ಲಕ್ಷ್ಮೀ ಮೊಟ್ಟಮೊದಲ ಮಹಿಳಾ ರೆಫ್ರಿ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು(ಐಸಿಸಿ) ಮೊಟ್ಟ ಮೊದಲ ಮಹಿಳಾ ರೆಫ್ರಿಯಾಗಿ ಭಾರತದ ಜಿಎಸ್ ಲಕ್ಷ್ಮೀ ಅವರು ನೇಮಕಗೊಂಡಿದ್ದಾರೆ. ಇದರೊಂದಿಗೆ ಪುರುಷರ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶದ ಮಾಜಿ ಆಟಗಾರ್ತಿ ಕೂಡ ಆಗಿರುವ 51 ವರ್ಷದ ಲಕ್ಷ್ಮೀ ರೆಫ್ರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಲಕ್ಷ್ಮೀ ತಲಾ ಮಹಿಳಾ 3 ಏಕದಿನ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸೇರಿದಂತೆ 2008-09ರಲ್ಲಿ ಲಕ್ಷ್ಮೀ ದೇಶೀಯ ಪಂದ್ಯಗಳಿಗೂ ರೆಫ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವಿ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ನ ಮಹಿಳೆಯರ ಪ್ರಾಶಸ್ಱಕ್ಕೆ 2ನೇ ಸಾಕ್ಷಿಯಾಗಿದೆ.

ಕಳೆದ ತಿಂಗಳು ನಮೀಬಿಯಾ ಮತ್ತು ಓಮನ್ ತಂಡಗಳ ನಡುವಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಕ್ಲಾರಿ ಪೊಲೊಸಕ್ ಅಂಪೈರಿಂಗ್ ಮಾಡಿದ್ದರು. ಆ ಮೂಲಕ ಪುರುಷರ ಏಕದಿನ ಪಂದ್ಯಕ್ಕೆ ಅಂಪೈರ್ ಆದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿ ಮಹತ್ವದ ಹುದ್ದೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ನನಗೆ ರೆಫ್ರಿಯಾಗಿ ಭಾರತದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಅವಕಾಶ ಕೊಟ್ಟ ಐಸಿಸಿ ಹಾಗೂ ಬಿಸಿಸಿಐ ಮತ್ತು ಬೆಂಬಲಿಸುತ್ತಾ ಬಂದಿರುವ ನನ್ನ ಹಿರಿಯ ಮಾರ್ಗದರ್ಶಿಗಳಿಗೆ ಧನ್ಯವಾದ. ಎಲ್ಲರ ನಿರೀಕ್ಷೆಗೆ ತಕ್ಕಂತೆ ಈ ಹುದ್ದೆಯನ್ನು ಕಾರ್ಯನಿರ್ವಹಿಸುತ್ತೇನೆ ಎಂದು ಜಿಎಸ್ ಲಕ್ಷ್ಮೀ ಹರ್ಷ ವ್ಯಕ್ತಪಡಿಸಿದ್ದಾರೆ. ಲಕ್ಷ್ಮೀ ಆಟಗಾರ್ತಿಯಾಗಿ ಬಿಹಾರ, ಈಸ್ಟ್ ಜೋನ್, ರೈಲ್ವೇಸ್ ಹಾಗೂ ದಕ್ಷಿಣ ವಲಯ ತಂಡಗಳ ಪರ ಆಡಿದ್ದಾರೆ.

ಇವರೊಂದಿಗೆ ಐಸಿಸಿ ಅಭಿವೃದ್ಧಿ ಸಮಿತಿಯ ಅಂಪೈರಿಂಗ್ ವಿಭಾಗಕ್ಕೆ ಆಸ್ಟ್ರೇಲಿಯಾದ ಎಲೊಯಿಸ್ ಶೆರಿಡನ್ ನೇಮಕವಾಗಿದ್ದಾರೆ. ಇದರಿಂದ ಐಸಿಸಿ ಮಹಿಳಾ ಅಂಪೈರ್​ಗಳ ಸಂಖ್ಯೆ 8ಕ್ಕೇರಿದೆ. ಲಾರೆನ್ ಏಗೆನ್​ಬಗ್, ಕಿಮ್ ಕಾಟನ್, ಶಿವಾನಿ ಮಿಶ್ರಾ, ಸುಯ್ ರೆಡ್​ಫೆರ್ನ್, ಮೇರಿ ವೆಲ್​ಡ್ರೊನ್ ಮತ್ತು ಜಾಕ್ವೆಲಿನ್ ವಿಲಿಯಮ್್ಸ ಈಗಾಗಲೆ ಐಸಿಸಿ ಯಲ್ಲಿರುವ ಸಿಬ್ಬಂದಿಗಳು. ಶೆರಿಡನ್ ಕಳೆದ ಪುರುಷರ ಬಿಗ್​ಬಾಷ್ ಲೀಗ್​ನ 2 ಪಂದ್ಯಗಳಿಗೆ ಮೀಸಲು ಅಂಪೈರ್ ಆಗಿ ನೇಮಕಗೊಂಡಿದ್ದರು.