ಭೋಪಾಲ್: ಕುದುರೆ ಮೇಲೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವರ ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಮದುವೆ ಮನೆ ಸೂತಕದ ಮನೆಯಾಗಿ ಪರಿವರ್ತನೆಗೊಂಡ ದಾರುಣ ಘಟನೆ ಮಧ್ಯ ಪ್ರದೇಶದ ಶೇವೋಪುರ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಬ್ಬಣದೊಂದಿಗೆ ಮದುವೆ ಸ್ಥಳ ಜಾಟ್ ಹಾಸ್ಟೆಲ್ಗೆ ತೆರಳುತ್ತಿದ್ದಾಗ ನಿಧನರಾದ ವರನನ್ನು ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್ಎಸ್ಯುುಐನ ಮಾಜಿ ಜಿಲ್ಲಾಧ್ಯಕ್ಷ 26 ವರ್ಷದ ಪ್ರದೀಪ್ ಜಾಟ್ ಎಂದು ಗುರುತಿಸಲಾಗಿದೆ. ವಿವಾಹ ವೇದಿಕೆ ಸಮೀಪಿಸುತ್ತಿದ್ದಂತೆ ಪ್ರದೀಪ್ ನಿಧಾನವಾಗಿ ಮುಂದೆ ಬಾಗುತ್ತಾ ಪ್ರಜ್ಞಾಹೀನನಾಗಿ ಕುದುರೆ ಮೇಲೆ ಒರಗಿದನು. ಆತನನ್ನು ಕೆಳಗಿಳಿಸಲು ಸಂಬಂಧಿಕರು ಪ್ರಯತ್ನಿಸಿದರೂ ಆತ ಕುಸಿದು ಬಿದ್ದ ವಿಡಿಯೋ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.