ಹೊಸಪೇಟೆ: ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಿದಂತೆ ಅಂತರ್ಜಲ ಅಭಿವೃದ್ಧಿ ಮತ್ತು ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಸಿಎಸ್‌ರ್ ಅಡಿ ರಾಜ್ಯದ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಉದ್ಯಮಿಗಳ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಮಿತಿ ಮೀರಿದ ಪ್ರಕೃತಿ ಬಳಕೆಯಿಂದ ನೀರಿನ ಬವಣೆ ಸೇರಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದನ್ನು ಸರಿಪಡಿಸುವುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಬೆಂಗಳೂರಿನಲ್ಲಿ 8 ಕೆರೆಗಳನ್ನು 48 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಉದ್ಯಮಿಗಳು ಮುಂದೆ ಬಂದ ಕಾರಣ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದ್ದೆವು. ಈಗ 113 ಕೋಟಿ ರೂ. ವೆಚ್ಚದಲ್ಲಿ 17 ಕೆರೆಗಳ ಪ್ರಗತಿಗೆ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಉದ್ಯಮಿಗಳು ಮುಂದಾಗಿದ್ದು, ಸದ್ಯ ಬೆಂಗಳೂರಿನಲ್ಲಿ 5 ಕೆರೆಗಳನ್ನು 25.6ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಈ ಭಾಗದ ಸಂಸ್ಥೆಗಳು ಹಾಗೂ ಉದ್ಯಮಿಗಳು ಕೈ ಜೋಡಿಸಬೇಕು. ಅದಕ್ಕೆ ಅಗತ್ಯ ತಾಂತ್ರಿಕ ಸಹಾಯ, ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ 36,729 ಕೆರೆಗಳಿದ್ದು, ಕೆಲ ಕೆರೆಗಳು ಜಿಪಂ ವ್ಯಾಪ್ತಿಗೆ, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 3335 ಕೆರೆಗಳು, ಇನ್ನೂ ಕೆಲ ಕೆರೆಗಳು ನಗರಸಭೆ ಹಾಗೂ ಬಿಬಿಎಂಪಿ ವ್ಯಾಪ್ತಿಗೆ ಬರುತ್ತವೆ. ವಿವಿಧ ಕಾರಣಗಳಿಗೆ ಕೆರೆಗಳು ಒತ್ತುವರಿಯಾಗಿದ್ದು, ಸಿಎಸ್‌ಆರ್ ಅಡಿ ಅಭಿವೃದ್ಧಿಗೆ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಉದ್ಯಮಿಗಳು ಮುಂದೆ ಬಂದರೆ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಇ.ತುಕಾರಾಮ್ ಮಾತನಾಡಿ, ಗಣಿಗಾರಿಕೆಯ ಅನುದಾನ ಮತ್ತು ಸಂಸ್ಥೆಗಳ ಸಿಎಸ್‌ಆರ್ ಹಣದಲ್ಲಿ ಸಂಡೂರು ತಾಲೂಕಿನ ಕೆರೆಗಳನ್ನು ರಾಜ್ಯಕ್ಕೆ ಮಾದರಿ ಕೆರೆಗಳನ್ನಾಗಿಸಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಸಂಸದ ವೈ.ದೇವೇಂದ್ರಪ್ಪ ಮಾತನಾಡಿದರು. ಸಣ್ಣ ನೀರಾವರಿ ಇಲಾಖೆ ನಿರ್ದೇಶಕ ಶಿವುಸ್ವಾಮಿ, ಯೋಜನೆಯ ಉದ್ದೇಶ ಹಾಗೂ ಅಗತ್ಯತೆ ಕುರಿತು ವಿವರಿಸಿದರು. ಕಾರ್ಪೋರೇಟ್ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು, ಅಧಿಕಾರಿಗಳು ಭಾಗವಹಿಸಿದ್ದರು.