20 – 20 ಸರ್ಕಾರದ ಪತನಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಜಿ ಟಿ ದೇವೇಗೌಡ, ಎಚ್‌ಡಿಕೆ ವಿರುದ್ಧ ಗರಂ

ಮೈಸೂರು: ಸಿದ್ದರಾಮಯ್ಯ ಅಥವಾ ಡಾ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡಬೇಕಿತ್ತು. ನಮ್ಮಣ್ಣ ರೇವಣ್ಣನನ್ನು ಡಿಸಿಎಂ ಮಾಡಿಕೊಡಿ ಎಂದು ಕೇಳಿದ್ದರೆ ಸರ್ಕಾರ ಉಳಿದುಕೊಳ್ಳುತ್ತಿತ್ತು ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಉಳಿದುಕೊಂಡಿದ್ದರೆ ಕಾರ್ಯಕರ್ತರು ಸಂತೋಷ ಪಡುತ್ತಿದ್ದರು. ಬಿಜೆಪಿ ಜತೆ ಹೋದ್ರಿ ಸರ್ಕಾರ ಉಳಿಸಿಕೊಳ್ಳಲಿಲ್ಲ. ಧರ್ಮಸಿಂಗ್ ಅವಧಿಯಲ್ಲಿ ಕಾಂಗ್ರೆಸ್ ಜತೆ ಹೋದ್ರಿ ಸರ್ಕಾರ ಉಳಿಸಿಕೊಳ್ಳಲಿಲ್ಲ. ಈಗ ನಿಮ್ಮ ಅಣ್ಣನಿಗೆ ಅಧಿಕಾರ ಸಿಗಲು ಬಿಡಲಿಲ್ಲ ಎಂದು ಎಚ್‌ ಡಿ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

ಯಡಿಯೂರಪ್ಪ- ಕುಮಾರಸ್ವಾಮಿ ಸರ್ಕಾರ ಮಾಡಿದಾಗ ಏನಾಯಿತು ಎಂದು ನೆನಪಿಸಿಕೊಳ್ಳಿ. 20 ತಿಂಗಳು ಅಧಿಕಾರ ಪೂರ್ಣಗೊಂಡಾಗ ರೇವಣ್ಣ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು. ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಡಬೇಕೆಂದು ಚಿಂತನೆ ನಡೆಯಿತು. ಚಲುವರಾಯಸ್ವಾಮಿ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಕುಮಾರಸ್ವಾಮಿ ಅವರನ್ನು ವಹಿಸಿಕೊಳ್ಳಲಿ ಎಂದು ಹೇಳಿದ್ದರು. ಒಂದು ವೇಳೆ ಎಚ್‌.ಡಿ.ರೇವಣ್ಣ ಅವರಿಗೆ ಡಿಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದರೆ ಸರ್ಕಾರ ಉಳಿದುಕೊಳ್ಳುತ್ತಿತ್ತು. ರೇವಣ್ಣ ಅವರನ್ನೇ ಡಿಸಿಎಂ ಮಾಡಲು ಬಿಡದವರು ಜಿ.ಟಿ.ದೇವೇಗೌಡ ಅವರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ನೀವು ಇಸ್ರೇಲ್, ಆಸ್ಟ್ರೇಲಿಯಾ, ಲಂಡನ್‌ಗೆ ವಿಶ್ರಾಂತಿಗೆ ಹೋಗಿದ್ದಿರಿ. ಒಮ್ಮೆಯಾದರೂ ನಮ್ಮನ್ನು ವಿಶ್ರಾಂತಿಗೆ ಕರೆದುಕೊಂಡು ಹೋಗಿದ್ದೀರಾ? ಸಾ.ರಾ.ಮಹೇಶ್ ಅವರನ್ನು ಸಂಸದ ತೇಜಸ್ವಿ ಸೂರ್ಯನಂತಹ ಯುವಕ ಎಂದು ಕರೆದುಕೊಂಡು ಹೋಗಿದ್ದಿರಿ. ಈಗಲೂ ನನಗೆ ವಿಶ್ರಾಂತಿ ಬೇಡ. ಜಿ.ಟಿ.ದೇವೇಗೌಡ ಬಿಟ್ಟು ಹೋಗಲಿ ಎಂದು ಬಯಸುತ್ತಿದ್ದೀರಿ. ನಾನು ನಿಮಗೆ ಅಡ್ಡ ಬರಲ್ಲ, ಸಾ.ರಾ.ಮಹೇಶ್ ಅವರಿಗೆ ಅಡ್ಡ ಬರಲ್ಲ. ಜನರೊಂದಿಗೆ ಕೆಲಸ ಮಾಡುವುದೇ ನನಗೆ ವಿಶ್ರಾಂತಿ. ನಾನು ಅಪಾರವಾಗಿ ನೊಂದಿದ್ದೇನೆ. ನೋವಿನಿಂದಲೇ ಅಧಿಕಾರ ಪೂರ್ಣಗೊಳಿಸಬೇಕು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಮಾಜಿ ಸಿಎಂ ಸೋಲಿಸಿದ ಕಾರಣಕ್ಕೆ ಜಿ.ಟಿ.ದೇವೇಗೌಡ ಅವರನ್ನು ಸಿಎಂ ಮಾಡಬೇಕಿತ್ತಾ ಎಂಬ‌ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ನಾನು ಎದುರಿಸಿದ್ದೆ. ಆಗ ಕುಮಾರಸ್ವಾಮಿ ನನಗೆ ಗೃಹ ಖಾತೆ ನೀಡುವುದಾಗಿ ಹೇಳಿದ್ದರು. ನಾನು ರೈತರ ಕೆಲಸ ಮಾಡಲು ಕಂದಾಯ ಖಾತೆ ಕೇಳಿದ್ದೆ. ಈಗ ಕುಮಾರಸ್ವಾಮಿ ಅವರು ಮೈಸೂರು ಬಿಡಲ್ಲ. ಬಂದಾಗೆಲ್ಲ ನನ್ನ ವಿರುದ್ಧ ಮಾತನಾಡುತ್ತಾರೆ. ನೀವು (ಮಾಧ್ಯಮದವರು) ಮನೆಗೆ ಬಂದು ಪ್ರತಿಕ್ರಿಯೆ ಕೇಳುತ್ತೀರಿ. ಏನ್ ಹೇಳಲಿ ಎಂದು ನಗು ಬೀರಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *