ಅಶೋಕ ಶೆಟ್ಟರ ಬಾಗಲಕೋಟೆ
ಬೇಸಿಗೆ ಬಂತೆಂದರೆ ಈ ಊರಿನ ಜನರಿಗೆ ಅಕ್ಷರಶಃ ಯಮಯಾತನೆ! ಕಣ್ಣಾಯಿಸಿದ ಕಡೆಗೆ ಖಾಲಿ ಕೊಡಗಳ ದರ್ಬಾರ!! ದಾಹ ತಣಿಸಿಕೊಳ್ಳಲು ಜೀವಜಲಕ್ಕಾಗಿ ಆ ಜನರದ್ದು ನಲ್ಲಿಗಳ ಮುಂದೆ ನಿತ್ಯ ಶಿವರಾತ್ರಿ!!!
ಹೌದು, ಜಿಲ್ಲೆಯ ಹುನಗುಂದ ತಾಲೂಕಿನ ಗುಡೂರ ಗ್ರಾಮದಲ್ಲಿ ಕುಡಿವ ನೀರಿಗಾಗಿ ಉಂಟಾಗಿರುವ ಭೀಕರ ಚಿತ್ರಣ.
ನೆತ್ತಿ ಸುಡುವ ಬಿಸಿಲಿನ ಆರ್ಭಟ ಒಂದು ಕಡೆ ಇದ್ದರೆ ಬಿರುಬಿಸಿಲಿನಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಕುಡಿವ ನೀರು ಸಿಗುತ್ತಿಲ್ಲವಲ್ಲ ಎನ್ನುವ ಪರಿಸ್ಥಿತಿ ಮತ್ತೊಂದು ಕಡೆ. ಹಗಲು ರಾತ್ರಿ ಎನ್ನದೆ ಮಕ್ಕಳಾದಿಯಾಗಿ ವೃದ್ಧರು ಸಹ ನಿದ್ದೆಗೆಟ್ಟು ಕೊಡ ನೀರಿಗಾಗಿ ಅಲೆಯುವುದು ಮಗದೊಂದು ಕಡೆ.
ನಾಲ್ಕೈದು ವರ್ಷಗಳಿಂದ ಸತತ ಭೀಕರ ಬರದಿಂದ ಗ್ರಾಮದಲ್ಲಿ ಇರುವ ಬಹುತೇಕ ಕೊಳವೆಬಾವಿಗಳು ಬತ್ತಿ ಹೋಗಿವೆ. ಹೊಸದಾಗಿ ಕೊರೆಸುವ ಬಾವಿಗಳಿಗೆ ಹನಿ ನೀರು ಬೀಳುತ್ತಿಲ್ಲ. ಗ್ರಾಮದ ದಾಹ ತಣಿಸುವ ನಿಟ್ಟಿನಲ್ಲಿ ಪಂಚಾಯಿತಿಯವರು ಹಚ್ಚಿರುವ ಟ್ಯಾಂಕರ್ ನೀರು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ.
ಗ್ರಾಮದಲ್ಲಿ ಅಂದಾಜು 15 ರಿಂದ 18 ಸಾವಿರ ಜನಸಂಖ್ಯೆ ಇದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು ಮೂರ್ನಾಲ್ಕು ವರ್ಷಗಳಲ್ಲಿ ಕೊರೆಸಿರುವ ಅಂದಾಜು 40 ಕೊಳವೆಬಾವಿಗಳಲ್ಲಿ ನೀರು ಬಿದ್ದಿಲ್ಲ. ಅಲ್ಲೊಂದು ಇಲ್ಲೊಂದು ಬಾವಿಯಲ್ಲಿ ನೀರು ಕಾಣಿಸಿಕೊಂಡರೂ ಒಂದು ವಾರದಲ್ಲಿ ಬಂದ್ ಆಗಿರುತ್ತವೆ. ಸದ್ಯ ಇಡೀ ಗ್ರಾಮದಲ್ಲಿ ಎರಡು ಕೊಳವೆಬಾವಿ ಮಾತ್ರ ಬಿಟ್ಟು ಬಿಟ್ಟು ಆಗೊಂದು ಕೊಡ, ಈಗೊಂದು ಕೊಡವನ್ನು ತುಂಬಿಸುತ್ತಿವೆ.
ಸದ್ಯ ನೀರಿನ ಹಾಹಾಕಾರ ನೀಗಿಸಲು ಪಂಚಾಯಿತಿ ವತಿಯಿಂದ 9 ಟ್ಯಾಂಕರ್ ನಿಯೋಜಿಸಿದರೂ ಅಷ್ಟೊಂದು ಜನಸಂಖ್ಯೆ ಇರುವ ಗ್ರಾಮದ ಜನರ ದಾಹ ತಣಿಸಲು ಆಗುತ್ತಿಲ್ಲ. ಟ್ಯಾಂಕರ್ ಬಂದರೆ ಜನರು ಮುಗಿಬೀಳುತ್ತಿದ್ದಾರೆ. ಖಾಲಿ ಕೊಡ ತುಂಬಿಸಿಕೊಳ್ಳಲು ತಮ್ಮವರ ಜತೆಗೆ ಕೈ ಕೈ ಹಿಡಿದು ಜಗಳವಾಡುವ ಪರಿಸ್ಥಿತಿ ಕಾಣಿಸಿಕೊಂಡಿದೆ.
ಕನಿಷ್ಠ 10 ಲಕ್ಷ ಲೀಟರ್ ನೀರು ಬೇಕು
ಗ್ರಾಮದ ಜನರು ಹಾಗೂ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗಿದೆ. ಒಬ್ಬರಿಗೆ ದಿನಕ್ಕೆ ಕನಿಷ್ಠ 50 ಲೀಟರ್ ನೀರು ಎಂದರೆ ಗ್ರಾಮಕ್ಕೆ ನಿತ್ಯ 10 ಲಕ್ಷ ಲೀಟರ್ ಪೂರೈಕೆ ಆಗಬೇಕಿದೆ. ಆದರೆ, ಈಗ ಚಾಲ್ತಿಯಲ್ಲಿರುವ ಎರಡು ಕೊಳವೆಬಾವಿಗಳಿಂದ 20 ಸಾವಿರ ಲೀಟರ್ ಹಾಗೂ ಒಂಬತ್ತು ಟ್ಯಾಂಕರ್ಗಳ ಮೂಲಕ ಪೂರೈಕೆ ಮಾಡುತ್ತಿರುವ ಅಂದಾಜು 80 ಸಾವಿರ ಲೀಟರ್ ಸೇರಿ ಒಂದು ಲಕ್ಷ ಲೀಟರ್ ನೀರು ಮಾತ್ರ ಲಭ್ಯವಾಗುತ್ತಿದೆ. ಇದರಿಂದ ಎಲ್ಲೆಡೆ ನೀರಿಗಾಗಿ ಕೂಗಾಟ, ಹಾರಾಟ, ಚೀರಾಟದ ಧ್ವನಿಗಳೇ ಕೇಳಿ ಬರುತ್ತಿವೆ.
ಒಂದು ಕೊಡಕ್ಕೆ 20 ರೂ.
ಗ್ರಾಮದಲ್ಲಿ ಟ್ಯಾಂಕರ್ ಹಾಗೂ ಎರಡು ಕೊಳವೆಬಾವಿಗಳಿಂದ ಪೂರೈಕೆಯಾಗುವ ನೀರು ಕುಡಿಯಲು ಆಗುತ್ತಿಲ್ಲ. ನಿತ್ಯ ಬಳಕೆಗೆ ಉಪಯೋಗಿಸಬಹುದಷ್ಟೆ. ಹೀಗಾಗಿ ದಾಹ ತಣಿಸಿಕೊಳ್ಳಲು ಶುದ್ಧ ನೀರು ಇಲ್ಲವಾಗಿದೆ. ಗ್ರಾಮದಲ್ಲಿ ಇರುವ ಶುದ್ಧ ನೀರಿನ ಘಟಕಗಳಿಗೆ ಬೀಗ ಜಡಿದು ವರ್ಷಗಳೇ ಗತಿಸಿವೆ. ದೂರದ ಗಜೇಂದ್ರಗಡ ಸೇರಿ ಬೇರೆ ಬೇರೆ ಕಡೆಯಿಂದ ಶುದ್ಧ ನೀರು ಮಾರಾಟಕ್ಕೆ ಗುಡೂರ ಗ್ರಾಮಕ್ಕೆ ಬರುತ್ತಿದ್ದಾರೆ. ಆದರೆ, ಒಂದು ಕೊಡ ತುಂಬಿಸಿಕೊಳ್ಳಲು 20 ರೂ. ಕೊಡಬೇಕು. ಭೀಕರ ಬರದಿಂದ ಉದ್ಯೋಗ ಇಲ್ಲದೆ ಕಂಗಾಲಾಗಿರುವ ಬಡ ಜನರು ನೀರು ಖರೀದಿ ಮಾಡಲು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
ಬಹುವರ್ಷವಾದರೂ ಬಹುಗ್ರಾಮ ಯೋಜನೆ ಮುಗಿದಿಲ್ಲ
ಗ್ರಾಮದಲ್ಲಿ ಉಂಟಾಗಿರುವ ಕುಡಿವ ನೀರಿನ ಹಾಹಾಕಾರ ತಪ್ಪಿಸಲೆಂದು ಸರ್ಕಾರ ಬಹುಗ್ರಾಮದ ಕುಡಿವ ನೀರಿನ ಯೋಜನೆ ಅಡಿ ಗುಡೂರನ್ನು ಸೇರಿಸಿದೆ. ಅಂದಾಜು 48 ಕೋಟಿ ರೂ. ವೆಚ್ಚದಲ್ಲಿ 18 ಗ್ರಾಮಗಳ ಈ ಯೋಜನೆ ಆರಂಭಗೊಂಡು ಮೂರ್ನಾಲ್ಕು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.
ತಾತ್ಕಾಲಿಕ ಯೋಜನೆಗೂ ಗರ
ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಗ್ರಹಣ ಹಿಡಿದಿದ್ದರಿಂದ ನೀರಿನ ಭೀಕರ ಪರಿಸ್ಥಿತಿ ನಿವಾರಣೆ ಮಾಡಲು ತಾತ್ಕಾಲಿಕವಾಗಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಈ ಯೋಜನೆಯಿಂದಲೂ ನೀರು ಗ್ರಾಮವನ್ನು ತಲುಪಿಲ್ಲ. ಗ್ರಾಮದಿಂದ ಏಳೆಂಟು ಕಿ.ಮೀ. ದೂರದಲ್ಲಿರುವ ರಂಗಸಮುದ್ರಕ್ಕೆ ನೀರು ತುಂಬಿಸಿ ಅಲ್ಲಿಂದ ಪೈಪ್ಲೈನ್ ಮಾಡಿಸಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಮುಂದಾದರೂ ಅನುಷ್ಠಾನಕ್ಕೆ ಬಂದಿಲ್ಲ.
ಯಾರೂ ಬರುತ್ತಿಲ್ಲ, ಕೇಳುತ್ತಿಲ್ಲ
ಕುಡಿವ ನೀರಿಗಾಗಿ ಜನರು ಪರದಾಡುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿ ತಮ್ಮ ಅಳಲು ಆಲಿಸುತ್ತಿಲ್ಲ ಎನ್ನುವ ಆಕ್ರೋಶ ಅಲ್ಲಿನ ಜನರಲ್ಲಿ ಮನೆ ಮಾಡಿದೆ. ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಲೋಕಸಭೆ ಚುನಾವಣೆ ಗುಂಗಿನಲ್ಲಿ ಮುಳುಗಿದ್ದರಿಂದ ಯಾರೂ ತಮ್ಮತ್ತ ತಿರುಗಿಯೂ ನೋಡುತ್ತಿಲ್ಲ. ಈ ಸಲ ನಮ್ಮೂರಿಗೆ ವೋಟು ಕೇಳಲು ಬರುವ ಅಭ್ಯರ್ಥಿಗಳಿಗೆ ಕೊರಳ ಪಟ್ಟಿ ಹಿಡಿದು ಜಾಡಿಸುತ್ತೇವೆ ಎನ್ನುತ್ತಾರೆ ಗ್ರಾಮದ ಮಹಬೂಬಿ ಆರಿ, ಇಮ್ರಾನ್ ಹಾಗೂ ಮಹಾದೇವಿ.
ಗುಡೂರ ಗ್ರಾಮದಲ್ಲಿ ನೀರಿನ ಸಮಸ್ಯೆ ತೀವ್ರ ಉಲ್ಬಣಗೊಂಡಿದೆ. ಎರಡು ದಿನಕ್ಕೊಮ್ಮೆ ಒಂದು ಟ್ಯಾಂಕರ್ ನೀರು ಕಳುಹಿಸುತ್ತಾರೆ. ಅದರಲ್ಲಿ ಇಡೀ ಓಣಿಯ ಜನರು ಮುಗಿಬೀಳಬೇಕು. ನೀರಿಗಾಗಿ ಅಕ್ಕಪಕ್ಕದ ಮನೆಯವರು ಜಗಳವಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಣ್ಣಿಗೆ ಕಾಣಿಸುತ್ತಿಲ್ಲ.
ವೀರಣ್ಣ ಕುಪ್ಪಸ್ತ, ಗುಡೂರ ಗ್ರಾಮಸ್ಥ
ಗುಡೂರ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ರಂಗಸಮುದ್ರದಲ್ಲಿ ನೀರು ತುಂಬಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಟಿಸಿ ಸುಟ್ಟಿದ್ದರಿಂದ ಸಮಸ್ಯೆ ಉಲ್ಬಣವಾಗಿದೆ. ಕ್ಷೇತ್ರದ ಶಾಸಕರ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಆ ಕೆಲಸವನ್ನು ಬೇಗ ಪೂರ್ಣಗೊಳಿಸಿ ಅಲ್ಲಿನ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು.
ಪಿ.ಸಿ.ಗದ್ದಿಗೌಡರ. ಹಾಲಿ ಸಂಸದರು, ಬಿಜೆಪಿ ಅಭ್ಯರ್ಥಿ
ನಾನು ಜಿಪಂ ಅಧ್ಯಕ್ಷೆ ಇದ್ದಾಗ ಗುಡೂರ ನೀರಿನ ಸಮಸ್ಯೆ ಪರಿಹಾರಕ್ಕಾಗಿ 30 ಲಕ್ಷ ರೂ. ವಿಶೇಷ ಅನುದಾನ ತಂದಿದ್ದೆ. ನಮ್ಮ ಪತಿ ವಿಜಯಾನಂದ ಕಾಶಪ್ಪನವರ ಸಹ 30ಲಕ್ಷ ರೂ. ಅನುದಾನ ನೀಡಿದ್ದರು. ರಂಗಸಮುದ್ರದಲ್ಲಿಯ ಬಾವಿಯಿಂದ ಗುಡೂರ ಗ್ರಾಮದವರೆಗೂ ಪೈಪ್ಲೈನ್ ಮಾಡಿಸಿ ನೀರು ಕೊಟ್ಟಿದ್ದೇವು. ಹುನಗುಂದ ಶಾಸಕರು ಕುಡಿವ ನೀರಿಗಾಗಿ ವಿಶೇಷ ಅನುದಾನ ತರಲಿಲ್ಲ. ಹೀಗಾಗಿ ಸಮಸ್ಯೆ ತೀವ್ರಗೊಂಡಿದೆ.
ವೀಣಾ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ, ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ