ಸತ್ತಿರುವ ಮರಿಯನ್ನು ಹೊತ್ತುಕೊಂಡು ಶೋಕ ಆಚರಿಸುತ್ತಿರುವ ಡಾಲ್ಫಿನ್

ನ್ಯೂಜಿಲೆಂಡ್​ನಲ್ಲೊಂದು ಮನಕಲಕುವ ಘಟನೆ

ವೆಲ್ಲಿಂಗ್ಟನ್​: ತಾಯಿ ಅಂದರೇನೇ ಹಾಗೆ. ತನ್ನ ಮಕ್ಕಳಿಗೆ ಸಣ್ಣದೊಂದು ನೋವಾದರೂ ತನ್ನ ಕರುಳು ಕಿತ್ತು ಬಂತೇನೋ ಎಂಬಂತೆ ವರ್ತಿಸುತ್ತಾಳೆ. ಅದಕ್ಕಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಆಕೆಗೊಂದು ಪೂಜನೀಯ ಸ್ಥಾನ ಕೊಡಲಾಗಿದೆ. ನ್ಯೂಜಿಲೆಂಡ್​ನಲ್ಲಿ ತಾಯಿ ಡಾಲ್ಫಿನ್​ವೊಂದು ಸತ್ತಿರುವ ತನ್ನ ಮರಿಯನ್ನು ಹೊತ್ತುಕೊಂಡು ಹಲವು ದಿನಗಳಿಂದ ಸಮುದ್ರದಲ್ಲಿ ತಿರುಗುತ್ತಾ ಶೋಕಾಚರಿಸುತ್ತಿರುವ ಮನಕಲಕುವ ದೃಶ್ಯ ಈ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


ಅಗಿದ್ದು ಏನೆಂದರೆ, ನ್ಯೂಜಿಲೆಂಡ್​ ಕೊಲ್ಲಿಯಲ್ಲಿ ಡಾಲ್ಫಿನ್​ವೊಂದು ಮರಿಹಾಕಿತ್ತು. ಬಹುಶಃ ಈ ಮರಿ ಗರ್ಭದಲ್ಲೇ ಮೃತಪಟ್ಟಿದ್ದಿರಬಹುದು. ಆದರೆ, ತಾಯಿ ಡಾಲ್ಫಿನ್​ ಮಾತ್ರ ಈ ಮರಿ ಜೀವಂತವಾಗಿದೆ ಎಂದು ಭಾವಿಸಿ, ಮೃತದೇಹವನ್ನು ತನ್ನ ಮೇಲಿರಿಸಿಕೊಂಡು ಸಮುದ್ರದಲ್ಲಿ ಸಂಚರಿಸುತ್ತಿದೆ. ಕೆಲವೊಮ್ಮೆ ಮರಿಯನ್ನು ಕಡಿಮೆ ನೀರಿರುವ ಪ್ರದೇಶದಲ್ಲಿ ಹಾಕಿ, ತನ್ನ ಗುಂಪಿನಲ್ಲಿರುವ ಇತರೆ ಡಾಲ್ಫಿನ್​ಗಳು ಅದನ್ನು ತರುವಂತೆ ಮಾಡುತ್ತಿರುವ ದೃಶ್ಯ ಮನಕಲಕುವಂತಿದೆ.


ಡಾಲ್ಫಿನ್​ ಶೋಕಾಚರಣೆಯಲ್ಲಿದೆ. ಆದ್ದರಿಂದ, ತನ್ನ ಮರಿಯ ಸಾವಿಗೆ ಶೋಕಾಚರಿಸಲು ಡಾಲ್ಫಿನ್​ಗೆ ಅವಕಾಶ ಮಾಡಿಕೊಡಬೇಕು. ಅದರ ಏಕಾಂತಕ್ಕೆ ಧಕ್ಕೆ ಬಾರದ ರೀತಿ ಎಚ್ಚರಿಕೆವಹಿಸಬೇಕು ಎಂದು ನ್ಯೂಜಿಲೆಂಡ್​ನ ಸಂರಕ್ಷಣಾ ಇಲಾಖೆ ಅಧಿಕಾರಿಗಳು ಅ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸೂಚಿಸಿದೆ.


1 ಸಾವಿರ ಕಿ.ಮೀ. ಸಂಚರಿಸಿದ್ದ ವೇಲ್​: ಪೆಸಿಫಿಕ್​ ಮಹಾಸಾಗರದ ವಾಯವ್ಯ ಭಾಗದಲ್ಲಿ ವೇಲ್​ ಕೂಡ ಡಾಲ್ಫಿನ್​ ರೀತಿಯ ವರ್ತನೆ ತೋರಿತ್ತು. ತನ್ನ ಸತ್ತ ಮರಿ ಸತ್ತಿದ್ದರೂ ಅದನ್ನು ಹೊತ್ತು ಅಂದಾಜು 17 ದಿನ 1 ಸಾವಿರ ಕಿ.ಮೀ.ಗೂ ಹೆಚ್ಚಿನ ಅಂತರ ಕ್ರಮಿಸಿ ಶೋಕಾಚರಿಸಿತ್ತು. ಬಳಿಕ ಮರಿಯನ್ನು ಆಳ ನೀರಿನಲ್ಲಿ ಇಳಿಸಿತ್ತು.

 

ಸತ್ತ ಮರಿಯನ್ನು ಹೊತ್ತು 1 ಸಾವಿರ ಕಿ.ಮೀ. ಸಂಚರಿಸಿದ್ದ ವೇಲ್​.