ಕೂಡ್ಲಿಗಿ: ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ತುಂಬಿದ್ದರಿಂದ ರೈತಾಪಿ ವರ್ಗ ಹಾಗೂ ಜನರು ಉತ್ಸಾಹದಿಂದ ದೀಪಾವಳಿ ಆಚರಿಸಲು ಮುಂದಾಗಿದ್ದಾರೆ. ಪಟ್ಟಣದಲ್ಲಿ ಗುರುವಾರ ಹೂ, ಹಣ್ಣು ಮತ್ತು ಪೂಜಾ ಸಾಮಗ್ರಿ ಖರೀದಿ ಜೋರಾಗಿತ್ತು.
ದಸರಾ ಹಬ್ಬದ ನಂತರ ಹೂವಿನ ದರ ಕುಸಿದಿತ್ತು. ದೀಪಾವಳಿ ಹಿನ್ನೆಲೆಯಲ್ಲಿ ಮತ್ತೆ ದರ ಏರಿಕೆಯಾಗಿದೆ. ಸೇವಂತಿಗೆ, ಚೆಂಡು ಹೂ, ಕನಕಾಂಬರ, ಗುಲಾಬಿ ಹೂಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸರ್ಕಾರಿ ಕಚೇರಿ, ಅಂಗಡಿ, ವಾಹನಗಳು, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲು ಹೂ ಮಾರಾಟ ಜೋರಾಗಿದೆ. ಒಂದು ಮಾರು ಚೆಂಡು ಹೂಗೆ 100 ರೂ., ಹಳದಿ ಸೇವಂತಿಗೆ 150 ರೂ., ಮಲ್ಲಿಗೆ 150 ರೂ.ಯಂತೆ ದರ ನಿಗದಿಪಡಿಸಲಾಗಿದೆ.
ಸೇಬು ಕೆಜಿಗೆ 200 ರೂ., ಏಲಕ್ಕಿ ಬಾಳೆಹಣ್ಣು 100 ರೂ., ಮೋಸಂಬಿ 100, ಕಪ್ಪುದ್ರಾಕ್ಷಿ 150, ಪೇರಲ 100 ರೂ., ಸೀತಾಫಲ 160 ರೂ., ದಾಳಿಂಬೆ 200 ರೂ., ನಿಂಬೆಹಣ್ಣು ಒಂದಕ್ಕೆ 10 ರೂ., ಬಾಳೆದಿಂಡು ಒಂದು ಜೋಡಿಗೆ 50 ರಿಂದ 60, ಬೂದು ಕುಂಬಳಕಾಯಿ ಒಂದಕ್ಕೆ 100 ರಿಂದ 150 ರೂ. ದರದಲ್ಲಿ ಮಾರಾಟವಾಗುತ್ತಿವೆ.