ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ

ಗುಂಡ್ಲುಪೇಟೆ : ಓದಿನ ಜತೆ ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ರಂಗಭೂಮಿ ಕಲಾವಿದೆ ನಾಗರತ್ನ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್, ಉದ್ಯೋಗ ಮಾಹಿತಿ ಕೋಶ, ರೋವರ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ರಂಗಭೂಮಿಯಲ್ಲಿ ತೊಡಗುವವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವ ಮೂಲಕ ಕಲೆ ಹಾಗೂ ಸಂಸ್ಕೃತಿಯ ಉಳಿವಿಗೆ ನೆರವಾಗಬೇಕು ಎಂದರು.

ಜೆಎಸ್‌ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮಲ್ಲುಸ್ವಾಮಿ ಮಾತನಾಡಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ದೈಹಿಕ ಹಾಗೂ ಮಾನಸಿಕ ವಿಕಸನ ಸಾಧ್ಯವಾಗಲಿದೆ ಎಂದರು.

ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಸಾಧನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದರು.

ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯರಾದ ಎನ್.ಗೋವಿಂದರಾಜನ್, ಮಲ್ಲರಾಜು, ಪ್ರಾಂಶುಪಾಲ ಪ್ರೊ.ಜಿ.ಮಲ್ಲೇಶ್, ಪ್ರಾಧ್ಯಾಪಕರಾದ ಪ್ರೊ.ಕೃಪಾ ಗಣೇಶ್, ಪ್ರೊ.ಚಾಮರಾಜು, ರೂಪಾ, ಕವಿತಾ, ಉಮೇಶ್, ರವಿಕುಮಾರ್, ನಾರಾಯಣ ಹಾಜರಿದ್ದರು.