ಶಿರಾಡಿ ವಾಹನ ಸಂಚಾರಕ್ಕೆ ಶಿಫಾರಸು

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯನ್ನು ಲಘುವಾಹನ, ವೋಲ್ವೊ ಬಸ್‌ಗಳ ಸಂಚಾರಕ್ಕೆ ಸೆ.3ರಿಂದಲೇ ಮುಕ್ತಗೊಳಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಆದರೆ, ಈ ಬಗ್ಗೆ ಪರಿಶೀಲನೆ ಬಳಿಕವೇ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ಭಾರಿ ವಾಹನಗಳಾದ ಹೆವಿ ಕಮರ್ಷಿಯಲ್ ವೆಹಿಕಲ್, ಎರಡು ಆಕ್ಸಿಲ್ ಟ್ರಕ್, ಮಲ್ಟಿ ಆಕ್ಸಿಲ್ ಟ್ರಕ್, ಟ್ರಕ್ ಟ್ರೇಲರ್, ಬುಲೆಟ್ ಟ್ಯಾಂಕರ್, ಷಿಪ್ ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನಗಳ ಸಂಚಾರವನ್ನು ಮಳೆಗಾಲ ಪೂರ್ತಿ ಕಳೆದ ಬಳಿಕವೇ ಬಿಡುವುದಕ್ಕೆ ಇಂಜಿನಿಯರ್ ವರದಿ ಸಲಹೆ ಮಾಡಿದೆ.
ಕೆಲವು ದಿನಗಳ ಕಾಲ ಲಘುವಾಹನ, ಬಸ್ ಸಂಚಾರ ಪರಿಶೀಲಿಸಿ, ಮಳೆ ಮುಂದುವರಿಯದಿದ್ದರೆ ಹೆದ್ದಾರಿ ಸುಸ್ಥಿತಿಯಲ್ಲಿದ್ದರೆ ಮಾತ್ರವೇ ಭಾರಿ ವಾಹನ ಬಿಡಬಹುದು ಎನ್ನುವುದು ಅಧಿಕಾರಿಗಳ ಸಲಹೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡದ ಬದಿಗೆ 26 ಕಡೆ ಮತ್ತು ಕಣಿವೆ ಬದಿಗೆ 22 ಕಡೆ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗಿತ್ತು. ಮಳೆ ಹಿನ್ನೆಲೆಯಲ್ಲಿ ಮಣ್ಣು ತೆರವುಗೊಳಿಸುವುದು ತಡವಾಗಿತ್ತು. ಆದರೂ ಸಮರೋಪಾದಿಯಲ್ಲಿ ಮಣ್ಣು ತೆರವು ಕಾರ್ಯ ಕೈಗೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ತಾತ್ಕಾಲಿಕ ದುರಸ್ತಿ ಇನ್ನು 2-3 ದಿನದಲ್ಲಿ ಪೂರ್ತಿಯಾಗಲಿದೆ. ಬ್ಯಾರಿಯರ್ ಗೋಡೆ ನಿರ್ಮಾಣ, ಟ್ರಾಫಿಕ್ ಸೇಫ್ಟಿ ಟೇಪ್ ಅಳವಡಿಕೆ, ಸೂಚನಾ ಫಲಕ ಅಳವಡಿಕೆ, ಕ್ಯಾಟ್ ಐ ಅಳವಡಿಕೆ ಕೈಗೊಳ್ಳಲಾಗಿದೆ.
ಈಗಾಗಲೇ ಮಡಿಕೇರಿಯಿಂದ ಮಂಗಳೂರು ಸಂಪರ್ಕಿಸುವ ಸಂಪಾಜೆ ಘಾಟಿ ರಸ್ತೆ ವಿನಾಶಕಾರಿ ಮಳೆಯಿಂದ ಬಂದ್ ಆಗಿದ್ದು ಇನ್ನೂ 6 ತಿಂಗಳಿಗೆ ಅದರಲ್ಲಿ ಸಂಚಾರ ಕಷ್ಟ ಸಾಧ್ಯ. ಇನ್ನೊಂದೆಡೆ ಚಾರ್ಮಾಡಿ ಘಾಟಿ ರಸ್ತೆ ಸಪುರ ಇರುವ ಕಾರಣ ವಾಹನ ಸಂಚಾರ ದುಸ್ತರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿರಾಡಿ ರಸ್ತೆಯನ್ನು ಲಘುವಾಹನ, ಬಸ್ ಸಂಚಾರಕ್ಕೆ ಮುಕ್ತಗೊಳಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಕ್ಷಣ ವಾಹನ ಬಿಡಲ್ಲ: ಲೋಕೋಪಯೋಗಿ ಇಲಾಖೆಯವರು ಬಸ್, ಕಾರ್ ಮತ್ತಿತರ ವಾಹನಗಳನ್ನು ಶಿರಾಡಿಯಲ್ಲಿ ಬಿಡಬಹುದು ಎಂಬ ವರದಿ ನೀಡಿದ್ದರೂ ತಕ್ಷಣ ನಾವು ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಕಡೆಯಿಂದ ಇನ್ನೊಮ್ಮೆ ಪರಿಶೀಲನೆ ಆಗಬೇಕು, ಅಲ್ಲದೆ ಹಾಸನ ಜಿಲ್ಲಾಧಿಕಾರಿಯವರ ಕಡೆಯಿಂದಲೂ ಅಭಿಪ್ರಾಯ ಪಡೆದು ಕೆಲ ದಿನ ನೋಡಿ ಆ ಬಳಿಕ ವಾಹನ ಸಂಚಾರಕ್ಕೆ ಯೋಗ್ಯವೆನಿಸಿದರೆ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

10 ದಿನ ಬೇಕೆಂದ ರೇವಣ್ಣ
ಹಾಸನ: ಶಿರಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನಗಳ ಸಂಚಾರವನ್ನು ಮುಂದಿನ ಹತ್ತು ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಸ್ತೆ ಪಕ್ಕ ಮಣ್ಣು ಕುಸಿದಿದ್ದು, ಈಗ ದುರಸ್ತಿ ನಡೆಯುತ್ತಿದೆ. ಹಾಸನ, ದ.ಕ. ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಲಘು ವಾಹನ ಮತ್ತು ವೋಲ್ವೊ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಭಾರಿ ಗಾತ್ರದ ವಾಹನಗಳ ಓಡಾಟದ ಬಗ್ಗೆ ತೀರ್ಮಾನಿಸಿಲ್ಲ ಎಂದರು.

ಸಚಿವರ ಸೂಚನೆಗೆ ಸ್ಪಂದನೆ:  ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಸಚಿವ ಡಿ.ವಿ.ಸದಾನಂದ ಗೌಡ ಸೂಚನೆಗೆ ರಾಷ್ಟ್ರೀಯ ಹೆದ್ದಾರಿ ವಿಭಾಗ ಅಧಿಕಾರಿಗಳು ಸ್ಪಂದಿಸಿದ್ದು, ಎಲ್ಲ ಪ್ರಯಾಣಿಕ ವಾಹನಗಳಿಗೆ ಘಾಟಿ ರಸ್ತೆಯನ್ನು ಮುಕ್ತಗೊಳಿಸಬಹುದೆಂದು ಹೆದ್ದಾರಿ ವಿಭಾಗ ಕಾರ್ಯಪಾಲಕ ಇಂಜಿನಿಯರ್ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ. ತಾತ್ಕಾಲಿಕ ದುರಸ್ತಿ ಕಾರ್ಯ 2 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *