ಜಿಸ್ಯಾಟ್​-29 ಉಪಗ್ರಹ ಉಡಾವಣೆ ಯಶಸ್ವಿ

ಶ್ರೀಹರಿಕೋಟಾ: ಸಂವಹನ ಕ್ಷೇತ್ರಕ್ಕೆ ಕೊಡುಗೆ ನೀಡುವ ಜಿಸ್ಯಾಟ್​-29 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ 5.08 ಕ್ಕೆ ಜಿಎಸ್​ಎಲ್​ವಿ ಮಾರ್ಕ್​III – ಡಿ2 ರಾಕೆಟ್​ 3,423 ಕೆ.ಜಿ. ತೂಕದ ಜಿಸ್ಯಾಟ್​-29 ಉಪಗ್ರಹವನ್ನು ನಿಗದಿತ ಭೂಸ್ಥಿರ ಕಕ್ಷೆಗೆ ತಲುಪಿಸಿದೆ.

ಜಿಸ್ಯಾಟ್​-9 ಉಪಗ್ರಹ Ka ಮತ್ತು Ku ಬ್ಯಾಂಡ್​ ಟ್ರಾನ್ಸ್​ಪಾಂಡರ್​ಗಳನ್ನು ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳು ಸೇರಿದಂತೆ ಸಂವಹನ ಉದ್ದೇಶಕ್ಕೆ ಈ ಉಪಗ್ರಹ ಬಳಕೆಯಾಗಲಿದೆ. ಈ ಉಪಗ್ರಹದಿಂದ ದೇಶದ ಮೂಲೆ ಮೂಲೆಗೆ ಹೈಸ್ಪೀಡ್​ ಇಂಟರ್​ನೆಟ್​ ಸಂಪರ್ಕವನ್ನು ಕಲ್ಪಿಸಬಹುದಾಗಿದೆ.

ಗಜ ಚಂಡಮಾರುತದ ಹಿನ್ನೆಲೆಯಲ್ಲಿ ಉಪಗ್ರಹ ಉಡಾವಣೆಗೆ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಾತಾವರಣ ಪೂರಕವಾಗಿದ್ದ ಕಾರಣ ಯಾವುದೇ ತೊಂದರೆಯಿಲ್ಲದೆ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.

https://twitter.com/isro/status/1062675339254489091

ಇಸ್ರೋ ಜಿಸ್ಯಾಟ್​-29 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಸಾಧನೆಯನ್ನು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)