ಬಂದೂಕು ಒಪ್ಪಿಸುವುದರಲ್ಲಿ ವಿನಾಯಿತಿ ನೀಡಿ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಬಂದೂಕು ಒಪ್ಪಿಸುವ ಪ್ರಕ್ರಿಯೆಯಿಂದ ಬೆಳೆಗಾರರಿಗೆ ವಿನಾಯಿತಿ ನೀಡುವಂತೆ ಕರ್ನಾಟಕ ಬೆೆಳೆಗಾರರ ಒಕ್ಕೂಟ ಮತ್ತು ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ೆ ಮನವಿ ಸಲ್ಲಿಸಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಲೋಕಸಭೆ ಚುನಾವಣೆ ಘೊಷಣೆಯಾಗಿರುವುದರಿಂದ ಬಂದೂಕು ಹೊಂದಿರುವ ಬೆಳೆಗಾರರು ಅವರ ಬಂದೂಕನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಲು ಸೂಚಿಸಲಾಗಿದೆ. ಬೆಳೆಗಾರರ ಆಸ್ತಿಪಾಸ್ತಿ ರಕ್ಷಣೆಗೆ ಬಂದೂಕು ಅಗತ್ಯವಿರುವುದರಿಂದ ಠಾಣೆಗೆ ಒಪ್ಪಿಸುವ ಪ್ರಕ್ರಿಯೆಯಿಂದ ವಿನಾಯಿತಿ ನೀಡಬೇಕು ಎಂದು ಕೋರಿದರು.

ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಫಿ ಮತ್ತು ಕಾಳುಮೆಣಸು ಕೊಯ್ಲು ಮಾಡಲಾಗಿದೆ. ಕೆಲವರು ಕಾಫಿ ಮತ್ತು ಕಾಳುಮೆಣಸು ಒಣಗಿಸಿ ಗೋದಾಮಿನಲ್ಲಿ ಇರಿಸಿದ್ದಾರೆ. ಇನ್ನೂ ಕೆಲವರು ಕಣದಲ್ಲಿ ಒಣಗಿಸುತ್ತಿದ್ದಾರೆ. ಬೆಳೆಗಾರರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆರಕ್ಷಣೆಗಾಗಿ ಬಂದೂಕಿನ ಅವಶ್ಯಕತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಫಿ ಮತ್ತು ಕಾಳುಮೆಣಸಿನ ಕಳವು ಪ್ರಕರಣಗಳು ಹೆಚ್ಚಾಗಿದ್ದು, ಬಂದೂಕು ಮನೆಯಲ್ಲಿ ಇರುವುದಿಲ್ಲ ಎಂದು ತಿಳಿದರೆ ರಕ್ಷಣೆ ಇಲ್ಲದಂತಾಗುತ್ತದೆ ಎಂದರು.