33 ವಸ್ತುಗಳ ಮೇಲಿನ ಜಿಎಸ್​ಟಿ ದರ ಇಳಿಕೆ ; 28 ಐಷಾರಾಮಿ ವಸ್ತುಗಳು ಮಾತ್ರ ಶೇ. 28ರ ಪಟ್ಟಿಯಲ್ಲಿ

ಟಿವಿ, ಟೈರ್​, ಸಿನಿಮಾ ಟಿಕೆಟ್​ ಮೇಲಿನ ಜಿಎಸ್​ಟಿ ಇಳಿಕೆ

ನವದೆಹಲಿ: 33 ವಸ್ತುಗಳ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಶೇ.18ರಿಂದ ಶೇ.12 ಮತ್ತು ಶೇ.5ಕ್ಕೆ ಇಳಿಸಲಾಗಿದೆ ಎಂದು ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಈ ನಿರ್ಣಯವನ್ನು ಶನಿವಾರ ನಡೆದ ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪರೋಕ್ಷ ತೆರಿಗೆಯನ್ನು ಸರಳಗೊಳಿಸಲು ಸರ್ಕಾರ ಜಿಎಸ್​ಟಿಯನ್ನು ಇಳಿಸಿದೆ. ಐಷಾರಾಮಿ ವಸ್ತುಗಳ ಮೇಲೆ ಮಾತ್ರ ಶೇ.28ರಷ್ಟು ಜಿಎಸ್​ಟಿ ಮುಂದುವರಿಯಲಿದೆ. ರಿಯಲ್​ ಎಸ್ಟೇಟ್​ ಮೇಲಿನ ಜಿಎಸ್​ಟಿಯನ್ನು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಶೇ.99ರಷ್ಟು ಸರಕುಗಳ ತೆರಿಗೆಯನ್ನು ಶೇ.18ಕ್ಕಿಂತ ಕಡಿಮೆಗೊಳಿಸಲಾಗುವುದು ಎಂದು ವಾರದ ಹಿಂದೆಯೇ ಕೇಂದ್ರ ಸರ್ಕಾರ ತಿಳಿಸಿತ್ತು.

ವಿಕಲಾಂಗರ ಪರಿಕರಗಳು ಶೇ. 5ರ ಪಟ್ಟಿಗೆ
ಟಿವಿ, ಟೈರ್​, ಲಿಥಿಯಂ-ಅಯಾನ್​ ನ್ಯಾಟರಿಯ ಪವರ್​ ಬ್ಯಾಂಕ್​ಗಳ ಮೇಲಿದ್ದ ಜಿಎಸ್​ಟಿಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ. ವಿಕಲಾಂಗರು ಬಳಸುವಂಥ ಪರಿಕರಗಳ ಮೇಲಿನ ಜಿಎಸ್​ಟಿಯನ್ನು ಶೇ.5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ತಿಳಿಸಿದ್ದಾರೆ.

ಇನ್ನು ಒಂದು ದೇಶ ಒಂದು ತೆರಿಗೆಯಡಿಯಲ್ಲಿ ಕೇವಲ 28 ಐಷಾರಾಮಿ ವಸ್ತುಗಳಿಗೆ ಮಾತ್ರ ಶೇ.28ರಷ್ಟು ಜಿಎಸ್​ಟಿ ಪಾವತಿಸಬೇಕು ಎಂದು ಹೇಳಿದರು. (ಏಜೆನ್ಸೀಸ್)