ನಾಡಿಗಾದ ನಷ್ಟ ಭರಿಸಲು ಸಾಧ್ಯವಿಲ್ಲ, ಭಾರತ ರತ್ನಕ್ಕೆ ಒತ್ತಾಯಿಸುವೆವು: ಶ್ರೀಗಳ ಶಿವೈಕ್ಯಕ್ಕೆ ನಾಯಕರ ಅತೀವ ಬೇಸರ

ತುಮಕೂರು: ಸಿದ್ಧಗಂಗೆಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಬೆಳಗ್ಗೆ 11.44 ನಿಮಿಷಕ್ಕೆ ಶಿವೈಕ್ಯರಾಗಿದ್ದಾರೆ. ಇಂದು ಸಂಜೆ 5 ಗಂಟೆಯಿಂದ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.

ಸಿದ್ಧಗಂಗಾ ಸ್ವಾಮೀಜಿಗಳು ನಿಧನರಾಧ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ, ಗೃಹ ಸಚಿವ ಎಂ.ಬಿ ಪಾಟೀಲ್​, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಹಿರಿಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ ಎಚ್ಡಿಕೆ, ” ಶ್ರೀಗಳಿಗೆ ವೈದ್ಯರು ಅತ್ಯುತ್ತಮ ಚಿಕಿತ್ಸೆ ನೀಡಿದರು. ಶ್ರೀಗಳೂ ಉತ್ತಮ ಸ್ಪಂದನೆ ನೀಡಿದರು. ಆದರೆ, ಜವರಾಯನೊಂದಿಗೆ ಪವಾಡದಂಥ ಹೋರಾಟವನ್ನೇ ನಡೆಸಿದರು. ಆದರೂ ಇಂದು ಶಿವೈಕ್ಯರಾಗಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದರು.

ಅವರ ಅಂತಿಮ ದರ್ಶನವನ್ನು ಉತ್ತಮವಾಗಿ ನೆರವೇರಿಸಬೇಕಿದೆ. ಕಿರಿಯ ಶ್ರೀಗಳು, ಸುತ್ತೂರು ಶ್ರೀಗಳು, ಬಿ.ಎಸ್.​ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮುಂದಿನ ವಿಧಿ ವಿಧಾನಗಳ ಬಗ್ಗೆ ತಿಳಿಸಲಾಗುವುದು ಎಂದರು.

“ಶ್ರೀಗಳು ನಮ್ಮನ್ನಗಲಿರುವುದು ನಾಡಿಗಾದ ನಷ್ಟ. ಅದನ್ನು ಭರಿಸಲು ಸಾಧ್ಯವಿಲ್ಲ,” ಎಂದೂ ಅತೀವ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ ಮತ್ತು ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆಯನ್ನೂ ಘೋಷಿಸಿದರು.

ಬಸವಯುಗದ ಎರಡನೇ ಅಧ್ಯಾಯ ಅಂತ್ಯ

ಶ್ರೀಗಳ ಅಗಲಿಕೆಯು ಬಸವಯುಗದ 2ನೇ ಅಧ್ಯಾಯ ಅಂತ್ಯದಂತಾಗಿದೆ. ಕೋಟ್ಯಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಭಕ್ತರು ಶಾಂತ ರೀತಿಯಲ್ಲಿ ಬಂದ ದರ್ಶನ ಪಡೆಯಬೇಕು. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಮನವಿ ಮಾಡಲಾಗುವುದು. ಕೋಟ್ಯಂತರ ಜನರ ಬೇಡಿಕೆಯನ್ನು ಪ್ರಧಾನಿ ಈಡೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಹೇಳಿದರು.

ಇಷ್ಟಲಿಂಗ ಪೂಜೆಯ ದಿವ್ಯ ಶಕ್ತಿ ಶ್ರೀಗಳಲ್ಲಿತ್ತು

ಶಿವಕುಮಾರ ಸ್ವಾಮೀಜಿಗಳಲ್ಲಿ ಇಷ್ಟಲಿಂಗ ಪೂಜೆಯ ದಿವ್ಯ ಶಕ್ತಿ ಇತ್ತು. ಬಸವಣ್ಣನವರ ಸಿದ್ಧಾಂತವನ್ನು ರೂಢಿಸಿಕೊಂಡಿದ್ದರು ಎಂದು ಗೃಹ ಸಚಿವ ಎಂ.ಬಿ. ಪಾಟೀಲ್​ ಹೇಳಿದರು.