ದೇವದುರ್ಗ: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ 30ಸಾವಿರ ರೂ. ವೇತನ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಬಿಇಒ ಕಚೇರಿ ಮುಂದೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.
ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ: 45 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮತಿ
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಾವಿರಾರು ಅತಿಥಿ ಶಿಕ್ಷಕರು ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಇಂದಿನ ದುಬಾರಿ ದುನಿಯಾದಲ್ಲಿ ಸರ್ಕಾರ ನೀಡುವ ಗೌರವಧನ ಯಾವುದಕ್ಕೂ ಸಾಲುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ.
ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸಲು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಅತಿಥಿ ಶಿಕ್ಷಕರಿಗೆ ಮಾಸಿಕ 30ಸಾವಿರ ರೂ. ವೇತನ ನೀಡಬೇಕು. ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಮೆರಿಟ್ ಆಧಾರಿತ ನೇಮಕ ಕೈಬಿಟ್ಟು ಸೇವಾ ಹಿರಿತನ ಪರಿಗಣಿಸಬೇಕು.
ಮಹಿಳಾ ಶಿಕ್ಷಕರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಕಾಯಂ ಶಿಕ್ಷಕರ ನೇಮಕ ಸಂದರ್ಭದಲ್ಲಿ ಅತಿಥಿ ಶಿಕ್ಷಕರಿಗೆ ಗ್ರೇಸ್‌ಮಾರ್ಕ್ಸ್ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ರಂಗಪ್ಪ ನಾಯಕ, ತಾಲೂಕು ಕಾರ್ಯದರ್ಶಿ ಶಿವಕುಮಾರ ಜಕ್ಕಲ್, ಪ್ರಮುಖರಾದ ಗೋವಿಂದರಾಜ್ ನಾಯಕ, ಬುದ್ದಯ್ಯ ನಾಯಕ, ಶ್ರೀದೇವಿ, ಪಾರ್ವತಿ ಜಾಲಹಳ್ಳಿ, ಶಾಂತಾ, ಶಿವಕುಮಾರ, ರವಿಕುಮಾರ, ನಾಗರಾಜ ಇತರರಿದ್ದರು.