ಸೀ ವೀಡ್ ಯೋಜನೆಗೆ ಗ್ರೀನ್ ಸಿಗ್ನಲ್

ಪ್ರಕಾಶ್ ಮಂಜೇಶ್ವರ ಮಂಗಳೂರು
ಕರ್ನಾಟಕ ಕರಾವಳಿಯ ಸಮುದ್ರ ಬೆಳೆ (ಸೀ ವೀಡ್) ತೆಗೆದು ಹೊಸ ಆದಾಯ ಮೂಲ ಕಂಡುಕೊಳ್ಳುವ ಕೇಂದ್ರ ಸರ್ಕಾರದ ಯೋಜನೆ ಜಾರಿಗೆ ಸಿದ್ಧವಾಗಿದೆ. ಕರಾವಳಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಬೆಳೆಸಲು ಸೆಂಟ್ರಲ್ ಸಾಲ್ಟ್ ಆ್ಯಂಡ್‌ಮರೈನ್ ಕೆಮಿಕಲ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಎಸ್‌ಐಆರ್) ಮತ್ತು ಕರ್ನಾಟಕ ಸರ್ಕಾರದ ಜತೆ ಒಡಂಬಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಪೂರ್ವ ಕರಾವಳಿ ಮಂಡಪಂ, ರಾಮೇಶ್ವರ ಮುಂತಾದೆಡೆ ದೊಡ್ಡ ಪ್ರಮಾಣದಲ್ಲಿ ಸಮುದ್ರ ಕಳೆ ಬೆಳೆಯಲಾಗುತ್ತಿದ್ದು, ಇದು ಸಾಕಷ್ಟು ರಫ್ತು ಮೌಲ್ಯ ಕೂಡ ಹೊಂದಿದೆ. ಮಂಗಳೂರಿನ ಮೀನುಗಾರರಿಗೆ ಸೀವೀಡ್ ಬೆಳೆಯುವುದು ಒಳ್ಳೆಯ ಉದ್ಯೋಗವಾಗಬಹುದು, ಈ ಬಗ್ಗೆ ಧರ್ಮಸ್ಥಳ ಯೋಜನೆ ರೂಪಿಸಬೇಕು ಎಂದು ಪ್ರಧಾನಿ ಮೋದಿ ಕಳೆದ ಅಕ್ಟೋಬರ್‌ನಲ್ಲಿ ಉಜಿರೆಯ ಸಮಾವೇಶದಲ್ಲಿ ಭಾಗವಹಿಸಿದ ಸಂದರ್ಭ ಸಲಹೆ ನೀಡಿದ್ದರು.

100 ಘಟಕ ಗುರಿ:  ರಾಜ್ಯದ ನೂರು ಘಟಕಗಳಲ್ಲಿ ಬೆಳೆ ತೆಗೆಯಲು ಗುರಿ ನಿಗದಿಪಡಿಸಲಾಗಿದೆ. ಹೊಸ ಬೆಳೆಗೆ ಪೂರಕ ಪರಿಸರ ಅಧಿಕ ಇರುವ ಕಾರವಾರದಲ್ಲಿ ಪ್ರಾಯೋಗಿಕವಾಗಿ ದೊಡ್ಡ ಮಟ್ಟದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಮೇಲ್ನೋಟಕ್ಕೆ ಸೀಮಿತ ಅವಕಾಶ ಹೊಂದಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೂಡ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ತಮಿಳುನಾಡಿನ ರಾಮೇಶ್ವರಮ್‌ನ ಮಂಡಪಂನಲ್ಲಿ ಆಗಲೇ ರಾಜ್ಯದ ಕರಾವಳಿಯ ಜಿಲ್ಲೆಗಳ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಒಂದು ಹಂತದ ತರಬೇತಿ ಇತ್ತೀಚೆಗೆ ಪೂರ್ಣಗೊಂಡಿದೆ.

ಸಿಎಂಎಫ್‌ಆರ್‌ಐ ಮಾರ್ಗದರ್ಶನ:  ಸಮುದ್ರ ತೀರದಲ್ಲಿ ಮರ ಸೀ ವೀಡ್ ಬೆಳೆಯಲು ಅಗತ್ಯ ತಂತ್ರಜ್ಞಾನ ನೆರವು ನೀಡಲು ಮಂಗಳೂರಿನಲ್ಲಿರುವ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ಸಿದ್ದವಿದೆ. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು. ಪ್ರಥಮ ಹಂತದಲ್ಲಿ ಕರಾವಳಿಯ ಆಯ್ದ ಪ್ರದೇಶಗಳಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಈ ಸಮುದ್ರ ಕೃಷಿ ಪ್ರಯೋಗ ನಡೆಸಿ ಸಾರ್ವಜನಿಕರಲ್ಲಿ ಧೈರ್ಯ ವಿಶ್ವಾಸ ತುಂಬುವ ಪ್ರಯತ್ನ ನಡೆಯಲಿದೆ.

ಸೀ ವೀಡ್ ಅಂದರೆ ಏನು?:  ಸೀ ವೀಡ್ ಅಥವಾ ಸಮುದ್ರ ಬೆಳೆ ಅಂದರೆ ಸಮುದ್ರ ಬದಿ ನೀರಿನಲ್ಲಿ ಕೃತಕ ಬೇಸ್ ನಿರ್ಮಿಸಿ ಅದರಲ್ಲಿ ನಿರ್ದಿಷ್ಟ ಜಾತಿಯ ಒಂದು ಸಸ್ಯ ಸಂಕುಲವನ್ನು ಬೆಳೆಸುವ ಕ್ರಮ. ಬಿಸಿಲಿದ್ದರೆ ಮಾತ್ರ ಇದು ಬೆಳೆಯುತ್ತದೆ. ಹೆಚ್ಚಿನ ಉಪ್ಪುನೀರು ಅಂಶ ಬೇಕಾದ್ದರಿಂದ ನದಿಗಳಲ್ಲಿ ಬೆಳೆಯಲಾರದು. ಜೆಲ್ಲಿ ರೀತಿಯ ಗಿಡಗಳಾಗಿದ್ದು, ಇವುಗಳನ್ನು ಗದ್ದೆಗೆ ಗೊಬ್ಬರವಾಗಿ ಬಳಸಬಹುದು. ಸೀ ವೀಡ್ ಬೆಳೆಯಲು ಸಮುದ್ರದ ನೀರು ಬೇಕು, ರಾಪ್ಟಿಂಗ್ ಅಥವಾ ಹಗ್ಗವನ್ನು ಕಟ್ಟಿ, ಅದರಲ್ಲಿ ಸೀ ವೀಡ್‌ಗಳನ್ನು ಬೆಳೆಸಿ,ಆಗಾಗ ಅದನ್ನು ಸಂಗ್ರಹಿಸಿ, ಒಣಗಿಸಿ ಮಾರಾಟ ಮಾಡಬಹುದು. ಇದಕ್ಕೆ ಹೆಚ್ಚಿನ ರಫ್ತು ಮಾರುಕಟ್ಟೆ ಇದೆ, ಇದರಲ್ಲಿ ಪೋಷಕಾಂಶಗಳಿವೆ, ಆಹಾರವಸ್ತುಗಳಲ್ಲಿ, ಔಷಧಿ ಉತ್ಪಾದನೆಗೆ ಕೂಡ ಬಳಸಲಾಗುತ್ತದೆ.

 

ಆಸಕ್ತರಿಗೆ ಸೀ ವೀಡ್ ಬೆಳೆ ನಡೆಸಲು ಅಗತ್ಯ ತಂತ್ರಜ್ಞಾನ ನೆರವು ನೀಡಲು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ. ಸಿದ್ದವಿದೆ. ಉಡುಪಿಯಿಂದ ಸಿಂಡಿಕೇಟ್ ಬ್ಯಾಂಕ್ ಸಹಿತ ಎರಡು ಸಂಸ್ಥೆಗಳ ಮೂಲಕ ಆಸಕ್ತರ ಕೋರಿಕೆ ಬಂದಿದೆ. ಬ್ಯಾಂಕ್ ಸಹಭಾಗಿತ್ವದಲ್ಲಿ ಅಲ್ಲಿ ತರಬೇತಿ ಕೂಡ ಮುಗಿದಿದೆ. ಮಳೆ ದೂರವಾದ ಕೂಡಲೇ ಪ್ರಕ್ರಿಯೆಗೆ ಚಾಲನೆ ನೀಡಬಹುದು.
– ಡಾ.ಪ್ರತಿಭಾ ರೋಹಿತ್, ವಿಜ್ಞಾನಿ, ಸಿಎಂಎಫ್‌ಆರ್‌ಐ, ಮಂಗಳೂರು