ಮೈನವಿರೇಳಿಸಿದ ಟ್ರಾಕ್ ರೇಸ್

ಪೊನ್ನಂಪೇಟೆ: ರೊಯ್.. ರೊಯ್.. ಎಂದು ಕಿವಿಗಪ್ಪಳಿಸುವ ಶಬ್ದ, ಆಕಾಶದೆತ್ತರಕ್ಕೆ ಹಾರಿ ಹೋಗುವ ಧೂಳು.. ಕಣ್ಣುಮುಚ್ಚಿ ತೆರೆಯುವ ಮುನ್ನವೇ ಮುನ್ನುಗ್ಗಿ ಸಾಗುವ ವಾಹನಗಳು. ನಾ ಮುಂದು.. ತಾ ಮುಂದು ಎಂದು ಬಿದ್ದು ಓಡಿಸುವ ಸವಾರರ ಕೆಚ್ಚೆದೆಯ ಹೋರಾಟ.. ಕುತೂಹಲದಿಂದ ಹೃದಯ ಬಡಿತ ಹೆಚ್ಚಿಸಿಕೊಂಡು ಮತ್ತೆ, ಮತ್ತೆ ಕಣ್ತುಂಬಿಕೊಳ್ಳುವ ಅಭಿಮಾನಿಗಳು…

ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಬೇಗೂರುಕೊಲ್ಲಿ ಗದ್ದೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಟ್ರ್ಯಾಕ್ ರೇಸ್‌ನಲ್ಲಿ ಕಂಡುಬಂದ ದೃಶ್ಯಗಳಿವು. ಬಿಸಿಲಿನ ತಾಪಕ್ಕೂ ಬಗ್ಗದ ಅಭಿಮಾನಿಗಳು ಟ್ರ್ಯಾಕ್ ಉದ್ದಕ್ಕೂ ನಿಂತು ಕುತೂಹಲದಿಂದ ವೀಕ್ಷಿಸಿದರು. ದಕ್ಷಿಣ ಕೊಡಗಿನಲ್ಲಿ ವರ್ಷಕೊಮ್ಮೆ ನಡೆಯುವ ಕಾರಣ ಹಿರಿಯರು., ಕಿರಿಯರು ಎನ್ನದೆ, ಮಕ್ಕಳು ಕೂಡ ಬಿಸಿಲಿನಲ್ಲಿ ನಿಂತು ವೀಕ್ಷಿಸಿದರು.

ಶಬ್ದ.. ಧೂಳು: ಪೊನ್ನಂಪೇಟೆ-ಹುದಿಕೇರಿ ಮುಖ್ಯರಸ್ತೆ ಬದಿಯಲ್ಲಿ ಆಯೋಜಿಸಿದ್ದ ರ‌್ಯಾಲಿ ಸಮಯದಲ್ಲಿ ಶಬ್ದ, ಧೂಳು ಹೆಚ್ಚಾಗಿ ಕಂಡುಬಂತು. ಒಂದರ ಹಿಂದೆ ಒಂದರಂತೆ ಮುನ್ನುಗ್ಗುವ ಬೈಕ್‌ಗಳ ಚಕ್ರಗಳಿಂದ ಎದ್ದು ಬರುತ್ತಿದ್ದ ಧೂಳು ಬೈಕ್ ಸವರರಿಗೂ ಕೂಡ ಮುಂದಿನ ದಾರಿ ಕಾಣದಷ್ಟು ಕಠಿಣವಾಗಿತ್ತು. ಆರಂಭದ ಹಂತದಲ್ಲಿ ಮಾತ್ರ ವಾಹನಗಳು ಹೊತ್ತು ಕಳೆದಂತೆ ಧೂಳಿನಲ್ಲಿ ಮರೆಯಾಗುತ್ತಿತ್ತು. ಬರೀ ಶಬ್ದದಿಂದ ಮಾತ್ರ ವಾಹನ ಎಲ್ಲಿದೆ ಎನ್ನುವುದನ್ನು ಅರಿತುಕೊಳ್ಳುವಷ್ಟು ಧೂಳು ಕಂಡುಬಂತು.

ತಿರುವುಗಳಲ್ಲಿ ಎದ್ದು ಮುನ್ನುಗ್ಗುವ ವಾಹನಗಳ ಆರ್ಭಟ ಕಣ್ಣು ಕುಕ್ಕುವಂತಿತ್ತು. ರೋಚಕತೆ ಹೆಚ್ಚಿಸುವ ತಿರುವುಗಳಲ್ಲಿ ಅಭಿಮಾನಿಗಳು ನಿಂತು ವೀಕ್ಷಿಸಿದರು. ಅಲ್ಲಲ್ಲಿ ಬಿದ್ದು ಮತ್ತೆ ಓಡುವ ರ‌್ಯಾಲಿಪಟುಗಳ ಸ್ಪರ್ಧಾಭಾವನೆ ಗಮನ ಸೆಳೆಯಿತು. ನಾಲ್ಕುಚಕ್ರ ಹಾಗೂ ದ್ವಿಚಕ್ರ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಿತು.
ದ್ವಿಚಕ್ರ ವಿಭಾಗದಲ್ಲಿ 59 ರ‌್ಯಾಲಿಪಟುಗಳು ಭಾಗವಹಿಸಿದ್ದರು. ಕೊಡಗು ಜಿಲ್ಲೆ ಜೊರತುಪಡಿಸಿ, ಹೊರ ರಾಜ್ಯಗಳ ಕ್ರೀಡಾಪಟುಗಳು ಹೆಚ್ಚಾಗಿ ಪಾಲ್ಗೊಂಡಿದ್ದರು.

ಟ್ರ್ಯಾಕ್ ವರದಿ: ಬೇಗೂರು ಕೊಲ್ಲಿಯ ಚೇಂದೀರ, ಐಪುಮಾಡ, ಚೆಕ್ಕೇರ ಹಾಗೂ ತೀತೀರ ಕುಟುಂಬಗಳಿಗೆ ಸೇರಿರುವ ಗದ್ದೆಯಲ್ಲಿ ನಿರ್ಮಿಸಿದ್ದ ಟ್ರ್ಯಾಕ್ ಸುಮಾರು 850 ಮೀಟರ್ ಉದ್ದವಿತ್ತು. 3 ತಿರುವುಗಳು ಬೈಕ್ ಸವಾರರಿಗೆ ಹೆಚ್ಚು ಅನುಕೂಲವಾಗಿತ್ತಾದರೂ, ಚಕ್ರ ಮೇಲೆಳುವ ರೀತಿ ಇದ್ದ ಕಾರಣ ಹೆಚ್ಚು ರೋಚಕ ಅನುಭವ ನೀಡುವಂತಿತ್ತು. ಒಂದು ಕಡೆ ಮಾತ್ರ ಉಬ್ಬು ರೀತಿಯಲ್ಲಿ ನಿರ್ಮಿಸಿದ್ದ ಕಾರಣ ಬೈಕ್‌ಗಳ ಎರಡು ಚಕ್ರಗಳು ಹಾರುವ ದೃಶ್ಯ ಕುತೂಹಲ ಮೂಡಿಸಿತು. ಅಂತಾರಾಷ್ಟ್ರೀಯ ರ‌್ಯಾಲಿಪಟು ಲೋಹಿತ್ ಅರಸ್ ಟ್ರ್ಯಾಕ್ ನಿರ್ಮಿಸಿದ್ದರು.

ಮೊದಲ ಬಾರಿಗೆ ಡಿಜಿಟಲ್ ಟೈಮಿಂಗ್ಸ್: ಇದೇ ಮೊದಲ ಬಾರಿಗೆ ನಾಲ್ಕುಚಕ್ರ ವಾಹನ ರ‌್ಯಾಲಿಯಲ್ಲಿ ಡಿಜಿಟಲ್ ಟೈಮಿಂಗ್ಸ್ ತಂತ್ರಜ್ಞಾನ ಅಳವಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಾಹನಗಳು ಆರಂಭವಾಗುವ ಸಂದರ್ಭದಿಂದ ಡಿಜಿಟಲ್ ತಂತ್ರಜ್ಞಾನದ ಮೂಲಕ ಸಮಯದ ಅವಧಿಯನ್ನು ಸಂಗ್ರಹಿಸಲು ಬಳಕೆ ಮಾಡಲಾಗಿತ್ತು.

ಎಂ.ಬಿ.ಶಿಯಾಬ್ ಚಾಂಪಿಯನ್: ದ್ವಿಚಕ್ರ ವಿಭಾಗದ 3 ಕ್ಲಾಸ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸುಂಟಿಕೊಪ್ಪದ ಎಂ.ಬಿ.ಶಿಯಾಬ್ ಚಾಂಪಿಯನ್ ಬಹುಮಾನ ಗಿಟ್ಟಿಸಿಕೊಂಡರು. ಕೂರ್ಗ್ ಲೋಕಲ್, ನಾವಿಸ್ ಹಾಗೂ ಇಂಡಿಯನ್ ಓಪನ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಸ್ಥಾನದ ಸಾಧನೆ ಮಾಡಿದರು. ಉಳಿದಂತೆ ಮುಸೈನ್‌ಶೇಕ್ 4 ವಿಭಾಗದಲ್ಲಿ ಬಹುಮಾನ ಗಿಟ್ಟಿಕೊಂಡು ಗಮನ ಸೆಳೆದರು.

ದ್ವಿಚಕ್ರ ಫಲಿತಾಂಶ: ಕೂರ್ಗ್ ಲೋಕಲ್ ವಿಭಾಗ: ಎಂ.ಬಿ.ಶಿಯಾಬ್(ಪ್ರಥಮ), ನಿಹಾಲ್‌ಖಾನ್ (ದ್ವಿತೀಯ), ಅಜರುದ್ದೀನ್ (ತೃತೀಯ) ಸ್ಥಾನ ಪಡೆದುಕೊಂಡರು.
2 ಸ್ಟ್ರೋಕ್ ವಿಭಾಗ: ಟಿ.ಟಿ.ಅರುಣ್(ಪ್ರ), ಮುಸೈನ್ ಶೇಕ್(ದ್ವಿ), ಎಂ.ಡಿ.ಆರಿಫ್(ತೃ).
ನಾವೀಸ್ ಕ್ಲಾಸ್: ಎಂ.ಬಿ.ಶಿಯಾಬ್ (ಪ್ರ), ಫಿಯಾಜ್ (ದ್ವಿ), ಶಯಿಸ್‌ಅಮಿನ್‌ಶಾನ್ (ತೃ).
ಫೋರ್ ಸ್ಟ್ರೋಕ್ ವಿಭಾಗ: ಶೇಕ್ ಮುಸೈನ್ (ಪ್ರ), ಫಿರೋಜ್ (ದ್ವಿ), ಸಲ್ಮಾನ್ (ತೃ).
ಇಂಡಿಯನ್ ಓಪನ್ ವಿಭಾಗ: ಎಂ.ಬಿ. ಶಿಯಾಬ್ (ಪ್ರ), ಶೇಕ್‌ಮುಸೈನ್ (ದ್ವಿ), ಟಿ.ಅರುಣ್ (ತೃ).
ಎಕ್ಸ್‌ಪರ್ಟ್ ಕ್ಲಾಸ್: ಪಿ.ಅರುಣ್ (ಪ್ರ), ಶೇಕ್‌ಮುಸೈನ್ (ದ್ವಿ), ಚಂದುಖಾನ್ (ತೃ) ಸ್ಥಾನ ಪಡೆದುಕೊಂಡರು.

ಉದ್ಘಾಟನೆ: ನಾಲ್ಕು ಚಕ್ರ ಹಾಗೂ ದ್ವಿಚಕ್ರ ರ‌್ಯಾಲಿಗೆ ಪೊನ್ನಂಪೇಟೆ ಪೊಲೀಸ್ ಉಪ ನಿರೀಕ್ಷಕ ಮಹೇಶ್ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ವಲಯ ಅಧ್ಯಕ್ಷ ಜಫಿನ್, ಮಾಂಡವಿ ಮೋಟರ್ಸ್ ಗೋಣಿಕೊಪ್ಪ ಶೋರೂಮ್ ವ್ಯವಸ್ಥಾಪಕ ಮನೋಜ್, ಜೆಸಿಐ ಕಾರ್ಯದರ್ಶಿ ಕೊಟ್ಟಂಗಡ ನಾಣಯ್ಯ, ಜೆಸಿಐ ಪ್ರಮುಖರಾದ ಕೊಟ್ಟಂಗಡ ಸುಬ್ಬಯ್ಯ, ಅರಸು ನಂಜಪ್ಪ, ಕಾಟಿಮಾಡ ಗಿರಿ, ನಿರನ್ ಮೊಣ್ಣಪ್ಪ, ರಾಬಿನ್ ಸುಬ್ಬಯ್ಯ, ದಿಲನ್ ಚೆಂಗಪ್ಪ ಪಾಲ್ಗೊಂಡಿದ್ದರು.