ಬೆಳಗಾವಿ: ಜರ್ಮನ್ ಆಸ್ಪತ್ರೆಗಳಲ್ಲಿ ಸುಮಾರು 3 ಲಕ್ಷ ನರ್ಸಿಂಗ್ ಸಿಬ್ಬಂದಿಯ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಜರ್ಮನ್ ದೇಶದ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಈ ಭಾಗದ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದಕ್ಕೆ ಡಾ.ರವಿ ಪಾಟೀಲ ಆರೋಗ್ಯ ಸಂಸ್ಥೆಯಲ್ಲಿ ಅಗತ್ಯ ತರಬೇತಿ ನೀಡುತ್ತಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕ ಡಾ.ರವಿ ಬಿ. ಪಾಟೀಲ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರ್ಸಿಂಗ್ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಜರ್ಮನಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಅಲ್ಲದೇ ಹೆಚ್ಚಿನ ಶಿಕ್ಷಣ ಕೂಡ ಪಡೆಯಬಹುದು. ನರ್ಸಿಂಗ್ ಸಿಬ್ಬಂದಿ ಆಯ್ಕೆಯ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಅಗತ್ಯ ಕೌಶಲ ತರಬೇತಿ ನೀಡುವುದಕ್ಕೆ ನಮ್ಮ ಸಂಸ್ಥೆಯಲ್ಲಿ ತಜ್ಞರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
6ರಿಂದ 8 ತಿಂಗಳ ಅವಧಿಯ ತರಬೇತಿಯಲ್ಲಿ ಎ-1, ಎ-2 ತರಬೇತಿ ನೀಡಿ ಜರ್ಮನಿಯ ಭಾಷಾ ಕೌಶಲ ಕಲಿಸಲಾಗುವುದು. ಬಳಿಕ ನರ್ಸಿಂಗ್ ಸಿಬ್ಬಂದಿ ಆಯ್ಕೆ ಪರೀಕ್ಷೆ ಮತ್ತು ಉನ್ನತ ಮಟ್ಟದ ಕೌಶಲ ಕಲಿಸುವುದಕ್ಕೆ ‘ಬಿ-1, ಬಿ-2’ ತರಬೇತಿ ನೀಡಲಾಗುವುದು ಎಂದರು.
ಈ ತರಬೇತಿ ಪಡೆಯುವುದಕ್ಕೆ ನಮ್ಮ ಭಾಗದ ವಿದ್ಯಾರ್ಥಿಗಳು ದೆಹಲಿ, ಆಗ್ರಾದಂತಹ ನಗರಗಳಿಗೆ ಹೋಗುತ್ತಿದ್ದರು. ಈಗ ನಮಲ್ಲೇ ತರಬೇತಿ ನೀಡುತ್ತಿದ್ದೇವೆ. ವಿವಿಧ ಕಾಲೇಜುಗಳಲ್ಲಿ ಬಿಎಸ್‌ಸಿ ನರ್ಸಿಂಗ್, ಜಿಎನ್‌ಎಂ ನರ್ಸಿಂಗ್ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ತರಬೇತಿ ಪಡೆದು ಸಂದರ್ಶನಕ್ಕೆ ಹಾಜರಾಗಬಹುದು. ನಮ್ಮ ಸಂಸ್ಥೆಯಲ್ಲಿ ಕಲಿತ ಸುಮಾರು 21 ವಿದ್ಯಾರ್ಥಿಗಳು ಈಗಾಗಲೇ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ ಎಂದರು.
ಜರ್ಮನ್ ಪ್ರಸಿದ್ಧ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಹಿನ್ನೆಲೆ ಫೆ.5ರಿಂದ 8ರವರೆಗೆ ಜರ್ಮನ್ ಪ್ರಸಿದ್ಧ ಆಸ್ಪತ್ರೆಗಳ ನಿರ್ದೇಶಕರು ಹಾಗೂ ಕಾರ್ಯಾಧ್ಯಕ್ಷರು ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿವಿಧ ವಿಷಯಗಳ ಬಗ್ಗೆ ಸಂದರ್ಶನ ನಡೆಸಿ ಉದ್ಯೋಗದ ಪ್ರಮಾಣ ಪತ್ರ ನೀಡಲಿದ್ದಾರೆ ಎಂದರು. ಮುಂಬರುವ ದಿನಗಳಲ್ಲಿ ಅಲೈಡ್ ಹೆಲ್ತ್ ಕೋರ್ಸ್, ಫಾರ್ಮಸಿ, ಬಿ ಪಾರ್ಮಾ, ನರ್ಸಿಂಗ್, ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೂ ತರಬೇತಿ ನೀಡಿ ಸಂದರ್ಶನಕ್ಕೆ ಅಣಿಗೊಳಿಸುತ್ತೇವೆ ಎಂದರು.
ಎಡಬ್ಲುೃಒ ಕೆವಿ ನರ್ನ್‌ಬರ್ಗ್ ಆಸ್ಪತ್ರೆ ಇನಾ ಸ್ಕೋನ್ವೆಟರ್ ಕ್ರೇಮರ್ ಮಾತನಾಡಿ, ಜರ್ಮನ್ ಆಸ್ಪತ್ರೆಗಳಲ್ಲಿ ಉತ್ತಮ ವೇತನ, ಸೇವಾ ಭದ್ರತೆ ಹಾಗೂ ಹಲವು ಅವಕಾಶಗಳನ್ನು ಕಲ್ಪಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಬರುವ ವಿದ್ಯಾರ್ಥಿಗಳ ಸುರಕ್ಷತೆಯ ಎಲ್ಲ ಜವಾಬ್ದಾರಿ ವಹಿಸಿಕೊಳ್ಳಲಾಗುವುದು. ಸೇವೆಯನ್ನು ಸಲ್ಲಿಸಲು ಒಳ್ಳೆಯ ವಾತಾವರಣವನ್ನು ನಿರ್ಮಿಸಿ ಕೊಡಲಾಗುವುದು ಎಂದರು.
ಮಿಡಿಯಾಟೋಸ್ ಜಿಎಂಬಿಎಚ್ ನ್ಯೂರೆಂಬರ್ಗ್ ಆಸ್ಪತ್ರೆಯ ಮ್ಯಾಕ್ಸಿಮಿಲಿಯನ್ ಜಾನ್ ಮಾತನಾಡಿ, ಜರ್ಮನ್ ಆರೋಗ್ಯ ಸಂಸ್ಥೆಯಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ತಜ್ಞ ಸಿಬ್ಬಂದಿ ಅವಶ್ಯಕತೆಯಿದ್ದು, ಭಾರತದಲ್ಲಿರುವ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುವ ಅವಕಾಶ ನೀಡಲಾಗುತ್ತಿದೆ. ರೋಗಿಗಳೊಂದಿಗೆ ಅತ್ಯಂತ ಸ್ನೇಹಯುತವಾಗಿ ವರ್ತಿಸುವ ಮನೋಭಾವ ಭಾರತದ ನರ್ಸಿಂಗ್ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. ಆದ್ದರಿಂದಲೇ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂದರು.
ಉಲ್ರಿಕ್ ಥೆರೇಸಿಯಾ ವೈಸ್, ಎನ್ರಿಕ್ ರೋಲ್ಯಾಂಡ್ ಕಾರ್ಲ್ವನ್ ಜಾನ್, ಲ್ಯೂಕಾಸ್ ಫರ್ಡಿನಾಂಡ್ ಬಾಲ್ತಸರ್ ಬರ್ಟ್ಲ್, ರಾಹೇಲ್ ಸ್ಕೋನ್, ಡಾ. ಸೋಮಶೇಖರ ಪೂಜಾರ ಸುದ್ದಿಗೋಷ್ಠಿಯಲ್ಲಿದ್ದರು.
