ಸಿಂಧನೂರು: ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿರುವುದನ್ನು ವಿರೋಧಿ ಸಿಪಿಐ (ಎಂಎಲ್) ಲಿಬರೇಷನ್ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಚಂದ್ರಶೇಖರಗೆ ಸೋಮವಾರ ಮನವಿ ಸಲ್ಲಿಸಿದರು.
ಎಸ್ಸಿ, ಎಸ್ಟಿ ಬ್ಯಾಕ್‌ಲಾಗ್ ಉದ್ಯೋಗಗಳನ್ನು ಭರ್ತಿ ಮಾಡಬೇಕು ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಹಲವು ವರ್ಷಗಳಿಂದ ಬ್ಯಾಕ್‌ಲಾಗ್ ಉದ್ಯೋಗಗಳ ಭರ್ತಿ ಆಗಿಲ್ಲ. ಬ್ಯಾಕ್‌ಲಾಗ್ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗೆ ಬಳಸಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿಯ ಕಳೆದ ಸಾಲಿನ 11 ಸಾವಿರ ಕೋಟಿ ರೂ. ಮತ್ತು ಈ ಸಾಲಿನ 14 ಸಾವಿರ ಕೋಟಿ ರೂಪಾಯಿಯನ್ನು ಕೂಡಲೇ ಹಿಂದಿರುಗಿಸಬೇಕು. ಕಾಯ್ದೆಯ 7ಡಿ ಸೆಕ್ಷನ್ ರದ್ದುಗೊಳಿಸಿದಂತೆ, 7ಸಿ ಸೆಕ್ಷನ್ ಸಹ ರದ್ದುಗೊಳಿಸಬೇಕು. ಕಾಯ್ದೆಯ ಯೋಜನೆಗಳ ಜಾರಿಗೆ ಕೂಡಲೆ ಏಕಗವಾಕ್ಷಿ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಹೊರಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ರೋಸ್ಟರ್ ಪದ್ಧತಿಗನುಗುಣವಾಗಿ ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆರಿಟ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೆ ವಿಧಿಸಿರುವ ಆದಾಯ ಹಾಗೂ ಅಂಕಗಳ ಮಿತಿಯನ್ನು ರದ್ದುಗೊಳಿಸಿ ಈ ಹಿಂದೆ ನಿಗದಿಪಡಿಸಿದಂತೆ ನೀಡಬೇಕೆಂದು ಒತ್ತಾಯಿಸಲಾಯಿತು.