More

  ಹಾಸ್ಟೆಲ್ ಮಕ್ಕಳಿಗೆ ಜಿಎಸ್​ಟಿ ವಿನಾಯಿತಿ

  ನವದೆಹಲಿ: ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಎನ್​ಡಿಎ ಸರ್ಕಾರ ಹಣಕಾಸು ಬಜೆಟ್ ಮಂಡಿಸಲು ಸಜ್ಜಾಗುತ್ತಿರುವ ಹೊತ್ತಲ್ಲೇ ವಿದ್ಯಾರ್ಥಿಗಳು, ರೈತರು, ಜನಸಾಮಾನ್ಯರ ಹೊರೆ ಸಡಿಲಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಶನಿವಾರ ದೆಹಲಿಯಲ್ಲಿ ನಡೆದ 53ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆ ಹೊರಡಿಸಿದರು.

  ವಿದ್ಯಾರ್ಥಿಗಳಿಗೆ ಸಿಹಿ: ಭಾರತದ ಬಹುತೇಕ ಕಡೆ ಗ್ರಾಮೀಣ ವಿದ್ಯಾರ್ಥಿಗಳು ಹಾಸ್ಟೆಲ್ ಅವಲಂಬಿಸಿದ್ದಾರೆ. ಕೆಲವರಿಗೆ ಸರ್ಕಾರಿ ಕಾಲೇಜು ಹಾಸ್ಟೆಲ್​ಗಳಲ್ಲಿ ಸೀಟು ಸಿಕ್ಕರೆ ಇನ್ನು ಹಲವರು ಶಿಕ್ಷಣ ಸಂಸ್ಥೆಗಳ ಹೊರಗಿರುವ ಹಾಸ್ಟೆಲ್ ಅವಲಂಬಿಸಬೇಕಾಗುತ್ತದೆ. ಇಂತಹ ಪ್ರತಿ ವಿದ್ಯಾರ್ಥಿಗೆ 20,000 ರೂ.ವರೆಗೆ ಜಿಎಸ್​ಟಿ ವಿನಾಯಿತಿ ನೀಡಲು ಸಮಿತಿ ಉದ್ದೇಶಿಸಿದೆ. ಆದರೆ ಈ ಸೌಲಭ್ಯ ಪಡೆಯಲು ವಿದ್ಯಾರ್ಥಿ ನಿರಂತರವಾಗಿ ಕನಿಷ್ಠ 90 ದಿನ ಹಾಸ್ಟೆಲ್​ನಲ್ಲಿರಬೇಕಾಗುತ್ತದೆ. ಈ ತೀರ್ವನದ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ನಿರ್ಮಲಾ ಸಮಿತಿ ಸಭೆ ಬಳಿಕ ಮಾಧ್ಯಮಕ್ಕೆ ವಿವರಿಸಿದರು.

  ಎಲ್ಲಾ ಸೋಲಾರ್ ಕುಕ್ಕರ್​ಗಳ (ಒಂದು ಅಥವಾ ಎರಡು ಇಂಧನ ಮೂಲಗಳಿದ್ದರೂ) ಮೇಲೆ ಹಾಗೂ ಉಕ್ಕು, ಕಬ್ಬಿಣ, ಅಲ್ಯೂಮಿನಿಯಂನ ಎಲ್ಲಾ ಹಾಲಿನ ಕ್ಯಾನ್​ಗಳ ಮೇಲೆ ಏಕರೂಪದ 12% ಜಿಎಸ್​ಟಿ ದರ ವಿಧಿಸಲು ಜಿಎಸ್​ಟಿ ಸಮಿತಿ ಶಿಫಾರಸು ಮಾಡಿದೆ. ದೇಶದ ಯಾವುದೇ ಭಾಗದಲ್ಲಿರಲಿ, ಎಲ್ಲಾಹಾಲಿನ ಕ್ಯಾನ್​ಗಳಿಗೆ ಏಕರೂಪದ ಜಿಎಸ್​ಟಿ ದರ ವಿಧಿಸುವುದರಿಂದ ಯಾವುದೇ ವಿವಾದ ಉದ್ಭವಿಸದಂತೆ ನೋಡಿ ಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.

  ಸೇಬು ರೈತರಿಗೆ ಗಿಫ್ಟ್: ರಟ್ಟಿನ ಪೆಟ್ಟಿಗೆಗಳು ಮತ್ತು ಸುಕ್ಕುಗಟ್ಟದ ಕಾಗದ ಅಥವಾ ಕಾಗದದ ಹಲಗೆಗಳ ಮೇಲೆ ಮೇಲೆ ಶೇ.12 ರಷ್ಟು ಏಕರೂಪದ ಜಿಎಸ್​ಟಿ ವಿಧಿಸುವ ನಿರ್ಧಾರ ಹೊರಬಿದ್ದಿದೆ. ಇದರಿಂದಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಕಾಶ್ಮೀರದ ಸೇಬು ಬೆಳೆಗಾರರಿಗೆ ಸಹಾಯವಾಗಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಮತ್ತೊಂದೆಡೆ ಅಗ್ನಿಶಾಮಕ ನೀರಿನ ಸಿಂಪರಣೆ ಸೇರಿದಂತೆ ಎಲ್ಲಾ ರೀತಿಯ ಸ್ಪ್ರಿಂಕ್ಲರ್​ಗಳ ಮೇಲೆ 12% ಜಿಎಸ್​ಟಿ ವಿಧಿಸುವುದಾಗಿ ಜಿಎಸ್​ಟಿ ಸಮಿತಿ ಸ್ಪಷ್ಟಪಡಿಸಿದೆ.

  See also  ಕೆಎಲ್‌ಇ ಶಾಲೆಯಲ್ಲಿ ಸಂಕ್ರಾಂತಿ ಸಡಗರ

  ಜಿಒಎಂಗೆ ಬಿಹಾರ ಡಿಸಿಎಂ: ಬಿಹಾರ ಡಿಸಿಎಂ ಸಾಮ್ರಾಟ್ ಚೌಧರಿ ಅವರನ್ನು ದರ ಸ್ಥಿರೀಕರಣ ಕುರಿತ ಸಚಿವರ ಗುಂಪಿನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

  ಮಂತ್ರಿಗಳ ಮನವಿ: ವಿವಿಧ ರಾಜ್ಯಗಳ ಮಂತ್ರಿಗಳು ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ಹಣಕಾಸು ಸಹಾಯದ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಮತ್ತಷ್ಟು ಸುಧಾರಣಾ ಕ್ರಮಗಳನ್ನು ಕೂಡ ಪ್ರಸ್ತಾಪಿಸಿದರು. ಮುಂಬರುವ ಬಜೆಟ್​ನಲ್ಲಿ ತಮ್ಮ ರಾಜ್ಯಗಳಿಗೆ ಅನುಕೂಲ ಆಗಬಲ್ಲ ಕೆಲ ಮನವಿಗಳನ್ನೂ ಸಲ್ಲಿಸಿದರು.

  ಆಧಾರ್ ಬಯೋಮೆಟ್ರಿಕ್! : ದೇಶಾದ್ಯಂತ ಆಧಾರ್ ಬಯೋಮೆಟ್ರಿಕ್ ಆಧಾರಿತ ವ್ಯಕ್ತಿಗಳ ಆಧಾರ್ ದೃಢೀಕರಣ ಜಾರಿ ಮಾಡುವ ಉದ್ದೇಶವಿದೆ. ಇದರಿಂದ ಅಕ್ರಮ ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ಳನ್ನು ತಪ್ಪಿಸಲು ಸರ್ಕಾರಕ್ಕೆ ಸಹಾಯವಾಗಲಿದೆ ಎಂದು ನಿರ್ಮಲಾ ವಿವರಿಸಿದರು. ಸರ್ಕಾರಿ ವ್ಯಾಜ್ಯಗಳನ್ನು ಕಡಿಮೆ ಮಾಡಲು, ಜಿಎಸ್​ಟಿ ಸಮಿತಿಯು ಅಪೆಲೆಟ್ ಟ್ರಿಬ್ಯುನಲ್​ಗೆ ರೂ. 20 ಲಕ್ಷ, ಹೈಕೋರ್ಟ್​ಗೆ ರೂ. 1 ಕೋಟಿ ಮತ್ತು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ರೂ. 2 ಕೋಟಿಯ ವಿತ್ತೀಯ ಮಿತಿಯನ್ನು ಶಿಫಾರಸು ಮಾಡಿದೆ.

  ಜಿಎಸ್​ಟಿ ವ್ಯಾಪ್ತಿಗೆ ತೈಲ? : ತೈಲವನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಪ್ರಶ್ನೆಗೂ ನಿರ್ಮಲಾ ಪ್ರತಿಕ್ರಿಯಿಸಿದರು. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಉದ್ದೇಶಿಸಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ಸೇರಿಸಬೇಕು ಎಂಬ ಅಭಿಪ್ರಾಯವಿದೆ. ಏಲ್ಲಾ ರಾಜ್ಯಗಳು ಒಟ್ಟಾಗಿ ಸೇರಿ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿಗೆ ಸೇರಿಸಬೇಕು ಎಂಬ ಬಗ್ಗೆ ತಮ್ಮ ತೀರ್ಮಾನ ಪ್ರಕಟಿಸಬೇಕು. ಜಿಎಸ್​ಟಿ ವ್ಯಾಪ್ತಿಗೆ ತರುವುದು ಕೇಂದ್ರದ ನಿಲುವು ಕೂಡ ಹೌದೆಂದರು.

  ರೈಲ್ವೆಯಲ್ಲೂ ಅನುಕೂಲ : ಇನ್ನು ಭಾರತದ ಬಡ, ಮಧ್ಯಮ ವರ್ಗ ಹೆಚ್ಚು ಅವಲಂಬಿಸಿರುವ ರೈಲ್ವೆ ವಲಯದಲ್ಲೂ ಹಲವು ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಭಾರತೀಯ ರೈಲ್ವೆ ಸಾಮಾನ್ಯ ಜನರಿಗೆ ಒದಗಿಸುವ ಸೇವೆಗಳಾದ ಪ್ಲಾಟ್​ಫಾಮ್ರ್ ಟಿಕೆಟ್​ಗಳ ಮಾರಾಟ, ವಿಶ್ರಾಂತಿ ಕೊಠಡಿಗಳ ಸೌಲಭ್ಯ, ಕಾಯುವ ಕೊಠಡಿಗಳು, ಕ್ಲಾಕ್​ರೂಮ್ ಸೇವೆ ಹಾಗೂ ಬ್ಯಾಟರಿ ಚಾಲಿತ ಕಾರ್ ಸೇವೆಗಳಿಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲು ಸಮಿತಿ ನಿರ್ಧರಿಸಿದೆ.

  ಲೋಕಸಭೆ ಚುನಾವಣೆ: ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ತಪ್ಪಾಯಿತು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts