ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಸಿಯುತ್ತಿದೆ ಅಂತರ್ಜಲ ಮಟ್ಟ

– ಪ್ರಕಾಶ್ ಮಂಜೇಶ್ವರ ಮಂಗಳೂರು
ಕರಾವಳಿಯಲ್ಲಿ ನೆರೆ ಪ್ರವಾಹ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ನದಿ, ಬಾವಿ, ಹಳ್ಳ- ಕೊಳ ಮತ್ತಿತರ ಜಲಮೂಲಗಳು ದಿಢೀರ್ ಬರಿದಾಗುತ್ತಿವೆ. ಈ ಪರಿಸ್ಥಿತಿಗೆ ಕಾರಣ ಏನು ಎನ್ನುವ ಬಗ್ಗೆ ಇನ್ನೂ ನಿಖರ ಉತ್ತರ ದೊರೆತಿಲ್ಲ. ಇದೇ ಹೊತ್ತಲ್ಲೇ ಇಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವ ಬಗ್ಗೆ ಇರುವ ಸರ್ಕಾರದ್ದೇ ದಾಖಲೆಗಳ ಬಗ್ಗೆ ‘ವಿಜಯವಾಣಿ’ ಸಂಬಂಧಪಟ್ಟವರ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ.
ಅಂತರ್ಜಲ ನಿರ್ದೇಶನಾಲಯದ ಆಧೀನದಲ್ಲಿರುವ ಅಧ್ಯಯನ(ಅಥವಾ ನಿರೀಕ್ಷಣಾ) ಬಾವಿಗಳ ಮೀಟರ್ ರೀಡಿಂಗ್ ಆಧರಿಸಿ ದಕ್ಷಿಣ ಕನ್ನಡದಲ್ಲಿ ಸೆಪ್ಟೆಂಬರ್ 2013ರಲ್ಲಿ ಜಿಲ್ಲೆಯಲ್ಲಿ ನೆಲಮಟ್ಟ(ಗ್ರೌಂಡ್ ಲೆವೆಲ್) ದಿಂದ ಕೆಳಗೆ 6.42 ಮೀ. ಇದ್ದ ಸರಾಸರಿ ಜಲಮಟ್ಟ 2017 ಸೆಪ್ಟೆಂಬರ್‌ನಲ್ಲಿ 9.14 ಮೀಟರ್‌ಗೆ ಏರಿಕೆಯಾಗಿದೆ. ಅಂದರೆ ಸೆಪ್ಟೆಂಬರ್ 2013ರಿಂದ 2017 ತನಕ ಐದು ವರ್ಷಗಳಲ್ಲಿ ಸರಾಸರಿ 2.72 ಮೀ. ನೀರಿನ ಮಟ್ಟ ಕುಸಿದಿದೆ. 2014 ಆಗಸ್ಟ್‌ನಲ್ಲಿ ಬೆಳ್ತಂಗಡಿಯಲ್ಲಿ ನೆಲಮಟ್ಟದಿಂದ 5.12 ಮೀ. ಕೆಳಗೆ ಇದ್ದ ಅಂತರ್ಜಲ ಮಟ್ಟ 2018 ಆಗಸ್ಟ್‌ಗೆ 8.63 ಮೀ. ಕೆಳಗೆ ಕುಸಿದಿದೆ.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಅಧ್ಯಯನಕ್ಕೆ ಐದು ತಾಲೂಕುಗಳಲ್ಲಿ (ಈಗ ನಿಮಾಣಗೊಂಡಿರುವ ಎರಡು ಹೊಸ ತಾಲೂಕು ಒಳಗೊಂಡು) ನಿರ್ಮಿಸಲಾಗಿರುವ 56 ಅಧ್ಯಯನ ಬಾವಿಗಳ ರೀಡಿಂಗ್ ಆಧರಿಸಿ ಅಂತರ್ಜಲ ವಸ್ತುಸ್ಥಿತಿ ತಿಳಿಯಲಾಗುತ್ತದೆ. ಈ ವರದಿ ಪರಿಗಣಿಸಿ ಅಂತರ್ಜಲ ಆಧತ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಲಾಖೆ ಸಲಹೆ ನೀಡುತ್ತದೆ.
ಪ್ರತಿ ತಾಲೂಕಿನಲ್ಲಿ ಸರ್ಕಾರದ ಆಧೀನದ ಭೂಮಿಯಲ್ಲಿ ಅಧ್ಯಯನ ಬಾವಿ ಹಾಗೂ ಕೊಳವೆಗಳನ್ನು ಕೊರೆಯಲಾಗಿದೆ. ಅಧ್ಯಯನ ಕೊಳವೆ ಬಾವಿಗಳ ಬಾಯಿಗೆ ಬೀಗ ಜಡಿದು ಸಂರಕ್ಷಿಸಲಾಗುತ್ತಿದೆ. ಪ್ರತಿ ತಿಂಗಳು ಅಂತರ್ಜಲ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂತರ್ಜಲ ಸ್ಥಿತಿಗತಿ ಕುರಿತು ಅಂಕಿಅಂಶ ಸಂಗ್ರಹಿಸಿ ಕೇಂದ್ರ ಕಚೇರಿಗೆ ವರದಿ ನೀಡುತ್ತಾರೆ.
ಅತಿಯಾದ ಅಂತರ್ಜಲ ಬಳಕೆಯಿಂದ ಹೆಚ್ಚಿನ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಅಂತರ್ಜಲ ಅಧಿನಿಯಮ 2011ರಂತೆ ಅತಿ ಹೆಚ್ಚಾಗಿ ಅಂತರ್ಜಲ ಬಳಕೆ ಮಾಡಿರುವ ಪ್ರದೇಶಗಳನ್ನು ಅಧಿಸೂಚಿತ ಪ್ರದೇಶಗಳಾಗಿ ವರ್ಗೀಕರಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಇಲ್ಲಿವರೆಗೆ ಯಾವುದೇ ತಾಲೂಕು ‘ಅಂತರ್ಜಲ ಅತಿ ಬಳಕೆ’ ಎಂದು ಅಧಿಸೂಚಿತ ಪ್ರದೇಶವಾಗಿ ಗುರುತಿಸಲಾಗಿಲ್ಲ.

ದಕ್ಷಿಣ ಕನ್ನಡದಲ್ಲಿ ಸಾಮಾನ್ಯವಾಗಿ ಮುರಕಲ್ಲಿನ ಮೇಲ್ಪದರವಿದ್ದು, ಮಳೆ ನೀರು ಅಲ್ಪಾವಧಿಯಲ್ಲೇ ಇಂಗುತ್ತದೆ. ಬಸಿಯುವಿಕೆ ಕೂಡ ಶೀಘ್ರ. ಇಂದಿನ ಪರಿಸ್ಥಿತಿಯಲ್ಲಿ ಅಂತರ್ಜಲದ ಬಳಕೆಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಅದರ ಮರುಪೂರೈಕೆಗೆ ಕೂಡ ನೀಡಬೇಕಾಗಿದೆ. ಭೂಮಿಯಲ್ಲಿನ ಅಂತರ್ಜಲ ಮಟ್ಟದಲ್ಲಿ ಉಂಟಾಗಿರುವ ಅಗಾಧ ವ್ಯತ್ಯಾಸ ಸರಿಪಡಿಸಲು ಹಸಿರು ನಾಶಕ್ಕೆ ಹೆಚ್ಚು ನಿಯಂತ್ರಣ ಬೇಕಾಗಿದೆ. ಮಳೆ ನೀರನ್ನು ಅಲ್ಲಲ್ಲೇ ತಡೆದು ಭೂಮಿಯಲ್ಲಿ ಇಂಗುವಂತೆ ಮಾಡಬೇಕಾಗಿದೆ. ಈ ಬಗ್ಗೆ ಇಲಾಖೆಯು ರೈತರು ಹಾಗೂ ಸಾರ್ವಜನಿಕರಿಗೆ ಮಾಹಿತಿ- ಮಾರ್ಗದರ್ಶನ ನೀಡಲು ಸಿದ್ಧ.
– ಜಾನಕಿ, ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ದಕ್ಷಿಣ ಕನ್ನಡ