ಹೊಸ ವರ್ಷಕ್ಕೆ ಟಿವಿ, ಎಸಿ ಅಗ್ಗ

ನವದೆಹಲಿ: ಹೊಸ ವರ್ಷಕ್ಕೂ ಮುನ್ನ ಟಿವಿ, ಏರ್​ಕಂಡೀಷನರ್, ಡಿಜಿಟಲ್ ಕ್ಯಾಮರಾ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳು ಅಗ್ಗವಾಗುವ ಸುಳಿವು ಸಿಕ್ಕಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಡಿ.22ರಂದು ನಡೆಯಲಿರುವ 31ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಗರಿಷ್ಠ ತೆರಿಗೆ ಅಡಿ ಬರುವ ಹಲವು ಉತ್ಪನ್ನಗಳನ್ನು ಶೇ.28ರಿಂದ ಶೇ.18ರ ಸ್ಲ್ಯಾಬ್​ಗೆ ತರುವ ಸಾಧ್ಯತೆ ಇದೆ. ಹೀಗಾದಲ್ಲಿ ನಿರೀಕ್ಷೆಯಂತೆ ಇನ್ನು ಜಿಎಸ್​ಟಿಯಲ್ಲಿ ಮೂರು ತೆರಿಗೆ ಸ್ಲ್ಯಾಬ್​ಗಳಷ್ಟೇ ಉಳಿಯಲಿವೆ. ತೆರಿಗೆ ಇಳಿಕೆ ಸಿಮೆಂಟ್, ಆಟೋಮೊಬೈಲ್ ಮತ್ತು ಕೆಲವು ನಿರ್ದಿಷ್ಟ ಸರಕುಗಳಿಗೆ ಸೀಮಿತವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

# 7.76 ಲಕ್ಷ ಕೋಟಿ ರೂ. ಏಪ್ರಿಲ್​ನಿಂದ ನವೆಂಬರ್​ವರೆಗೆ ಸಂಗ್ರಹವಾಗಿರುವ ಜಿಎಸ್​ಟಿ ಮೊತ್ತ

# 1011 ಸಾವಿರ ಕೋಟಿ ರೂ. ಜಿಎಸ್​ಟಿ ಗರಿಷ್ಠ ಮಿತಿ ಇಳಿಕೆಯಿಂದ ಸರ್ಕಾರದ ಬೊಕ್ಕಸಕ್ಕಾಗುವ ನಷ್ಟ

ಜಿಎಸ್​ಟಿ ವ್ಯಾಪ್ತಿಗೆ ತೈಲ?

ಸಚಿವ ಜೇಟ್ಲಿ ಕಳೆದು ತಿಂಗಳು ಹೇಳಿದ್ದಂತೆ ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ತರುವುದು ಈ ಬಾರಿ ಸಭೆಯ ಪ್ರಮುಖ ಅಜೆಂಡಾ ಆಗಿರಲಿದೆ. ಈ ಸಂಬಂಧ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲ ರಾಜ್ಯಗಳ ಅಭಿಪ್ರಾಯವನ್ನು ದಾಖಲಿಸುವ ಅಗತ್ಯವಿದೆ ಎಂದು ಜೇಟ್ಲಿ ಹೇಳಿದ್ದರು.

ಕಾರಣ ಏನು?:

# ಲೋಕಸಭೆ ಚುನಾವಣೆಗೆ 4 ತಿಂಗಳಷ್ಟೇ ಬಾಕಿ ಇರುವುದರಿಂದ ಜನಸಾಮಾನ್ಯರ ವಿಶ್ವಾಸ ಗಳಿಸಲು ಕೇಂದ್ರ ಸರ್ಕಾರ ಜಿಎಸ್​ಟಿ ಪರಿಷ್ಕರಣೆಗೆ ಮುಂದಾಗಿರುವುದಾಗಿ ಹೇಳಲಾಗುತ್ತಿದೆ.

# 2018-19ನೇ ಸಾಲಿನ 12 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ ಗುರಿ ತಲುಪಲು ಮಾಸಿಕ ಸರಾಸರಿ ತೆರಿಗೆ ಸಂಗ್ರಹ 1 ಲಕ್ಷ ಕೋಟಿ ರೂ. ದಾಟಬೇಕು. ಹೀಗಾಗಿ ಜಿಎಸ್​ಟಿ ಗರಿಷ್ಠ ಮಿತಿಯನ್ನು ಶೇ. 18ಕ್ಕೆ ಇಳಿಸುವ ಚಿಂತನೆ ನಡೆದಿದೆ.

ಐಷಾರಾಮಿ ವಸ್ತು ಹೊರತಾಗಿ ಬಹುತೇಕ ಉತ್ಪನ್ನಗಳನ್ನು ಶೇ. 28 ಸ್ಲ್ಯಾಬ್​ನಿಂದ ಹೊರಗಿಡುವುದು ಈ ಬಾರಿಯ ಸಭೆಯಲ್ಲಿ ಚರ್ಚೆಯಾಗಲಿದೆ. ಕೆಲವು ಸರಕುಗಳನ್ನು ಶೇ. 18ರಿಂದ ಶೇ. 5ರ ಸ್ಲ್ಯಾಬ್​ಗೆ ತರಲಾಗುವುದು.

– ಹಿರಿಯ ಸರ್ಕಾರಿ ಅಧಿಕಾರಿ

ಗರಿಷ್ಠ ಸ್ಲ್ಯಾಬ್​ನಲ್ಲಿ 28 ಸರಕುಗಳು

2017ರ ಜು.1 ರಂದು ದೇಶಾದ್ಯಂತ ಜಿಎಸ್​ಟಿ ಜಾರಿಯಾದಾಗ ಗರಿಷ್ಠ ಮಿತಿ ಸ್ಲ್ಯಾಬ್​ನಡಿ(ಶೇ. 28ರಲ್ಲಿ )ಒಟ್ಟು 226 ವಸ್ತುಗಳಿದ್ದವು. ಕ್ರಮೇಣ ಜಿಎಸ್​ಟಿ ಸಮಿತಿ ಸಭೆಗಳಲ್ಲಿ ರಾಜ್ಯ ಸರ್ಕಾರಗಳ ಸಲಹೆ ಮೇರೆಗೆ ನಡೆದ ತೆರಿಗೆ ಪರಿಷ್ಕರಣೆಯಿಂದಾಗಿ ಪ್ರಸ್ತುತ 35 ಐಷಾರಾಮಿ ಮತ್ತು ಸರ್ಕಾರಕ್ಕೆ ಅಧಿಕ ಆದಾಯ ತಂದುಕೊಡುವ 35 ಸರಕುಗಳಷ್ಟೇ ಶೇ.28 ಸ್ಲ್ಯಾಬ್​ನಲ್ಲಿ ಉಳಿದುಕೊಂಡಿವೆ.