ಬಿ ಫಾರಂ ಅವಧಿ ಮುಗಿದ ಬಳಿಕ ಜೆಡಿಎಸ್‌ ತೊರೆಯುವ ಸುಳಿವು ನೀಡಿದ ಗುಬ್ಬಿ ಶಾಸಕ ಎಸ್‌ ಆರ್‌ ಶ್ರೀನಿವಾಸ್‌

ಬೆಂಗಳೂರು: ನನಗೆ ಯಾವುದೇ ಅಸಮಾಧಾನ ಇಲ್ಲ. ಡಿಕೆ ಶಿವಕುಮಾರ್ ಬಂಧನವಾದಾಗ ಸಮಾಜ ಹೋರಾಟಕ್ಕೆ ಕರೆ ಕೊಟ್ಟಿತ್ತು. ಸಮಾಜ ಕರೆ ಕೊಟ್ಟರೂ ಕುಮಾರಸ್ವಾಮಿ ಬಂದಿಲ್ಲ ಎಂದು ಹೇಳಿದ್ದೆ ಅಷ್ಟೆ. ಬೇರೆ ಅಸಮಾಧಾನ ಇಲ್ಲ ಎಂದು ಗುಬ್ಬಿ ಜೆಡಿಎಸ್‌ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ ತಿಳಿಸಿದ್ದಾರೆ.

ತುಮಕೂರು ಭಾಗದ ಶಾಸಕರು, ಮುಖಂಡರ ಜತೆಗಿನ ದೇವೇಗೌಡರ ಸಭೆ ಬಳಿಕ ಜೆಪಿ ಭವನದಲ್ಲಿ ಮಾತನಾಡಿ, ತುಮಕೂರು ಮುಖಂಡರ ಸಭೆ ಆಗಿದೆ. ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಆಯ್ತು. ಇದುವರೆಗೂ ಪಕ್ಷ ಬಿಟ್ಟು ನಾನು ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಯಾರ ಮೇಲೂ ವ್ಯಕ್ತಿಗತವಾಗಿ ಕೋಪ ಇಲ್ಲ. ಸಮಾಜದ ಹೋರಾಟಕ್ಕೆ ಬಂದಿಲ್ಲ, ನಾವೆಲ್ಲ ಒಟ್ಟಾಗಿ ಇರಬೇಕು ಎಂದು ಹೇಳಿದ್ದೆ ಅಷ್ಟೆ. ಅದು ಬಿಟ್ಟು ಯಾವುದೇ ಅಸಮಾಧಾನ ವ್ಯಕ್ತಿಗತವಾಗಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ರಾಜಕೀಯ ವಿಚಾರಗಳು ಸ್ವಲ್ಪ ಬೇಜಾರಾಗಿದೆ. ಜೆಡಿಎಸ್‌ನಿಂದ ನನಗೆ ಬಿ ಫಾರಂ ಕೊಟ್ಟಿದ್ದಾರೆ. ಆ ಬಿ ಫಾರಂ ಅವಧಿ ಇನ್ನೂ ನಾಲ್ಕು ‌ವರ್ಷ ಇದೆ. ನಾನು ಅಲ್ಲಿವರೆಗೂ ಎಲ್ಲೂ ಹೋಗಲ್ಲ ಎಂದು ಕುಮಾರಸ್ವಾಮಿಯವರಿಗೆ ಮಾತು ಕೊಟ್ಟಿದ್ದೇನೆ. ಹಾಗಾಗಿ ನಾನು ಎಲ್ಲಿಗೂ ಹೋಗುವುದಿಲ್ಲ, ಪಕ್ಷದಲ್ಲೇ ಇರುತ್ತೇನೆ ಎಂದ ಅವರು ನಾಲ್ಕು ವರ್ಷ ಆದ ಮೇಲೆ ಜೆಡಿಎಸ್‌ನಲ್ಲೇ ಇರುತ್ತೀರಾ ಎಂಬ ಪ್ರಶ್ನೆಗೆ ಗೊತ್ತಿಲ್ಲ ಎಂದು ಉತ್ತರಿಸಿದರು.

ಇವತ್ತಿನ ರಾಜಕೀಯ ವಿದ್ಯಮಾನಗಳಿಂದ ಮನಸ್ಸಿಗೆ ನೋವಾಗಿದೆ. ನನ್ನ ಜೀವನ ಇರುವವರೆಗೂ ಬಿಜೆಪಿ ಪಕ್ಷ ಸೇರುವುದಿಲ್ಲ. ಬೇರೆ ಅವರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಪಕ್ಷೇತರವಾಗಿ ಹಿಂದೆ ಗೆದ್ದವನು. ಯಾರಿಂದಲೂ ಹಣಕ್ಕೆ ಆಸೆ ಪಟ್ಟವನಲ್ಲ. ಇವತ್ತಿನ ರಾಜಕೀಯ ವ್ಯವಸ್ಥೆ ಬಗ್ಗೆ ನೋವಾಗಿದೆ. ಹೀಗಾಗಿ ಎಲೆಕ್ಷನ್ ಮತ್ತೆ ನಿಲ್ಲಬೇಕಾ ಬೇಡವಾ ಎಂದು ಯೋಚನೆ ಮಾಡುತ್ತಿದ್ದೆ ಅಷ್ಟೆ. ನಾನು ಸರ್ಕಾರ ಬಿದ್ದ ಮೇಲೆ ಯಾರ ಜತೆಯೂ ಮಾತಾಡಿಲ್ಲ. ಸರ್ಕಾರ ಬಿದ್ದ ಮೇಲೆ ಊರಿಗೆ ಹೋದವನು‌ ಇವತ್ತು ಬಂದಿದ್ದೇನೆ ಎಂದು ಹೇಳಿದರು.

ಅನರ್ಹ ಶಾಸಕರ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಬಗ್ಗೆ ನಾವು ಹೇಳುವ ಮೊದಲು ನಮಗೆ ನೈತಿಕತೆ ಇದೆಯಾ ನೋಡಿಕೊಳ್ಳಬೇಕು. ಅಧಿಕಾರ, ಹಣಕ್ಕಾಗಿ ಇಂತಹ ವ್ಯವಸ್ಥೆಗೆ ಹೋಗಿದ್ದೇವೆ. ಛೀ.. ಥೂ ಎಂದು ಜನರೇ ಉಗಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಜನರಿಗೆ ಒಳ್ಳೆ ಕೆಲಸ ಮಾಡುವ ಕೆಲಸ ಆಗಬೇಕು. ನಮ್ಮ ಜವಾಬ್ದಾರಿ ಬಗ್ಗೆ ನಮಗೆ ಅರಿವಿರಬೇಕು. ಅನರ್ಹರಿಗೆ ಜನರೇ ಪಾಠ ಕಲಿಸಬೇಕು. ಯಾಕೆ, ಯಾವ ಸಿದ್ಧಾಂತದಿಂದ ಹೋದರು ಎಂದು ಅವರೇ ಹೇಳಬೇಕು. ವಿಶ್ವನಾಥ್ ಅಂತಹವರೇ ಹೀಗೆ ಮಾಡಿದ್ರೆ ಹೇಗೆ? ಅವರನ್ನು ನೋಡಿ ರಾಜಕಾರಣ ಮಾಡ್ತಿದ್ದವರು ನಾವು ಎಂದು ಅಸಮಾಧಾನ ಹೊರಹಾಕಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *