More

    ವಿದ್ಯಾರ್ಥಿಗಳಿಗೆ ಸಾಧಿಸುವ ಛಲ ಇರಬೇಕು

    ಅಕ್ಕಿಆಲೂರ: ನನ್ನಿಂದ ಏನೂ ಆಗುವುದಿಲ್ಲ ಎಂಬ ನಕಾರಾತ್ಮಕ ಚಿಂತನೆಗಳನ್ನು ದೂರಮಾಡಿ, ನಮ್ಮ ನ್ಯೂನತೆಗಳನ್ನು ನಾವೇ ಗುರುತಿಸಿಕೊಂಡು ಸರಿದಾರಿಗೆ ಹೋಗುವ ವಿದ್ಯಾರ್ಥಿ ಶೈಕ್ಷಣಿಕ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸುತ್ತಾನೆ ಎಂದು ಸುರಳೇಶ್ವರ ಸರ್ಕಾರಿ ಶಾಲೆ ಶಿಕ್ಷಕ ಶ್ರೀಕಾಂತ ಹುಲಮನಿ ಅಭಿಪ್ರಾಯ ವ್ಯಕ್ತಪಡಿಸಿದರು.

    ‘ವಿಜಯವಾಣಿ’ ಮತ್ತು ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಸಹಯೋಗದಲ್ಲಿ ಪಟ್ಟಣದ ಸಿಂಧೂರ ಸಿದ್ದಪ್ಪ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

    ಕಷ್ಟ ಪಡುವುದಕ್ಕಿಂತ ಇಷ್ಟ ಪಟ್ಟು ಓದುವುದು, ನಂಬಿಕೆಯೊಂದಿಗೆ ಪ್ರಯತ್ನ ಪಡುವುದು, ಯಾರ ಒತ್ತಡಕ್ಕೆ ಮಣಿಯದೇ ಸ್ವಯಂ ಪ್ರೇರಣೆಯಿಂದ ಓದುವ ವಿದ್ಯಾರ್ಥಿಯಲ್ಲಿ ಹೆಚ್ಚಿನ ಪಾಂಡಿತ್ಯ ಇರುತ್ತದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯೇ ನಮ್ಮ ಉದ್ಯೋಗ, ಕೆಲಸಕ್ಕೆ ಆಧಾರವಾಗಿರುವುದರಿಂದ ಪರೀಕ್ಷೆ ನಮ್ಮ ಜೀವನವನ್ನು ರೂಪಿಸುತ್ತದೆ ಎಂಬ ಮನಸ್ಥಿತಿ ಇರಬೇಕು. ನಮ್ಮ ದುರ್ಬಲ ಮನಸ್ಸು, ದಾರಿದ್ರ್ಯ ಆವರಿಸುವಂತೆ ಮಾಡುತ್ತದೆ. ಗುರಿಯಿಲ್ಲದ ಜೀವನ ಯಾವುದಕ್ಕೂ ಉಪಯೋಗ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥೈಸಿಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ತಾಲೂಕು ಶಿಕ್ಷಣ ಸಂಘದ ಅಧ್ಯಕ್ಷ ಎಸ್. ಎಂ. ಸಿಂಧೂರ ಮಾತನಾಡಿ, ‘ನನ್ನಿಂದ ಅಸಾಧ್ಯ’ ಎಂಬ ಭಾವನೆ ಹೋಗುವವರೆಗೂ ವಿದ್ಯಾರ್ಥಿಗಳ ಬದುಕು ಸಾರ್ಥಕವಾಗುವುದಿಲ್ಲ. ಓದು ಎಂಬುದು ಒತ್ತಾಯ ಮಾಡುವುದರಿಂದ ಮೂಡುವುದಿಲ್ಲ. ನಾವು ನಮ್ಮ ಭವಿಷ್ಯ ಯೋಚಿಸಿ ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಸಂಘದ ಗೌರವ ಕಾರ್ಯದರ್ಶಿ ನಿರಂಜನಪ್ಪ ಪಾವಲಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆ ಬಿಡುಗಡೆಗೊಳಿಸಿದರು.

    ಶಿಕ್ಷಕ ಶ್ರೀಕಾಂತ ಹುಲಮನಿ ಅವರನ್ನು ವಿಜಯವಾಣಿ ಮತ್ತು ಹಾನಗಲ್ಲ ತಾಲೂಕ ಶಿಕ್ಷಣ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಿಂಧೂರ ಸಿದ್ದಪ್ಪ, ದೇಸಾಯಿ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರಾದ ವಸಂತ ಚಿಕ್ಕಣ್ಣನವರ, ಮಲ್ಲಪ್ಪ ಹರಿಜನ, ಶಶಿಧರ ಬೂದಿಹಾಳ, ಕುದ್ದಣ್ಣನವರ ಉಪಸ್ಥಿತರಿದ್ದರು.

    ಭಾರತದಲ್ಲಿರುವ ಯುವಸಮುದಾಯಕ್ಕೆ ಸದಾ ಆದರ್ಶಪ್ರಾಯವಾಗಿರುವ ಡಾ.ವಿಜಯ ಸಂಕೇಶ್ವರ ಸಾರಥ್ಯದಲ್ಲಿ ಬರುತ್ತಿರುವ ‘ವಿಜಯವಾಣಿ’ ದೇಶದ ಸಂಸ್ಕೃತಿ, ಪರಂಪರೆ ಸಾರುವ ಮೂಲಕ ಇಂದಿನ ಪೀಳಿಗೆಯನ್ನು ಜಾಗೃತಗೊಳಿಸುತ್ತಿದೆ. ವಿದ್ಯಾರ್ಥಿ ಮಿತ್ರ ಪತ್ರಿಕೆ ಶಿಕ್ಷಣದ ಜತೆ ಮಕ್ಕಳು ಎಲ್ಲರಂಗದಲ್ಲೂ ಗುರುತಿಸಿಕೊಳ್ಳಬೇಕಾದ ಗ್ರಂಥವಿದ್ದಂತೆ ಮಾಹಿತಿ ಭಂಡಾರ ಒಳಗೊಂಡಿದೆ.

    | ಎಸ್.ಎಂ. ಸಿಂಧೂರ, ಹಾನಗಲ್ಲ ತಾಲೂಕು ಶಿಕ್ಷಣ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts