ಬೇಸಿಗೆ ಆರಂಭದಲ್ಲೇ ನೀರಿಲ್ಲ

ಕಡೂರು: ಕಳೆದ ವರ್ಷಕ್ಕಿಂತ ಈ ಬಾರಿಯ ಬೇಸಿಗೆ ಅತ್ಯಂತ ತೀವ್ರವಾಗಿದೆ. ಜತೆಗೆ ವಿದ್ಯುತ್ ಕೊರತೆ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತೊಂದರೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಮುಂತಾದ ಸಾಮಾನ್ಯ ತೊಂದರೆಗಳಿಂದ ಜನತೆಯ ಪಾಡು ಹೇಳತೀರದಾಗಿದೆ.

ಇದು ಇನ್ನೂ ಬೇಸಿಗೆ ಆರಂಭವಷ್ಟೇ. ಕಳೆದ ಒಂದು ವಾರದಿಂದ 34 ಡಿಗ್ರಿ ಉಷ್ಣಾಂಶವಿದ್ದು ಜನರು ಹೊರಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ತಾಲೂಕಿನಲ್ಲಿ ಬಿಸಿಲ ಬೇಗೆಗೆ ಜನ, ಜಾನುವಾರುಗಳು ತತ್ತರಿಸುವಂತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಕೆಲವು ಕೆರೆಗಳನ್ನು ಬಿಟ್ಟರೆ ಯಾವುದರಲ್ಲೂ ನೀರಿಲ್ಲ. ಇದರ ಪರಿಣಾಮ ಅಂತರ್ಜಲ ಮಟ್ಟ ತೀರಾ ಕುಸಿದಿದೆ. ಅಲ್ಲದೆ ವೇದಾವತಿ ನದಿ ಪಾತ್ರದ ಮರಳನ್ನು ಕಳ್ಳಸಾಗಣೆ ಮಾಡುತ್ತಿರುವುದರಿಂದ ನೀರಿನ ಪಸೆಯೇ ಇಲ್ಲದಂತಾಗಿ ಕೊಳವೆಬಾವಿಗಳು ಬತ್ತಿ ಹೋಗಿ ಅಡಕೆ ಗಿಡಗಳು, ತೆಂಗಿನ ಮರಗಳು ಒಣಗುತ್ತಿವೆ. ಮರಳು ಕಳ್ಳಸಾಗಣೆಯನ್ನು ಪೊಲೀಸರು ನಿಯಂತ್ರಿಸುತ್ತಿರುವುದು ವಾಸ್ತವವಾದರೂ ಅವರ ಕಣ್ತಪ್ಪಿಸಿ ಮರಳು ಕಳ್ಳಸಾಗಣೆ ನಡೆಯುತ್ತಲೇ ಇದೆ.

ಅಂತರ್ಜಲ ಕುಸಿತ: ಇದರೆ ಜತೆ ಕೊಳವೆಬಾವಿಗಳನ್ನು ನಿರಂತರವಾಗಿ ಕೊರೆಯುತ್ತಿರುವುದು ಅಂತರ್ಜಲ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ. ಅತಿ ಹೆಚ್ಚು ಅಂತರ್ಜಲ ಬಳಕೆ ಅಧಿಸೂಚಿತ ಪ್ರದೇಶ ಎಂಬ ಹೊಸ ಪಟ್ಟ ಕಡೂರಿಗೆ ಸಿಕ್ಕಿದೆ. ಅಂತರ್ಜಲ ಬಳಕೆಗೆ ಸಂಬಂಧಿಸಿದಂತೆ ಹಲವು ನಿರ್ಬಂಧಗಳನ್ನು ಸರ್ಕಾರ ಸೂಚಿಸಿದರೂ ಅದಿನ್ನೂ ಕಾಗದದ ಮೇಲೆಯೇ ಉಳಿದಿದೆ. ಅದಕ್ಕೆ ಸಂಬಂಧಿಸಿದ ಸಮಿತಿ ಕಾರ್ಯಾರಂಭ ಮಾಡುವುದರೊಳಗೆ ಈಗಾಗಲೆ 500 ಅಡಿಗೂ ಹೆಚ್ಚು ಕೆಳಗೆ ಹೋಗಿರುವ ಅಂತರ್ಜಲ ಇನ್ನೂ ಪಾತಾಳ ಕಾಣುವ ಸಾಧ್ಯತೆ ಹೆಚ್ಚಿದೆ.

ಇನ್ನು ವಿದ್ಯುತ್ ಸಮಸ್ಯೆ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವುದೇ ತಪ್ಪು ಎನ್ನುವಂತಾಗಿದೆ. ಕಾರಣ ನಿರಂತರಜ್ಯೋತಿ ಕಾಮಗಾರಿ ನೆಪ ಹೇಳಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ರೈತರ, ಸಾರ್ವಜನಿಕರ ಮಾತು ಕೇಳುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಆರಂಭಿಸಿಲ್ಲ ಗೋಶಾಲೆ : ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಘೊಷಣೆಯಾಗಿದ್ದರೂ ಅಲ್ಲೊಂದು ಇಲ್ಲೊಂದು ಗ್ರಾಮಗಳಲ್ಲಿ ನೀರಿನ ಸಮಸ್ಯೆಗೆ ಸ್ಪಂದಿಸುತ್ತಿರುವುದನ್ನು ಬಿಟ್ಟರೆ ಬರಪರಿಹಾರ ಕಾರ್ಯ ಆರಂಭವಾಗಿಲ್ಲ. ತಾಲೂಕಿನಾದ್ಯಂತ ಎಲ್ಲಿಯೂ ಒಂದೂ ಗೋಶಾಲೆ ಆರಂಭವಾಗಿಲ್ಲ. ಈ ಹಿಂದೆ ಬರಗಾಲ ಪರಿಹಾರ ಕಾಮಗಾರಿಯಡಿ ನಿರ್ವಿುಸಿರುವ ನೀರಿನ ತೊಟ್ಟಿಗಳು ನಿರುಪಯುಕ್ತವಾಗಿವೆ. ಅವುಗಳನ್ನು ಮರುಬಳಕೆ ಮಾಡುವ ಬಗ್ಗೆ ಪಶು ಇಲಾಖೆಯವರು ಗಮನ ಹರಿಸಬೇಕಿದೆ. ಕಳೆದ ಬಾರಿ ಗೋಶಾಲೆ ನಿರ್ವಿುಸಿದ್ದ ತಾಣಗಳು ಇಂದು ಹಾಳುಬಿದ್ದಿವೆ.

82 ಹಳ್ಳಿಗಳಲ್ಲಿ ತೊಂದರೆ: ತಾಲೂಕಿನ 82 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆಯಿದೆ. ಬೇಸಿಗೆ ಆರಂಭದಲ್ಲಿಯೇ ಈ ಮಟ್ಟದ ತೊಂದರೆಗಳು ತಾಲೂಕನ್ನು ಕಾಡುತ್ತಿವೆ. ಬರಲಿರುವ ದಿನಗಳು ಮುಂಗಾರು ಆರಂಭವಾಗುವ ತನಕ ಅತ್ಯಂತ ಭೀಕರವಾಗಬಹುದು ಎಂಬ ಸೂಚನೆಗಳು ಕಂಡುಬರುತ್ತಿವೆ. ಸಾಧ್ಯವಾದಷ್ಟು ಪರಿಹಾರೋಪಾಯಗಳನ್ನು ಕೈಗೊಂಡರೆ ಕೆಲಮಟ್ಟಿಗಾದರೂ ಸಂಕಷ್ಟಗಳು ಕಡಿಮೆಯಾಗಬಹುದು.