More

  ಕಾಡು ಬೆಳೆಸಿ ನಾಡು ಉಳಿಸಿ

  ಚಿತ್ರದುರ್ಗ: ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲೂ ವನ ಸಮೃದ್ಧಿಗೆ ಸಾಕಷ್ಟು ಅವಕಾಶಗಳಿವೆ ಎಂದು ಮುಖ್ಯಶಿಕ್ಷಕ ಎಚ್.ಹನುಮಂತರೆಡ್ಡಿ ಹೇಳಿದರು.

  ದೊಡ್ಡಸಿದ್ದವ್ವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಸಸಿ ನೆಟ್ಟು ಮಾತನಾಡಿದರು.

  ಜಿಲ್ಲೆಯಲ್ಲಿ ಅರಣ್ಯವನ್ನು ಬೆಳೆಸಬೇಕಿದೆ. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆ ಸಸಿ ವಿತರಿಸುತ್ತಿದೆ. ಸಮುದಾಯ ಕೈ ಜೋಡಿಸಿದರೆ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ ಎಂದರು.

  ಭವಿಷ್ಯದ ಪೀಳಿಗೆಯ ಜನರ ಬದುಕು ನಮ್ಮ ಕೈಯಲ್ಲಿದೆ. ಈಗಿನಿಂದಲೇ ನಾವು ಗಿಡ-ಮರ ಬೆಳೆಸಿ, ಪರಿಸರ ಸಂರಕ್ಷಿಸಿ ಜೀವನ ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

  ಇತ್ತೀಚಿನ ದಿನಗಳಲ್ಲಿ ಮನುಷ್ಯ ಆಧುನಿಕ ಜಗತ್ತಿನೆಡೆಗೆ ಬದಲಾಗುತ್ತ ಪರಿಸರದ ಕೃಪೆಯನ್ನು ಮರೆಯುತ್ತಿದ್ದಾನೆ. ಧನ ದಾಹದಿಂದ ಕಾಡುನಾಶ, ಕಾರ್ಖಾನೆಗಳಿಂದ ಬರುವ ಹೊಗೆ, ಅಧಿಕ ವಾಹನ ಸಂಚಾರಗಳಿಂದ ಪ್ರಕೃತಿಯಲ್ಲಿ ಬಾರಿ ಬದಲಾವಣೆಗಳಾಗುತ್ತಿದ್ದು, ಉತ್ತಮ ಆಮ್ಲಜನಕ, ಶುದ್ಧ ನೀರು ಸಿಗದೆ ಜನರು ಪ್ರಾಣ ಬಿಡುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

  ಹಿಂದೆಲ್ಲ ಕೆರೆ, ಬಾವಿಗಳಲ್ಲಿ ಸಮೃದ್ಧವಾದ ಶುದ್ಧ ನೀರು ದೊರೆಯುತ್ತಿತ್ತು. ಆದರೆ, ಈಗಿನ ದಿನಗಳಲ್ಲಿ 1000 ಅಡಿ ಕೊಳವೆ ಬಾವಿ ಕೊರೆಸಿದರು ನೀರು ದೊರೆಯುತ್ತಿಲ್ಲ. ಇದಕ್ಕೆ ಮೂಲ ಕಾರಣ ಕಾಡು ನಾಶ ಎಂದರು.

  ಆದ್ದರಿಂದ ಸರ್ಕಾರ ಪರಿಸರ ಸಂರಕ್ಷಣೆ ಜತೆಗೆ ಮಕ್ಕಳಲ್ಲಿ ಗಿಡ-ಮರ ಕುರಿತು ಪ್ರೀತಿ ಬೆಳೆಸಲು ಸರ್ಕಾರಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪೋಷಿಸುವ ಉದ್ದೇಶದಿಂದ ಸಸ್ಯ ಶಾಮಲಾ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಎಂದು ಹೇಳಿದರು.

  ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶ, ಪಾಪಣ್ಣ ರೆಡ್ಡಿ, ಶಿಕ್ಷಕರಾದ ಪ್ರದೀಪ್, ಫಜಲ್ ಉನ್ನೀಸಾ, ಗುರುಲಿಂಗಮ್ಮ, ತ್ರಿವೇಣಿ, ದೈಹಿಕ ಶಿಕ್ಷಣ ಶಿಕ್ಷಕ ತಮ್ಮಯ್ಯ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts