ಬೆಳಿಮಲೆ, ನಾಳಮಲೆಯಲ್ಲಿ ಕೆಂಚಳಿಲು

>

ವಿಜಯವಾಣಿ ಸುದ್ದಿಜಾಲ ಪುತ್ತೂರು
ಧರ್ಮಸ್ಥಳ- ಪುತ್ತೂರು ರಾಜ್ಯ ಹೆದ್ದಾರಿಯ 15 ಕಿ.ಮೀ ಒಳಬಾಗದಲ್ಲಿರುವ ಬೆಳಿಮಲೆ ಹಾಗೂ ನಾಳಮಲೆಯಲ್ಲಿ ಪಶ್ಚಿಮಘಟ್ಟದ ಅಪರೂಪವೆನಿಸಿದ ಕೆಂಚಳಿಲುಗಳ ಗುಂಪು ಕಂಡುಬಂದಿದೆ.
ಸಸ್ಯಾಹಾರಿ, ಸಾಧು ಪ್ರಾಣಿಯಾಗಿರುವ ಕೆಂಚಳಿಲು ಬೆಕ್ಕಿನ ಗಾತ್ರದಷ್ಟಿರುತ್ತದೆ, ಸಸ್ಯಾಹಾರಿಯಾದ ಇವು ಒಂಟಿಯಾಗಿ ಕಾಣಿಸಿಕೊಳ್ಳುತ್ತವೆ. ಹಗಲಿನಲ್ಲಿ ಬೃಹತ್ ಮರಗಳ ಮೇಲೆ ವಿಶ್ರಾಂತಿ ಪಡೆಯುವ ಈ ಪ್ರಾಣಿ ರಾತ್ರಿ ಸಂಚರಿಸುವುದೇ ಹೆಚ್ಚು. ಕಳೆದ 2-3 ವರ್ಷಗಳಿಂದ ಬೆಳಿಮಲೆ ಹಾಗೂ ನಾಳಮಲೆಗಳಲ್ಲಿ ಬೇಟೆಗಾರರ ಹಾವಳಿಗೆ ಬಹುತೇಕ ಪ್ರಾಣಿಗಳು ನಾಶವಾಗಿದ್ದು, ಪ್ರಸ್ತುತ ಕೆಂಚಳಿಲು ಗುಂಪು ಆಗಮನದಿಂದ ಈ ಮಲೆಗಳಲ್ಲಿ ಬಂದೂಕು ಶಬ್ದ ಕೇಳಿಬರುತ್ತಿದೆ.

ವಾಸಸ್ಥಾನ ಬದಲಿಸಿದ ಸಾಧ್ಯತೆ: ಇತ್ತೀಚಿನ ದಿನಗಳಲ್ಲಿ ಬೆಳಿಮಲೆ ಹಾಗೂ ನಾಳಮಲೆ ಸುತ್ತಮುತ್ತಲಿನ ತೋಟಗಳಿಗೆ ಮಂಗಗಳ ಹಾವಳಿ ಕಡಿಮೆಯಾಗಿದ್ದು, ಗುಂಪುಗುಂಪಾಗಿ ಕೆಂಚಳಿಲು ಆಗಮಿಸಿ ಅಡಕೆ, ಬಾಳೆ ಸೇರಿದಂತೆ ಕೃಷಿ ತೋಟಗಳನ್ನು ಹಾಳುಗೆಡವುತ್ತಿವೆ. ಈ ಭಾಗದಲ್ಲಿ ಕೆಂಚಳಿಲುಗಳು ವಾಸಿಸಲು ಯೋಗ್ಯ ವಾತಾವರಣ ಇಲ್ಲ, ಆದರೂ ಇಷ್ಟೊಂದು ಪ್ರಮಾಣದಲ್ಲಿ ಕೆಂಚಳಿಲು ಇರುವುದಕ್ಕೆ ಸೂಕ್ತ ಗೊತ್ತಾಗಿಲ್ಲ. ಯಾವುದೋ ಒಂದು ಪ್ರದೇಶದಲ್ಲಿ ಕಾಡುನಾಶವಾದ ಕಾರಣ ಅಲ್ಲಿಂದ ವಾಸಸ್ಥಾನ ಬದಲಿಸಿರಬಹುದು ಎನ್ನುತ್ತಾರೆ ಪ್ರಾಣಿ ಪ್ರೇಮಿಗಳು.

Leave a Reply

Your email address will not be published. Required fields are marked *