ್ನು ಖಚಿತಪಡಿಸುವ ಅವಕಾಶವಿದ್ದು, ಆರೋಪ ಸಾಬೀತಾದರೆ ಭಾರತೀಯ ದಂಡ ಸಂಹಿತೆಯ ಪ್ರಕಾರ ನಿರ್ಲಕ್ಷ್ಯ ಪ್ರಕರಣದಡಿಯಲ್ಲಿ ವೈದ್ಯನ ಮೇಲೆ ಚಾರ್ಜ್​ಶೀಟ್​ ದಾಖಲಿಸಲಾಗುವುದು ಎಂದು ಮೆಹ್ತಾ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *