More

  ಇಂದು ಜಿಎಸ್​ಟಿ ಮಂಡಳಿ ಸಭೆ

  ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 53ನೇ ಸಭೆಯು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇಂದು (ಶನಿವಾರ) ನಡೆಯಲಿದೆ. ಕೇಂದ್ರದಲ್ಲಿ ಎನ್​ಡಿಎ ಮೂರನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದ್ದು, ವಿವಿಧ ವಲಯಗಳು ವಿನಾಯಿತಿಯತ್ತ ದೃಷ್ಟಿ ನೆಟ್ಟಿವೆ. ಜುಲೈನಲ್ಲಿ ಈ ಹಣಕಾಸು ವರ್ಷದ (2024-25) ಪೂರ್ಣಪ್ರಮಾಣದ ಬಜೆಟ್ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಸಭೆ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. 2023ರ ಅಕ್ಟೋಬರ್​ನಲ್ಲಿ ಜಿಎಸ್​ಟಿ ಮಂಡಳಿಯ 52ನೇ ಸಭೆ ನಡೆದಿತ್ತು. ಬರೋಬ್ಬರಿ 8 ತಿಂಗಳುಗಳ ನಂತರ ಈಗ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆದ್ಯತೆಯ ವಿಷಯಗಳನ್ನು, ಸವಾಲುಗಳನ್ನು ಪರಿಗಣಿಸಿ, ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ.

  ಕಳೆದ ಕೆಲ ದಿನಗಳಿಂದ ನಿರ್ಮಲಾ ಸೀತಾರಾಮನ್ ವಿವಿಧ ರಂಗಗಳ ತಜ್ಞರೊಂದಿಗೆ, ಅರ್ಥಶಾಸ್ತ್ರಜ್ಞರೊಂದಿಗೆ ಬಜೆಟ್​ಪೂರ್ವ ಸರಣಿ ಸಭೆಗಳನ್ನು ನಡೆಸುತ್ತಿದ್ದು, ನಿರೀಕ್ಷೆ, ಆಯಾ ವಲಯದ ಬೇಡಿಕೆಗಳಿಗೆ ಕಿವಿಯಾಗಿದ್ದಾರೆ. ಇಂದಿನ ಸಭೆಯಲ್ಲಿ ವಿವಿಧ ರಾಜ್ಯಗಳ ಹಣಕಾಸು ಸಚಿವರಿಂದ ಒಳನೋಟ ಪಡೆಯುವ ನಿರೀಕ್ಷೆ ಇದೆ.

  ಆನ್​ಲೈನ್ ಗೇಮಿಂಗ್, ಕುದುರೆ ಜೂಜು ಹಾಗೂ ಕ್ಯಾಸಿನೋ ಆಟಗಳಿಗೆ ಶೇಕಡ 28ರಷ್ಟು ಜಿಎಸ್​ಟಿ ವಿಧಿಸುವ ಬಗ್ಗೆ ಕಳೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದರ ಬಗ್ಗೆ ಪುನರ್ ವಿಮರ್ಶೆ ನಡೆಯುವ ಸಾಯತೆಯೂ ಇದೆ. ಕೈಗಾರಿಕಾ ವಲಯ ತೆರಿಗೆ ಹೊರೆ ತಗ್ಗುವ ನಿರೀಕ್ಷೆ ಇರಿಸಿಕೊಂಡಿದೆ. ಆನ್​ಲೈನ್ ಗೇಮಿಂಗ್ ಮೇಲಿನ ತೆರಿಗೆ ಮತ್ತು ರಸಗೊಬ್ಬರದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಸಂಸದೀಯ ಸ್ಥಾಯಿ ಸಮಿತಿ ಮಾಡಿದ್ದ ಶಿಫಾರಸು ಸೇರಿದಂತೆ ವಿವಿಧ ವಿಷಯಗಳ ಕುರಿತು ರ್ಚಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

  ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ?

  ಪೆಟ್ರೋಲ್ ಮತ್ತು ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಕುರಿತಂತೆ ಈ ಹಿಂದೆಯೂ ಹಲವು ಬಾರಿ ಚಿಂತನೆ ನಡೆದಿದೆ. ಆದರೆ, ಇದನ್ನು ಕಾರ್ಯ ರೂಪಕ್ಕೆ ತರುವುದು ಸುಲಭಸಾಧ್ಯವಲ್ಲ. ರಾಜ್ಯಗಳ ನಡುವೆ ಸಹಮತ ಏರ್ಪಡುವುದು ಸವಾಲಾಗಿ ಪರಿಣಮಿಸಿದೆ. ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗುತ್ತದೆ. ಆದರೆ, ರಾಜ್ಯ ಸರ್ಕಾರಗಳು ಇದನ್ನೇ ಆದಾಯದ ಮೂಲವಾಗಿಸಿಕೊಂಡಿವೆ. ಕರ್ನಾಟಕದಲ್ಲಂತೂ ಕೆಲ ದಿನಗಳ ಹಿಂದಷ್ಟೆ ದರ ಏರಿಕೆ ಮಾಡಲಾಗಿದೆ. ಹೀಗಾಗಿ, ಇಷ್ಟರಲ್ಲೇ ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಬರುವುದು ಕಷ್ಟಕರ ಎಂಬುದು ತಜ್ಞರ ಅಭಿಪ್ರಾಯ. ಆದರೆ, ಜಿಎಸ್​ಟಿ ವ್ಯಾಪ್ತಿಗೆ ತಂದರೆ ಆಗುವ ಲಾಭ-ನಷ್ಟಗಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

  See also  ಎಸ್‌ಡಿಎಂ ಆಸ್ಪತ್ರೆಯಲ್ಲಿ ಚರ್ಮರೋಗ ತಪಾಸಣೆ

  ಸಂಚಾಲಕರಾಗಿ ಸಾಮ್ರಾಟ್ ಚೌಧರಿ ನೇಮಕ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳಗೊಳಿಸಲು ರಚಿಸಿರುವ (ಜಿಎಸ್​ಟಿ ದರ ತರ್ಕಬದ್ಧಗೊಳಿಸುವಿಕೆ) ಏಳು ಸಚಿವರನ್ನು ಒಳಗೊಂಡ ಸಮಿತಿಯನ್ನು ಪುನರ್ ರಚಿಸಲಾಗಿದೆ. ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಈ ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಉತ್ತರ ಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ಗೋವಾ ಸಾರಿಗೆ ಸಚಿವ ಮೌವಿನ್ ಗೊಡಿನ್ಹೋ, ರಾಜಸ್ಥಾನ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಸಚಿವ ಗಜೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಕೇರಳದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಈ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ. ಜಿಎಸ್​ಟಿ ವಿನಾಯಿತಿ ಪಟ್ಟಿಯನ್ನು ಪರಿಶೀಲಿಸುವ, ಜಿಎಸ್​ಟಿಯಿಂದ ಆದಾಯವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ.

  ಅದಾನಿ ಪೋರ್ಟ್ಸ್ ನಾಳೆ ಸೆನ್ಸೆಕ್ಸ್​ಗೆ ಸೇರ್ಪಡೆ

  ಮುಂಬೈ: ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್​ನ ಪ್ರಮುಖ ಕಂಪನಿ ಅದಾನಿ ಪೋರ್ಟ್ಸ್ ಷೇರುಗಳು ಸೋಮವಾರ (ಜೂನ್ 24) ಸೆನ್ಸೆಕ್ಸ್ 30 ಷೇರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿವೆ. ಅಲ್ಲದೆ, ಮಾಹಿತಿ-ತಂತ್ರಜ್ಞಾನ (ಐಟಿ) ಕಂಪನಿ ವಿಪ್ರೋ ಸೆನ್ಸೆಕ್ಸ್ 30 ಷೇರುಗಳ ಸೂಚ್ಯಂಕದೊಂದಿಗೆ ಹೊರಗುಳಿಯಲಿದೆ. ಕಾಲಕಾಲಕ್ಕೆ 30 ಷೇರುಗಳ ಸೆನ್ಸೆಕ್ಸ್ ಇಂಡೆಕ್ಸ್​ನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅದರ ಪ್ರಕಾರ ಈ ಬದಲಾವಣೆ ಮಾಡಲಾಗಿದೆ. ಅದಾನಿ ಪೋರ್ಟ್ಸ್ ಸೆನ್ಸೆಕ್ಸ್​ಗೆ ಸೇರ್ಪಡೆಗೊಳ್ಳುತ್ತಿರುವ ಅದಾನಿ ಸಮೂಹದ ಮೊದಲ ಕಂಪನಿಯಾಗಿದೆ. ಅದಾನಿ ಗ್ರೂಪ್​ನ ಪ್ರಮುಖ ಕಂಪನಿಗಳಾದ ಅದಾನಿ ಎಂಟರ್​ಪ್ರೖೆಸಸ್ ಮತ್ತು ಅದಾನಿ ಪೋರ್ಟ್ಸ್ ಎರಡನ್ನೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್​ಎಸ್​ಇ) ನಿಫ್ಟಿ 50ರಲ್ಲಿ ಸೇರಿಸಲಾಗಿದೆ. ಅದಾನಿ ಪೋರ್ಟ್ಸ್ ದೇಶದ ಪ್ರಮುಖ 13 ಬಂದರುಗಳನ್ನು ನಿರ್ವಹಣೆ ಮಾಡುತ್ತಿದೆ.

  See also  ಈ ದೇವರ ದರ್ಶನ ಪಡೆದರೆ ಮಹಿಳೆಯರು ಕಲ್ಲಾಗ್ತಾರಂತೆ!; ಇನ್ನು 58 ದಿನ ಎಲ್ಲ ಭಕ್ತರಿಗೂ ಪ್ರವೇಶ ನಿಷೇಧ; ಕಾರಣ...

  ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಳ

  ನವದೆಹಲಿ: ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತ ಸಾಗಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಗುರುವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಇದನ್ನು ಪುಷ್ಟೀಕರಿಸಿವೆ. 2024ರ ಏಪ್ರಿಲ್ ತಿಂಗಳಲ್ಲಿ 8.87 ಲಕ್ಷ ಸದಸ್ಯರು ಇಪಿಎಫ್​ಒಗೆ ಸೇರಿದ್ದಾರೆ. ಹೊಸ ಸದಸ್ಯರಲ್ಲಿ 18ರಿಂದ 25 ವರ್ಷದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏಪ್ರಿಲ್​ನ ಒಟ್ಟು ಹೊಸ ಸದಸ್ಯರ ಪೈಕಿ ಶೇಕಡ 55.50ರಷ್ಟಿದ್ದಾರೆ. ಅಲ್ಲದೆ, 8.87 ಲಕ್ಷ ಹೊಸ ಸದಸ್ಯರ ಪೈಕಿ 2.49 ಲಕ್ಷ ಸದಸ್ಯರು ಮಹಿಳೆಯರು.

  ಸಾಧನಾಪಥ: 2017 ಜುಲೈ 1ರಂದು ಪ್ರಾರಂಭವಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ತನ್ನ 7ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದು 1.46 ಕೋಟಿಗೂ ಹೆಚ್ಚು ನೋಂದಣಿಗ ಳೊಂದಿಗೆ ಪರೋಕ್ಷ ತೆರಿಗೆಗಳಿಗೆ ವಿಶ್ವದ ಅತಿದೊಡ್ಡ ವೇದಿಕೆಯಾಗಿದೆ.

  ಪ್ರಮುಖ ನಿರೀಕ್ಷೆಗಳು

  . 1.5 ಕೋಟಿ ರೂಪಾಯಿವರೆಗಿನ ವಹಿವಾಟು ಹೊಂದಿರುವ ಸಂಸ್ಥೆ/ಕಂಪನಿಗಳಿಗೆ ಜಿಎಸ್​ಟಿ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದು.

  . ಸ್ಲ್ಯಾಬ್​ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು. ಪ್ರಸ್ತುತ ಐದು ಸ್ಲ್ಯಾಬ್​ಗಳಿವೆ.

  . ಜಿಎಸ್​ಟಿಯನ್ನು ಹೆಚ್ಚು ಪರಿಣಾಮಕಾರಿ, ವ್ಯಾಪಾರ-ಸ್ನೇಹಿ ಮಾಡುವುದು ಮತ್ತು ರಾಜ್ಯವಾರು ನೋಂದಣಿಯನ್ನು ತೆಗೆದುಹಾಕುವುದು.

  . ಮೂಲ ಆಹಾರ ಪದಾರ್ಥಗಳು, ಆರೋಗ್ಯ ಸೇವೆಗಳು ಮತ್ತು ಶೈಕ್ಷಣಿಕ ಸಾಮಗ್ರಿಗಳ ಮೇಲಿನ ಜಿಎಸ್​ಟಿಯನ್ನು ಕಡಿಮೆ ಮಾಡುವುದು.

  ರೇಣುಕಾಸ್ವಾಮಿ ಕೊಲೆ ಪ್ರಕರಣ: 40 ಲಕ್ಷ ರೂಪಾಯಿ ಕೈ ಸಾಲ ಕೊಟ್ಟ ಮೋಹನ್‌ರಾಜ್‌ ನಾಪತ್ತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts