ಮೊಳಕಾಲ್ಮೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸರ್ವ ಸಮುದಾಯದ ಜನರ ಬಾಳಿಗೆ ಆಸರೆಯಾಗಿವೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಮುಚ್ಛಯದ ಕೊಠಡಿಯಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ದೇಶ ವ್ಯಾಪಿ ಜನಮನ್ನಣೆ ಪಡೆದಿವೆ ಎಂದರು.
ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನು ಕಾಲಾನುಸಾರ ಅನುಷ್ಠಾನಕ್ಕೆ ತುರುವ ಮೂಲಕ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿಯೂ ಹಸಿವು ಮುಕ್ತ ಜೀವನ ನಡೆಸಲು ಅವಕಾಶ ಕಲ್ಪಿಸಿದೆ. ಸರ್ವರಿಗೂ ಸಮಪಾಲು ಸಿದ್ಧಾಂತವನ್ನ ಪ್ರತಿ ಮನೆಗೂ ತಲುಪಿಸುವ ಸಾಮಾಜಿಕ ನ್ಯಾಯವನ್ನ ಎತ್ತಿ ಹಿಡಿದಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎನ್.ವೈ.ಚೇತನ್ ಮಾತನಾಡಿ, ದೇಶದ ಪ್ರಗತಿಪರ ಆಡಳಿತ ವ್ಯವಸ್ಥೆಯಲ್ಲಿ ಹಸಿದವರಿಗೆ ಅನ್ನ, ನೀರು ಕೊಡುವಲ್ಲಿ ಕಾಂಗ್ರೆಸ್ ತನ್ನದೆ ಆದ ಚಾಪು ಮೂಡಿಸಿದೆ. ಆಡಳಿತರೂಢ ಸರ್ಕಾರದ ಪಂಚ ಯೋಜನೆಗಳು ವಿಶ್ವಾಸರ್ಹವಾಗಿ ಅತಿಹೆಚ್ಚು ಜನಮನ್ನಣೆ ಪಡೆದಿರುವುದು ಪಕ್ಷದ ಅತ್ಯಂತ ವಿಶ್ವಾಸರ್ಹ ಸಂಗತಿ ಎಂದರು.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಣ್ಣ, ತಹಸೀಲ್ದಾರ್ ಟಿ.ಜಗದೀಶ್, ತಾಪಂ ಇಒ ಹನುಮಂತಪ್ಪ, ಸಿಡಿಪಿಒ ನವೀನ್‌ಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಕೆ.ಕಲೀಂವುಲ್ಲಾ, ಪಪಂ ಮಾಜಿ ಅಧ್ಯಕ್ಷ ಜಿ.ಪ್ರಕಾಶ್, ಅಬ್ದುಲ್ಲಾ, ಲೋಕೇಶ್, ತಿಪ್ಪೇಸ್ವಾಮಿ, ನಂಜಪ್ಪನಾಯಕ, ವೀರೇಶ, ಶಿವುಕುಮಾರ, ಬಸವರಾಜ್ ಇದ್ದರು.