ಇಂಡಿ: ಬಡವರು ಹಸಿವಿನಂದ ಬಳಲಬಾರದೆಂಬ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆ ಸೇರಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳಿಂದ ವಂಚಿತರಾದವರನ್ನು ಗುರುತಿಸಿ ಅವರಿಗೂ ಕೂಡ ಸರ್ಕಾರದ ಯೋಜನೆಗಳನ್ನು ತಲುಪಿಸಲು ಸಮಿತಿ ರಚಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಲ್ಲಿ ತೊಂದರೆಯಾಗಿರುವುದು ನಿಜ. ಅದನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಇಂಡಿ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ, ತಾಲೂಕಿನಲ್ಲಿ ಇನ್ನೂ 5 ಸಾವಿರ ಜನರಿಗೆ ವಿವಿಧ ಕಾರಣಗಳಿಂದ ಗ್ಯಾರಂಟಿ ಯೋಜನೆಗಳ ಲಾಭ ಸಿಕ್ಕಿಲ್ಲ. ಅವುಗಳ ಬಗ್ಗೆ ಅಧಿಕಾರಿಗಳ ಜೊತೆಗೂಡಿ ಚರ್ಚೆ ಮಾಡಿ ಅವರಿಗೂ ಸೌಲಭ್ಯ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಎಂ.ಆರ್.ಪಾಟೀಲ ಮಾತನಾಡಿ, ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರದಿಂದ ಇಲ್ಲಿಯವರೆಗೆ ವಿಜಯಪುರ ಜಿಲ್ಲೆಗೆ 280 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಜಿಲ್ಲಾ ಸಮಿತಿ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿದರು. ಕಂದಾಯ ಎಸಿ ಅಬೀದ ಗದ್ಯಾಳ, ತಹಸೀಲ್ದಾರ್ ಬಿ.ಎಸ್.ಕಡಕಬಾಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಸದಾಶಿವ ಪ್ಯಾಟಿ, ಬಿ.ಕೆ.ಪಾಟೀಲ, ಭೀಮಣ್ಣ ಕವಲಗಿ, ಗುರನಗೌಡ ಪಾಟೀಲ, ಕೆಂಪೇಗೌಡ ಪರಗೊಂಡ, ಭೀಮಾಶಂಕರ ಹಂಜಗಿ, ದೀಪಾ ಕುಲಕರ್ಣಿ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ಮಹೇಶ ಹೊನ್ನಬಿಂದಗಿ, ಸಂಜೀವ ನಾಯ್ಕೋಡಿ, ಸತೀಶ ಹತ್ತಿ, ಶಶಿಕಲಾ ಹಿರೇಮಠ, ಸಿದ್ದು ಕಟ್ಟಿಮನಿ, ಸಣ್ಣಪ್ಪ ತಳವಾರ, ಪ್ರಭು ಕುಂಬಾರ, ಸಂಕೇತ ಜ್ಯೋಶಿ, ಮಲ್ಲೇಶಿ ಭೋಸಗಿ, ರುದ್ರು ಅಲಗೊಂಡ, ಭೀಮರಾಯ ಮೇತ್ರಿ, ಸೋಮಣ್ಣ ಪ್ರಚಂಡಿ ಇತರರಿದ್ದರು.
ಇಒ ನಂದೀಪ ರಾಠೋಡ ಸ್ವಾಗತಿಸಿದರು. ಧನರಾಜ ಮುಜಗೊಂಡ ನಿರೂಪಿಸಿದರು.