ಚಿಕ್ಕಮಗಳೂರು: ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದರೆ ಜಗತ್ತೇ ನಮ್ಮನ್ನು ಗುರುತಿಸುತ್ತದೆ. ಈ ಅವಕಾಶ ಬೇರೆ ಯಾವುದೇ ಕ್ಷೇತ್ರದಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳು ಎಷ್ಟೇ ಕೆಲಸ ಮಾಡಿದರೂ ಅಷ್ಟಾಗಿ ಬೆಳಕಿಗೆ ಬರುವುದಿಲ್ಲ. ಆದರೆ ಕ್ರೀಡಾಪಟುಗಳು ಮಾಡುವ ಸಾಧನೆ ಪ್ರತಿಯೊಬ್ಬರೂ ಗುರುತಿಸುತ್ತಾರೆ ಎಂದು ಹೇಳಿದರು.
ಕ್ರೀಡಾಪಟುಗಳಲ್ಲಿ ಯಾವುದೇ ಕಾರಣಕ್ಕೂ ಕ್ರೀಡಾ ಸ್ಫೂರ್ತಿ ಕುಗ್ಗಬಾರದು. ಆಗ ಮಾತ್ರ ಕ್ರೀಡೆಯಲ್ಲಿ ವೈಯಕ್ತಿಕ ಸಾಧನೆ ಮಾಡಲು ಸಾಧ್ಯ. ಆಗದಿರುವ ಕೆಲಸವನ್ನು ಸಾಧ್ಯವಾಗಿಸುವ ಛಲ ತುಂಬುವ ಶಕ್ತಿ ಕ್ರೀಡೆಗಿದೆ. ಹೀಗಾಗಿಯೇ ಕ್ರೀಡಾಪಟುಗಳು ಬೇರೆ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿದೆ ಎಂದರು.
ಸ್ಪರ್ಧೆಗಳಲ್ಲಿ ಗೆಲ್ಲಲೇಬೇಕು ಎಂದು ಆಡಬೇಕು. ಆದರೆ ಇದೇ ಧ್ಯೇಯೋದ್ದೇಶ ಆಗಬಾರದು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕಾರ ಮಾಡುವ ಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಪಿ.ಮಂಜುಳಾ ಮಾತನಾಡಿ, ದಸರಾ ಕ್ರೀಡಾಕೂಟಕ್ಕೆ 500 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರ ಕಾಲದಿಂದಲೂ ದಸರಾ ಕ್ರೀಡಾಕೂಟ ಆಯೋಜಿಸಿಕೊಂಡು ಬರಲಾಗುತ್ತಿದೆ. 415 ವರ್ಷಗಳಿಂದ ಮೈಸೂರು ಸಂಸ್ಥಾನದಿಂದಲೂ ದಸರಾ ಕ್ರೀಡಾಕೂಟ ನಡೆಸಿಕೊಂಡು ಬರಲಾಗುತ್ತಿದೆ. ಜತೆಗೆ ಕೆಳದಿ ಅರಸರು, ಶೃಂಗೇರಿ ಮಠ, ಬಾಳೆಹೊನ್ನೂರು ಮಠದಿಂದಲೂ ಈ ಹಿಂದೆ ದಸರಾ ಕ್ರೀಡಾಕೂಟ ನಡೆಸಲಾಗುತ್ತಿತ್ತು ಎಂದು ಹೇಳಿದರು. ಗ್ರಾಮೀಣ ಭಾಗದ ಯುವಜನರ ಕ್ರೀಡಾ ಪ್ರತಿಭೆ ಗುರುತಿಸಲು ದಸರಾ ಕ್ರೀಡಾಕೂಟ ಸಹಕಾರಿಯಾಗಿದೆ. ದಸರಾ ಕ್ರೀಡಾಕೂಟಗಳ ಮೂಲಕವೇ ಕ್ರೀಡಾ ಜಗತ್ತಿನಲ್ಲಿ ಗುರುತಿಸಿಕೊಂಡು ಹೆಸರು ಮಾಡಿದವರು ಬಹಳಷ್ಟು ಮಂದಿ ಇದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ದಸರಾ ಕ್ರೀಡಾಕೂಟಗಳಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ವಾಲಿಬಾಲ್ ತರಬೇತುದಾರರಾದ ವಿನುತಾ, ಮಾಜಿ ಕ್ರೀಡಾಪಟು ಶಿವಕುಮಾರ್ ಇತರರಿದ್ದರು.