ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅನಿಸಿಕೆ
ಜಾಗೃತಿ ವಾಹನ ಜಾಥಾಕ್ಕೆ ಚಾಲನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯ ಸರ್ಕಾರ ಜನತೆಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಲಕ್ಷಾಂತರ ಜನರು ಪ್ರಯೋಜನ ಪಡೆದಿದ್ದಾರೆ. ಯೋಜನೆಯ ಲಾಭ ಪಡೆಯದಿದ್ದವರು ಅಥವಾ ತಪ್ಪಿ ಹೋದವರಿದ್ದರೆ ಈಗಲೂ ಸಹ ಯೋಜನೆ ಪಡೆದುಕೊಳ್ಳಬಹುದಾಗಿದೆ. ಜನತೆಗೆ ಆರ್ಥಿಕ ಉಳಿತಾಯ ಆಗಬೇಕೆಂದು ಈ ಯೋಜನೆ ನೀಡಲಾಗಿದ್ದು, ದುರುಪಯೋಗ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸಲಹೆ ನೀಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತಾಗಿ ರಾಜ್ಯವ್ಯಾಪಿ ಮಾಹಿತಿ ಒದಗಿಸಲು ಆಯೋಜಿಸಿರುವ ಜಾಗೃತಿ ಜಾಥಾ ವಾಹನ ಫೆ 15ರಂದು ಉಡುಪಿಗೆ ಆಗಮಿಸಿದ್ದು, ಜಿಲ್ಲಾದ್ಯಂತ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಕಚೇರಿಯ ಬಳಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೆರೂರು, ವಾರ್ತಾಧಿಕಾರಿ ಮಂಜುನಾಥ್, ಉಡುಪಿ ಜಿಲ್ಲಾಧಿಕಾರಿ ಕಚೇರಿಯ ವಿವಿಧ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ದೀನ-ದಲಿತರ ಹಾಗೂ ಜನಸಾಮಾನ್ಯರ ಜೀವನವನ್ನು ಬೆಳಗಿಸುತ್ತಲಿದೆ. ಈ ಯೋಜನೆಗಳು ಇನ್ನಷ್ಟು ಸಮರ್ಪಕವಾಗಿ ಜನಸಾಮಾನ್ಯರನ್ನು ತಲುಪಿಸಬೇಕೆನ್ನುವುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸೌಲಭ್ಯಗಳ ಕುರಿತು ಜನರಿಗೆ ಅರಿವು ಮೂಡಿಸಲು ರಾಜ್ಯಾದ್ಯಂತ ವಾಹನ ಜಾಥಾ ಸಂಚರಿಸಲಿದೆ.
| ರಮೇಶ್ ಕಾಂಚನ್. ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ