More

    ಜಿಎಸ್​ಟಿ ನಷ್ಟಭರ್ತಿಗೆ ಆರ್​ಬಿಐನಿಂದ ಸಾಲ: ಕೇಂದ್ರ ಕೊಟ್ಟ ಮೊದಲ ಆಯ್ಕೆಗೆ ಜೈಕಾರ

    ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ನಷ್ಟದಿಂದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ ನೀಡಿದ ಎರಡು ಅವಕಾಶಗಳ ಪೈಕಿ ರಾಜ್ಯ ಸರ್ಕಾರ ಆರ್​ಬಿಐನಿಂದ ಸಾಲ ಪಡೆಯುವ ಮೊದಲನೇ ಆಯ್ಕೆಗೆ ಸಮ್ಮತಿ ಸೂಚಿಸಿದೆ.

    ಜಿಎಸ್​ಟಿ ನಷ್ಟ ತುಂಬಿ ಕೊಡುವುದು ಅಸಾಧ್ಯವೆಂದು ಕೈಚೆಲ್ಲಿರುವ ಕೇಂದ್ರ ಸರ್ಕಾರ ಎರಡು ಮಾದರಿಯಲ್ಲಿ ಸಾಲ ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಿದೆ. ಆದರೆ 7 ರಾಜ್ಯಗಳು ಈ ಪ್ರಸ್ತಾವನೆ ತಿರಸ್ಕರಿಸಿ, ಕೇಂದ್ರವೇ ಸಾಲ ಮಾಡಿ ನಷ್ಟ ಭರ್ತಿ ಮಾಡಿ ಕೊಡಲಿ ಎಂದು ಪಟ್ಟುಹಿಡಿದಿವೆ. ಈ ಸಂದರ್ಭದಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿ ತನ್ನ ನಿರ್ಧಾರವನ್ನು ಅಂತಿಮಗೊಳಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತನ್ನ ಆಯ್ಕೆ ಹಾಗೂ ಅದಕ್ಕೆ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿದೆ.

    ತೀರ್ವನದ ವಿವರಣೆ: 41ನೇ 1671 ಕೌನ್ಸಿಲ್ ಸಭೆ ಅನುಸಾರ ವಾಗಿ, ಜಿಎಸ್​ಟಿ ಪರಿಹಾರದ ಬಗ್ಗೆ ರಾಜ್ಯಗಳು ತಮ್ಮ ಆದ್ಯತೆ, ಅಭಿಪ್ರಾಯ ನೀಡಲು ಅನುವು ಮಾಡಿಕೊಡುವ ಉದ್ದೇಶದಿಂದ ಕೇಂದ್ರ 2 ಆಯ್ಕೆಗಳನ್ನು ನೀಡಿತ್ತು. ಜಿಎಸ್​ಟಿ ಅನುಷ್ಠಾನದಿಂದ ಉಂಟಾಗುವ ಕೊರತೆ ನೀಗಿಸಿಕೊಳ್ಳಲು (ಆರ್​ಬಿಐ ಮೂಲಕ) ಸಾಲ ಮಾಡುವುದು ಮೊದಲನೆಯದ್ದಾಗಿತ್ತು. ಕರೊನಾದಿಂದ ಉಂಟಾದ ನಷ್ಟ ಸೇರಿ ಜಿಎಸ್​ಟಿ ಕೊರತೆ ನೀಗಿಸಿಕೊಳ್ಳಲು (ಮಾರುಕಟ್ಟೆಯಿಂದ) ಸಾಲ ಮಾಡುವ ಎರಡನೇ ಆಯ್ಕೆ ನೀಡಲಾಗಿತ್ತು. ಈ ಆಯ್ಕೆಗಳ ಪ್ರಕಾರ ಪರಿಹಾರ, ಸಾಲ, ಮರುಪಾವತಿ ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ನೀಡಲಾಗಿತ್ತು.

    ಜಿಎಸ್​ಟಿ ಅಡಿಯಲ್ಲಿ ಪಾವತಿಸಬೇಕಾದ ಸಂಪೂರ್ಣ ಪರಿಹಾರದ ಅರ್ಹತೆಗೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರ್ಕಾರವು ಗುರುತಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.

    ಆಯ್ಕೆ-2ರಲ್ಲೇನಿತ್ತು?

    ಕರ್ನಾಟಕ ಒಟ್ಟು 25,508 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಿರುತ್ತದೆ. ಇದರಲ್ಲಿ 6,965 ಕೋಟಿ ರೂ. ಸಂಗ್ರಹಿಸಿದ ಸೆಸ್​ನಿಂದ ಬರುತ್ತದೆ. ಉಳಿದ ಮೊತ್ತವಾದ 18,543 ಕೋಟಿ ರೂ.ಗಳಿಗೆ ಮಾರುಕಟ್ಟೆ ಮೂಲಕ ಸಾಲ ಪಡೆಯಲು ಅವಕಾಶವಿರುತ್ತದೆ. ಆದರೆ, ಜಿಎಸ್​ಡಿಪಿಯ ಶೇ.1ರಷ್ಟು (ರೂ .18,036 ಕೋಟಿ) ಯಾವುದೇ ಷರತ್ತಿಗೆ ಒಳಪಡದೇ ಇರುವ ಸಾಲ ಪಡೆಯಲು ರಾಜ್ಯಕ್ಕೆ ಪ್ರತ್ಯೇಕವಾಗಿ ಅವಕಾಶ ಇರುವುದಿಲ್ಲ. ಇದರಿಂದಾಗಿ ರಾಜ್ಯವು ಪಡೆಯಬಹುದಾದಂತಹ ಸಾಲದ ಮೊತ್ತ ಗಣನೀಯವಾಗಿ ಅಂದರೆ 10,817 ಕೋಟಿ ರೂ.ಗಳವರೆಗೂ ಕಡಿಮೆಯಾಗುವುದು. ಇದರ ಜತೆಗೆ ಆಯ್ಕೆ – 2ರ ಅಡಿಯಲ್ಲಿ ಮಾರುಕಟ್ಟೆ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯವು ತನ್ನದೇ ಆದ ಸಂಪನ್ಮೂಲಗಳಿಂದ ಪಾವತಿಸಬೇಕಾಗುತ್ತದೆ. ಈ ಎರಡೂ ಆಯ್ಕೆಗಳ ಮೌಲ್ಯಮಾಪನದ ನಂತರ, ಆಯ್ಕೆ 1ರಿಂದ ರಾಜ್ಯದ ಹಣಕಾಸುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಭಾವಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಆಯ್ಕೆ 1ಕ್ಕೆ ತನ್ನ ಆದ್ಯತೆಯನ್ನು ಕೇಂದ್ರಕ್ಕೆ ತಿಳಿಸಲಿದೆ. ಇದು ಪ್ರಸ್ತುತ ಹಣಕಾಸು ವರ್ಷದಲ್ಲಿ ತನ್ನ ಆದಾಯವನ್ನು ಹೆಚ್ಚಿಸಲು ರಾಜ್ಯಕ್ಕೆ ಸಹಾಯವಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಲಾಗಿದೆ.

    ನಿರ್ಧಾರಕ್ಕೇನು ಕಾರಣ?

    ರಾಜ್ಯ ಸರ್ಕಾರ ಮೊದಲನೇ ಆಯ್ಕೆಗೆ ಸಮ್ಮತಿಸಿರುವುದರಿಂದ ರಿಸರ್ವ್ ಬ್ಯಾಂಕ್ ಮೂಲಕ ಸಲೀಸಾಗಿ ಸಾಲ ಪಡೆದುಕೊಳ್ಳಬಹುದಾಗಿದೆ. ಜತೆಗೆ ಬಡ್ಡಿ ಅಸಲು ಪಾವತಿಯ ತಲೆ ಬಿಸಿ ಇರುವುದಿಲ್ಲ. ಅದನ್ನು ಕೇಂದ್ರವೇ ಪಾವತಿಸಲಿದೆ. ಕೇಂದ್ರದಿಂದ ಬರಬೇಕಾದ ಪಾಲು ಕಡಿಮೆಯಾಗಬಹುದು. ಆದರೂ ಸಹ ಜಿಎಸ್​ಡಿಪಿಯ ಶೇ.1ರಷ್ಟು ಸಾಲವನ್ನು ಸ್ವತಃ ತಾನೇ ಪಡೆಯುವ ಅವಕಾಶವನ್ನು ಮುಕ್ತವಾಗಿರಿಸಿಕೊಂಡಂತಾಗಿದೆ.

    ರಾಜ್ಯದ ಜಿಎಸ್​ಟಿ ಪಾಲು ಮತ್ತು ಅನುದಾನವನ್ನು ಕೇಂದ್ರದಿಂದ ಹೇಗೆ ಪಡೆಯಬೇಕೆಂಬುದು ನಮಗೆ ಗೊತ್ತಿದೆ. ಹಿಂದೆ ಸುಸ್ಥಿತಿಯಲ್ಲಿದ್ದಾಗ ಕಾಂಗ್ರೆಸ್ ನೆರವು ನೀಡುತ್ತಿದ್ದ ವೈಖರಿಯ ಅರಿವೂ ಇದೆ. ಕಾಂಗ್ರೆಸ್​ಗೆ ಮೊದಲಿನಿಂದಲೂ ಘರ್ಷಣೆಯಲ್ಲಿ ಹೆಚ್ಚಿನ ಆಸಕ್ತಿ. ಈಗಲೂ ಇದನ್ನೇ ಬಯಸುತ್ತಿದೆ. ಕರೊನಾ ಸೋಂಕಿನಿಂದ ದೇಶ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲೂ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ತಿಳಿದ ವಿಚಾರ. ಈ ವೇಳೆ ರಾಜಕೀಯ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ.
    | ಡಾ ಕೆ.ಸುಧಾಕರ್, ಸಚಿವ
    ಕೇಂದ್ರ ನೀಡಿದ್ದ 2 ಆಯ್ಕೆಗಳಲ್ಲಿ ಮೊದಲನೆಯದನ್ನು ಆರಿಸಿಕೊಂಡಿದ್ದೇವೆ. ಇದರಿಂದ ಅಸಲು ಮತ್ತು ಬಡ್ಡಿಯನ್ನು ಮರುಪಾವತಿ ಇಲ್ಲದೆಯೇ ಕೇಂದ್ರ ಸರ್ಕಾರ ಸೆಸ್ ಮೂಲಕ ತುಂಬಿಕೊಡುತ್ತದೆ. ರಾಜ್ಯಕ್ಕೂ ಯಾವುದೇ ರೀತಿ ಆರ್ಥಿಕ ಭಾರವಾಗುವುದಿಲ್ಲ. ಇದು ರಾಜ್ಯದ ಹಿತ ಮತ್ತು ಹಾಗೂ ಆರ್ಥಿಕ ಸ್ಥಿರತೆಗೆ ಸಹಕಾರಿ.
    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಸಿಗುವುದೆಷ್ಟು?

    ಆಯ್ಕೆ 1ರ ಅಡಿ ಕರ್ನಾಟಕ ಒಟ್ಟು 18,289 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಿರುತ್ತದೆ. ಇದರಲ್ಲಿ 6,965 ಕೋಟಿ ರೂ. ಸಂಗ್ರಹಿಸಿದ ಸೆಸ್​ನಿಂದ ಬರುತ್ತದೆ. ಉಳಿದ 11,324 ಕೋಟಿ ರೂ.ಗಳಿಗೆ ಕರ್ನಾಟಕವು ವಿಶೇಷ ಮಾರ್ಗದಲ್ಲಿ ಸಾಲ ಪಡೆಯಲು ಅನುವು ಮಾಡಿಕೊಡಲಾಗಿದೆ. ಅಲ್ಲದೆ, ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯ ಸಂಪೂರ್ಣ ಹೊರೆಯನ್ನು (ಕೇಂದ್ರದಿಂದ) ಪೂರೈಸಲಾಗುವುದು. ಜತೆಗೆ ಜಿಎಸ್​ಡಿಪಿಯ (ರಾಜ್ಯದ ಒಟ್ಟಾರೆ ಉತ್ಪನ್ನ ) ಶೇ.1 (ರೂ.18,036 ಕೋಟಿ) ಹೆಚ್ಚುವರಿ ಸಾಲವು ಯಾವುದೇ ಷರತ್ತಿಗೆ ಒಳಪಡದೆ ಲಭ್ಯವಿರುತ್ತದೆ. ಮೇ 17ರ ಕೇಂದ್ರದ ಆದೇಶದ ಪ್ರಕಾರ ಸಮಯದೊಳಗೆ ಕೆಲವು ಸುಧಾರಣೆ ಮಾಡಿದ್ದಲ್ಲಿ ಹೆಚ್ಚುವರಿಯಾಗಿ ಜಿಎಸ್​ಡಿಪಿಯ ಶೇ.1 ಸಾಲ ಮಾಡಬಹುದು. ಅಗತ್ಯವಿದ್ದರೆ ಹೆಚ್ಚುವರಿ ಸಾಲಗಳನ್ನು ಮುಂದಿನ ಹಣಕಾಸು ವರ್ಷಕ್ಕೆ (ಕ್ಯಾರಿ ಫಾರ್ವರ್ಡ್) ಸಹ ವರ್ಗಾಯಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts