ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಮುಂಗೋಪಿ ಮುಖದ ಬೆಕ್ಕು ಇನ್ನಿಲ್ಲ

ನವದೆಹಲಿ: ಅಂತರ್ಜಾಲದಲ್ಲಿ ಸ್ಟಾರ್​ ಆಗಿ ಮೆರೆದಿದ್ದ “ಮುಂಗೋಪಿ ಮುಖದ ಬೆಕ್ಕು” ಏಳನೇ ವಯಸ್ಸಿಗೆ ಮೃತಪಟ್ಟಿದ್ದು, ಇದರಿಂದಾಗಿ ಅಪಾರ ಅಭಿಮಾನಿಗಳಲ್ಲಿ ಬೇಸರ ಮೂಡಿದೆ.

ಈ ವಿಚಾರ ತಿಳಿಸಲು ತುಂಬಾ ಬೇಸರ, ದುಃಖವಾಗುತ್ತದೆ. ನಮ್ಮ ಅಚ್ಚುಮೆಚ್ಚಿನ ಮುಂಗೋಪಿ ಮುಖದ ಬೆಕ್ಕು ಮೃತಪಟ್ಟಿದೆ. ಅದು ಇತ್ತೀಚೆಗೆ ಕಾಯಿಲೆಯಿಂದ ಬಳಲುತ್ತಿತ್ತು ಎಂದು ಅದರ ಮಾಲೀಕರು ತಮ್ಮ ಟ್ವೀಟರ್​ನಲ್ಲಿ ತಿಳಿಸಿದ್ದಾರೆ.

ಮುಂಗೋಪದ ಮುಖದಿಂದಲೇ ಪ್ರಸಿದ್ಧಿ ಪಡೆದಿದ್ದ ಬೆಕ್ಕು, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿತ್ತು. ಬೆಕ್ಕಿನ ಜತೆ ಸ್ಟಾನ್ ಲೀ ಮತ್ತು ಜೆನ್ನಿಫರ್ ಲೋಪೆಜ್ ಸೇರಿ ಪ್ರಸಿದ್ಧ ವ್ಯಕ್ತಿಗಳು ಛಾಯಾಚಿತ್ರವನ್ನು ತೆಗೆಸಿಕೊಂಡಿದ್ದರು.

ಈ ಬೆಕ್ಕಿನಿಂದಾಗಿ ಲಕ್ಷಾಂತರ ಮಂದಿ ಮುಖದಲ್ಲಿ ಕಿರುನಗೆ ಬೀರಿತ್ತು ಎಂದು ಅದರ ಮಾಲೀಕರು ತಿಳಿಸಿದ್ದಾರೆ. ಬೆಕ್ಕಿನ ಸಾವಿಗೆ ನೂರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಂತ್ವನದ ಸಂದೇಶಗಳನ್ನು ರವಾನಿಸಿದ್ದಾರೆ.

ಇದು ಮಿಕ್ಸಿಡ್​ ಬ್ರೀಡ್​ ತಳಿಯ ಬೆಕ್ಕಾಗಿದ್ದು, ಅದರ ನಿಜವಾದ ಹೆಸರಾದ ಟಾರ್ಡರ್ ಸಾಸ್ ಎಂಬುದಾಗಿತ್ತು. ಅದರ ಕುರಿತು ಕಿಟನ್ ಫೋಟೋವನ್ನು ಸೆಪ್ಟೆಂಬರ್ 2012ರಲ್ಲಿ ರೆಡಿಟ್​ನಲ್ಲಿ ಪೋಸ್ಟ್ ಮಾಡಿದ ನಂತರ ಖ್ಯಾತಿ ಪಡೆದಿತ್ತು. ಮುಂಗೋಪಿ ಮುಖದ ಕಾರಣದಿಂದಲೇ ಜಾಹೀರಾತು, ಧಾರಾವಾಹಿಗಳಲ್ಲಿಯೂ ಅವಕಾಶ ಪಡೆದುಕೊಂಡಿತ್ತು.

ಈ ಬೆಕ್ಕು ಫೇಸ್​ಬುಕ್​ನಲ್ಲಿ 8.5 ಮಿಲಿಯನ್, ಇನ್ಸ್ಟಾಗ್ರಾಮ್​ನಲ್ಲಿ 2.5 ಮಿಲಿಯನ್ ಅನುಯಾಯಿಗಳು, ಟ್ವಿಟ್ಟರ್​ನಲ್ಲಿ 1.5 ಮಿಲಿಯನ್ ಅಭಿಮಾನಿಗಳನ್ನು ಹೊಂದಿತ್ತು. (ಏಜೆನ್ಸೀಸ್)