More

  ದೇಶದ ಉತ್ಕರ್ಷಕ್ಕೆ ವಿಜ್ಞಾನ ಸಂಸ್ಥೆಗಳ ಮಹತ್ತರ ಕೊಡುಗೆ

  ಖ್ಯಾತ ವಿಜ್ಞಾನಿ ಸಿವಿ ರಾಮನ್ ಜಯಂತಿಯಾದ ಫೆಬ್ರವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಿ, ವೈಜ್ಞಾನಿಕ ಸಾಧನೆಗಳನ್ನು ಅನಾವರಣಗೊಳಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಖ್ಯಾತ ವೈಜ್ಞಾನಿಕ ಸಂಸ್ಥೆಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಟ್ಟಿದ್ದಾರೆ ವಿಜ್ಞಾನ-ತಂತ್ರಜ್ಞಾನ ಬರಹಗಾರರಾದ ಸುನೀಲ್ ಬಾರ್ಕರ್.

  ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು (ಐಐಎಸ್​ಸಿ): ವಿಜ್ಞಾನದ ಜತೆಗೆ ವಿನ್ಯಾಸ, ತಾಂತ್ರಿಕತೆ, ಆಡಳಿತ ಮತ್ತು ನಿರ್ವಹಣೆ ವಿಷಯಗಳ ಮೇಲೆ ಶಿಕ್ಷಣ ನೀಡುತ್ತ ಬಂದಿರುವ ಭಾರತೀಯ ವಿಜ್ಞಾನ ಸಂಸ್ಥೆ ಜಾಗತಿಕವಾಗಿ ಅತ್ಯುತ್ತಮ ಉನ್ನತ ವಿದ್ಯಾಭ್ಯಾಸದ ಕೇಂದ್ರಗಳಲ್ಲಿ ಒಂದು ಎಂಬ ಮನ್ನಣೆ ಗಳಿಸಿದೆ. 1909ರಲ್ಲಿ ಆರಂಭವಾದ ಈ ವೈಜ್ಞಾನಿಕ ಸಂಸ್ಥೆ 1958ರಲ್ಲಿ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾಯಿತು. ಸ್ವಾಮಿ ವಿವೇಕಾನಂದರ ಜತೆ ಜಮ್ಷೆಡ್​ಜಿ ಟಾಟಾ ಮಾತುಕತೆ ನಡೆಸುತ್ತಿದ್ದಾಗ ಮೊಳಕೆಯೊಡೆದ ಈ ಯೋಜನೆ ಮುಂದುವರಿದು ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ವಿಲಿಯಮ್ ರಾಮ್ೇ ಅವರ ಮಾರ್ಗದರ್ಶನದಲ್ಲಿ ಸೂಕ್ತ ಸ್ಥಳದ ಹುಡುಕಾಟದಲ್ಲಿದ್ದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಣಕಾಸಿನ ನೆರವಿನ ಜತೆಗೆ ಯಶವಂತಪುರದಲ್ಲಿ 370 ಎಕರೆ ಜಾಗವನ್ನು ದಾನವಾಗಿ ನೀಡಿದರು. ಜಾಗತಿಕವಾಗಿ 155ನೇ ಮತ್ತು ಏಷ್ಯಾದಲ್ಲಿ 52ನೇ ರ‍್ಯಾಂಕಿಂಗ್ ಹೊಂದಿರುವ ಈ ಸಂಸ್ಥೆಯ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತೀಯ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಾದ ಆರ್. ಚಿದಂಬರಂ, ಕೆ. ಸಿವನ್, ಸುಧಾ ಮೂರ್ತಿ, ಸತೀಶ್ ಧವನ್, ಸಿ.ಎನ್.ಆರ್. ರಾವ್ ಇದ್ದಾರೆ.

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ): ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ (ಐಎನ್​ಸಿಒಎಸ್​ಪಿಎಆರ್) ಎಂಬ ಹೆಸರಿನಿಂದ 1962ರಲ್ಲಿ ಭಾರತ ಸರ್ಕಾರ ಸ್ಥಾಪಿಸಿದ ಈ ಸಂಸ್ಥೆಯನ್ನು 1969ರಲ್ಲಿ ಇಸ್ರೋ ಎಂದು ಪುನರ್ನಾಮಕರಣಗೊಳಿಸಿ 1972ರಲ್ಲಿ ಬಾಹ್ಯಾಕಾಶ ಇಲಾಖೆಯ ಸುಪರ್ದಿಗೊಳಪಡಿಸಲಾಯಿತು. ಇದು ವಿಕ್ರಮ್ ಸಾರಾಭಾಯ್ ಅವರ ಕನಸಿನ ಕೂಸು. ರಾಷ್ಟ್ರದ ಪ್ರಗತಿಗಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ದೂರಸಂಪರ್ಕ, ಹವಾಮಾನ, ಟಿವಿ, ನೈಸರ್ಗಿಕ ಸಂಪನ್ಮೂಲ ಮೇಲೆ ನಿಗಾ ವಹಿಸುವುದರ ಜತೆಗೆ ಅವುಗಳ ಸಮರ್ಪಕ ಬಳಕೆ- ಇವೆಲ್ಲ ಇಸ್ರೋ ನಿರ್ವಿುಸಿ ನಭಕ್ಕೆ ಸೇರಿಸಿದ ಉಪಗ್ರಹಗಳಿಂದ ಸಾಧ್ಯವಾಗಿದೆ. ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರದಲ್ಲಿ ಕೆಲವು ಮೂಲಭೂತ ಸೌಕರ್ಯಗಳ ಜತೆ ವಿನ್ಯಾಸ ಮತ್ತು ಸಂಶೋಧನೆ ನಡೆಯುತ್ತಿದ್ದರೆ ಆಂಧ್ರದ ಶ್ರೀಹರಿಕೋಟಾದಿಂದ ರಾಕೆಟ್​ಗಳು ಉಡಾವಣೆ ಆಗುತ್ತವೆ. ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್​ಗಳು ತಿರುವನಂತಪುರದಲ್ಲಿ ನಿರ್ವಣಗೊಳ್ಳುತ್ತವೆ. ಭಾರತೀಯ ತಂತ್ರಜ್ಞಾನದ ಪಿಎಸ್​ಎಲ್​ವಿ ಮತ್ತು ಜಿಎಸ್​ಎಲ್​ವಿ ಉಪಗ್ರಹ ಹೊತ್ತೊಯ್ಯುವ ವಾಹನಗಳ ನಿರ್ವಣ, ಮೂರು ಚಂದ್ರಯಾನಗಳು, ಕೊನೆಯದರಲ್ಲಿ ಚಂದ್ರನ ದಕ್ಷಿಣ ಭಾಗದಲ್ಲಿ ಯಶಸ್ವಿ ಪದಾರ್ಪಣೆ, ಒಂದು ಮಂಗಲ ಯಾನ… ಮುಂತಾದವು ಭಾರತದ ಈ ಹೆಮ್ಮೆಯ ಸಂಸ್ಥೆಯ ಕೆಲವು ಸಾಧನೆಗಳು.

  ಭಾರತೀಯ ತಂತ್ರಜ್ಞಾನ ಸಂಸ್ಥೆ
  ಭಾರತೀಯ ತಂತ್ರಜ್ಞಾನ ಸಂಸ್ಥೆಯ 23 ಶಾಖೆಗಳು ಭಾರತದಾದ್ಯಂತ ಗುಣಮಟ್ಟದ ತಾಂತ್ರಿಕ ವಿದ್ಯಾಭ್ಯಾಸ ನೀಡುತ್ತಿವೆ. ಉನ್ನತ ಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಕುರಿತು ರಚಿಸಿದ ಸಮಿತಿ ಶಿಫಾರಸ್ಸಿನಂತೇ 1950ರಲ್ಲಿ ಪಶ್ಚಿಮ ಬಂಗಾಳದ ಖರಗಪುರದಲ್ಲಿ ದೇಶದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಲಾಯಿತು. ನಂತರ ಮುಂಬೈ, ಮದ್ರಾಸ್, ಕಾನ್ಪುರ್ ಮತ್ತು ದೆಹಲಿಗಳಲ್ಲಿ ಇನ್ನೂ ನಾಲ್ಕು ಶಾಖೆಗಳನ್ನು 1958ರಿಂದ 1961ರ ಸಮಯದಲ್ಲಿ ಆರಂಭಿಸ ಲಾಯಿತು. ಹೀಗೆ ವಿಸ್ತರಿಸುತ್ತ ಭಾರತದಲ್ಲಿ 23 ಶಾಖೆಗಳ ಜತೆಗೆ ವಿದೇಶಿ ನೆಲದಲ್ಲಿ 7 ಹೊಸ ಶಾಖೆಗಳನ್ನು ಆರಂಭಿಸಲಿದೆ. ಜಾಗತಿಕವಾಗಿ 40ನೇ(ಮುಂಬೈ) ರ್ಯಾಕಿಂಗ್​ನಲ್ಲಿದೆ.

  ಭಾರತೀಯ ವಾಯುಯಾನ ಸಂಸ್ಥೆ
  ವಾಲ್​ಚಂದ್ ಹೀರಾಚಂದ್ ಅವರು 1940ರಲ್ಲಿ ಮೈಸೂರು ರಾಜರ ಆಶ್ರಯದಲ್ಲಿ ‘ಹಿಂದೂಸ್ಥಾನ ಏರ್​ಕ್ರಾಫ್ಟ್ ಲಿಮಿಟೆಡ್’ ಹೆಸರಿನ ಯುದ್ಧವಿಮಾನಗಳನ್ನು ನಿರ್ವಿುಸುವ ಕಂಪನಿಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. 1942ರಲ್ಲಿ ಭಾರತ ಸರ್ಕಾರದ ತೆಕ್ಕೆಗೆ ಹೋದ ಈ ಕಂಪನಿ ಅಮೆರಿಕ ಮೂಲದ ಕಂಪನಿಯೊಂದರ ಜತೆ ಒಡಂಬಡಿಕೆ ಮಾಡಿಕೊಂಡು ವಿಮಾನಗಳನ್ನು ನಿರ್ವಿುಸಲು ಆರಂಭಿಸಿತು. 1951ರಲ್ಲಿ ಭಾರತ ಸರ್ಕಾರ ಈ ಕಂಪನಿಯನ್ನು ರಕ್ಷಣಾ ಇಲಾಖೆಯ ಸುಪರ್ದಿಗೆ ತಂದ ನಂತರ ಕೆಲ ವಿದೇಶಿ ಕಂಪನಿಗಳ ವಿನ್ಯಾಸದ ಸಹಕಾರದಿಂದ ವಿಮಾನಗಳನ್ನು ನಿರ್ವಿುಸುತ್ತ ನಿಧಾನವಾಗಿ ತನ್ನದೇ ವಿನ್ಯಾಸಗಳನ್ನು ರೂಪಿಸಲು ಆರಂಭಿಸಿತು. ಏರೋನಾಟಿಕ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯನ್ನು ಹಿಂದೂಸ್ಥಾನ್ ಏರ್​ಕ್ರಾಫ್ಟ್ ಲಿಮಿಟೆಡ್ ಕಂಪನಿ ಜತೆ ವಿಲೀನ ಮಾಡಿ 1964ರಲ್ಲಿ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ ಕಂಪನಿಯನ್ನಾಗಿ ನಾಮಕರಣ ಮಾಡಿತು. ಧ್ರುವ, ಚೀತಾ, ಚೇತಕ್, ಜಾಗ್ವಾರ್ ಇವು ಎಚ್​ಎಎಲ್​ನ ಕೆಲವು ಜನಪ್ರಿಯ ಉತ್ಪನ್ನಗಳು.

  ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ
  ಭಾರತೀಯ ವೈದ್ಯಕೀಯ ಕ್ಷೇತ್ರವನ್ನು ಸಮಗ್ರವಾಗಿ ವಿಮಶಿಸಿದ ಸರ್ ಜೋಸೆಫ್ ಭೋರ್ ನೇತೃತ್ವದ ಸಮಿತಿ 1946ರಲ್ಲಿ ಉತ್ಕೃಷ್ಟ ದರ್ಜೆಯ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸುವಂತೆ ಶಿಫಾರಸು ನೀಡಿತ್ತು. 1952ರಲ್ಲಿ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ ಯೋಜನೆಗೆ ಚಾಲನೆ ಸಿಕ್ಕಿತು. 1956ರಲ್ಲಿ ದೆಹಲಿಯಲ್ಲಿ ಈ ಸ್ವಾಯತ್ತ ವೈದ್ಯಕೀಯ ವಿಶ್ವವಿದ್ಯಾಲಯದ ಜನನವಾಯಿತು. 42 ವಿಭಾಗಗಳಲ್ಲಿ ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣ ನೀಡುವುದರ ಜತೆಗೆ ಸಂಶೋಧನೆ ಮತ್ತು ರೋಗಿಗಳ ಪಾಲನೆಯ ತರಬೇತಿಯನ್ನೂ ನೀಡುವ ಈ ಸಂಸ್ಥೆ 2023ರ ಕ್ಯೂಎಸ್ ಅಂತಾರಾಷ್ಟ್ರೀಯ ರ‍್ಯಾಂಕಿಂಗ್ ಪ್ರಕಾರ ಜಾಗತಿಕವಾಗಿ ಅತ್ಯುತ್ತಮ ವೈದ್ಯಕೀಯ ಕಾಲೇಜಿನ ಪಟ್ಟಿಯಲ್ಲಿ 123ನೇ ಸ್ಥಾನದಲ್ಲಿದೆ. ಪಿಎಂಎಸ್​ಎಸ್​ವೈ ಆರೋಗ್ಯ ಯೋಜನೆಯಡಿ ಹೆಚ್ಚುವರಿ ಏಮ್ಸ್​ಗಳನ್ನು ದೇಶದೆಲ್ಲೆಡೆ ವಿಸ್ತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿತು. ಇದರನ್ವಯ ಭೋಪಾಲ್, ಭುವನೇಶ್ವರ, ರಾಯಪುರ, ಪಟನಾ, ಋಷಿಕೇಶ್, ನಾಗಪುರ, ಹೈದರಾಬಾದ್, ದೇವಗಡ, ಗೋರಖ್​ಪುರ್, ಗುವಾಹಟಿ, ಕಲ್ಯಾಣಿ, ಭಟಿಂಡಾ, ರಾಯ್ಬರೇಲಿ ಮತ್ತು ಮಂಗಲಗಿರಿಯಲ್ಲಿ ಏಮ್ಸ್​ಗಳನ್ನು ಆರಂಭಿಸಲಾಗಿದೆ.

  ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ (ಎನ್​ಪಿಸಿಐಎಲ್)
  ಅಣುವಿದ್ಯುತ್​ಗೆ ಹಸಿರು ವಿದ್ಯುತ್ ಎಂಬ ಖ್ಯಾತಿ ಇದೆ. ಕನಿಷ್ಠ ತಾಜ್ಯವನ್ನು ಉತ್ಪಾದಿಸುವ ಜತೆಗೆ ಹಸಿರುಮನೆ ಅನಿಲಗಳನ್ನು ಹೊರಸೂಸದೆ ಇರುವುದು ಇದರ ಹೆಗ್ಗಳಿಕೆ. ಇದರ ವಾಣಿಜ್ಯ ಉತ್ಪಾದನೆ ಮೊದಲು ಆರಂಭವಾಗಿದ್ದು 1969ರಲ್ಲಿ ಮಹಾರಾಷ್ಟ್ರದ ತಾರಾಪುರದಲ್ಲಿ. ರಷ್ಯಾ ಮತ್ತು ಭಾರತದ ಈ ಜಂಟಿಯೋಜನೆ ಆಗ ಅಣುಶಕ್ತಿ ನಿಗಮದ ಸುಪರ್ದಿಯಲ್ಲಿತ್ತು. ನಂತರದ ದಿನಗಳಲ್ಲಿ ಅಣುಶಕ್ತಿ ನಿಗಮದ ಚಟುವಟಿಕೆಗಳನ್ನು ಸಂಶೋಧನೆಗೆ ಮೀಸಲಿಟ್ಟು ಅಣುಶಕ್ತಿಯ ಮೂಲದಿಂದ ವಾಣಿಜ್ಯ ವಿದ್ಯುತ್ ತಯಾರಿಕೆಗೆ 1987ರಲ್ಲಿ ಭಾರತೀಯ ಅಣುವಿದ್ಯುತ್ ನಿಗಮ ನಿಯಮಿತ (ಎನ್​ಪಿಸಿಐಎಲ್) ಎಂಬ ಪ್ರತ್ಯೇಕ ನಿಗಮವನ್ನು ಸ್ಥಾಪಿಸಲಾಯಿತು. ಆರಂಭದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ಎನ್​ಪಿಸಿಐಎಲ್, ಅಣುವಿದ್ಯುತ್ ತಯಾರಿಕೆಯ ಕಲೆಯನ್ನು ಮೈಗೂಡಿಸಿಕೊಂಡು ದೇಸೀ ತಂತ್ರಜ್ಞಾನದ ಸಹಾಯದಿಂದ ಇದೀಗ ಅಣುವಿದ್ಯುತ್ ಸ್ಥಾವರಗಳನ್ನು ನಿರ್ವಿುಸಿ ವಿದ್ಯುತ್ ಉತ್ಪಾದಿಸುತ್ತಿದೆ. ಭಾರತದಲ್ಲಿ ಸದ್ಯಕ್ಕೆ 23 ಅಣುವಿದ್ಯುತ್ ಸ್ಥಾವರಗಳ ಮೂಲಕ ಒಟ್ಟು 7480 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಕಡಿಮೆ ಸಮಯದಲ್ಲಿ ಅಣುವಿದ್ಯುತ್ ಸ್ಥಾವರಗಳ ನಿರ್ವಣ, ಅತಿ ಹೆಚ್ಚು ಸಮಯ ಸತತವಾಗಿ ವಿದ್ಯುತ್ ಉತ್ಪಾದನೆ (ಕೈಗಾ ಕರ್ನಾಟಕ) ಹೀಗೆ ಜಾಗತಿಕ ದಾಖಲೆಗಳನ್ನು ನಿರ್ವಿುಸುತ್ತ ಹೊರಟಿದೆ ಅಣುಶಕ್ತಿ ನಿಗಮ.

  ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
  ಸ್ವಾತಂತ್ರ್ಯಾನಂತರ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಆಂತರಿಕ ಜರೂರತ್ತುಗಳನ್ನು ಪೂರೈಸುವುದಕ್ಕಾಗಿ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯನ್ನು 1954ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿ ಅದನ್ನು ರಕ್ಷಣಾ ಖಾತೆಯ ಸುಪರ್ದಿಗೆ ಒಪ್ಪಿಸಿದಾಗ ಮೂಲ ಉದ್ದೇಶವಿದ್ದುದು ರಕ್ಷಣಾ ಉಪಕರಣ ಪೂರಕ ಎಲೆಕ್ಟ್ರಾನಿಕ್ಸ್ ವಸ್ತುಗಳ ನಿರ್ವಣ. ಅಂತೆಯೇ ಸಂಸ್ಥೆಯು ರಕ್ಷಣಾ ವ್ಯವಸ್ಥೆಗೆ ಅಗತ್ಯವಿದ್ದ ರೇಡಾರ್, ಕ್ಷಿಪಣಿ, ದೂರಸಂಪರ್ಕ, ಸಬ್​ವೆುರಿನ್, ಯುದ್ಧ ಟ್ಯಾಂಕರ್​ಗಳ ವಿನ್ಯಾಸ ಮತ್ತು ನಿರ್ವಣದಲ್ಲಿ ಸಂಪೂರ್ಣ ಎಲೆಕ್ಟ್ರಾನಿಕ್ಸ್​ನ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸಿತು. ಭಾರತ ಎಲೆಕ್ಟ್ರಾನಿಕ್ಸ್ ನಿರ್ವಿುಸಿದ ಅಪ್ಪಟ ಸ್ವದೇಶಿ ವಾಯು ರಕ್ಷಣಾ ವ್ಯವಸ್ಥೆ ‘ಆಕಾಶ್’ ಜಾಗತಿಕ ಮನ್ನಣೆಯನ್ನು ಗಳಿಸಿದೆ. ಭಾರತದ 7500 ಕಿಮೀ ಉದ್ದದ ಕಡಲ ತೀರದ ಮೇಲೆ ನಿಗಾ ಇಡುವ ರಕ್ಷಣಾ ವ್ಯವಸ್ಥೆ ಸಾರ್ವತ್ರಿಕ ಮೆಚ್ಚುಗೆಗೊಳಗಾಗಿದ್ದು ಹಲವು ದೇಶಗಳಿಗೆ ರಫ್ತಾಗಿದೆ. ಇಂದಿನ ಬೇಡಿಕೆಗಳಾದ ಡ್ರೋನ್​ವಿರೋಧಿ ವ್ಯವಸ್ಥೆ, ಉಪಗ್ರಹ ನಿರ್ವಣ, ರೈಲ್ವೆ ಮತ್ತು ಮೆಟ್ರೊ ಸಂಬಂಧಿ ಉತ್ಪನ್ನಗಳು, ಸೈಬರ್ ರಕ್ಷಣೆ, ಕೃತಕ ಬುದ್ಧಿಮತ್ತೆ, ವೈದ್ಯಕೀಯ ಕ್ಷೇತ್ರಗಳಲ್ಲೂ ತನ್ನ ಉತ್ಕೃಷ್ಟ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಂದ ಹೆಸರು ಗಳಿಸಿರುವ ಈ ಸಂಸ್ಥೆ ಕೋವಿಡ್ ಸಮಯದಲ್ಲಿ ಮೂವತ್ತು ಸಾವಿರ ವೆಂಟಿಲೇಟರ್​ಗಳನ್ನು ಅತಿ ಕಡಿಮೆ ಸಮಯದಲ್ಲಿ ನಿರ್ವಿುಸಿ ಪೂರೈಸಿತು. ಜತೆಗೆ ಚುನಾವಣೆಯ ಪ್ರಕ್ರಿಯೆಯನ್ನು ತನ್ನ ಇವಿ, ವಿವಿ ಪ್ಯಾಟ್ ಯಂತ್ರಗಳಿಂದ ಸರಳೀಕರಿಸಿದೆ.

  ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ
  ಹೋಮಿ ಜಹಾಂಗೀರ್ ಬಾಬಾರ ಕನಸಿನ ಫಲದಿಂದ ಜನ್ಮತಳೆದ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ ಆರಂಭವಾದುದು 1945ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ. ಈ ಸಂಸ್ಥೆಯನ್ನು ಅದೇ ವರ್ಷದ ಅಂತ್ಯದಲ್ಲಿ ಮುಂಬೈಗೆ ಸ್ಥಳಾಂತರಿಸಲಾಯಿತು. ನಂತರ ಖಐಊನ ಕಾರ್ಯವ್ಯಾಪ್ತಿಯನ್ನು ಪರಮಾಣು ಮಿಶ್ರಣ, ಕಂಪ್ಯೂಟರ್, ಅಣು ಜೀವಶಾಸ್ತ್ರ, ರೇಡಿಯೋ ಖಗೋಳ ವಿಜ್ಞಾನ, ಸೆಮಿಕಂಡಕ್ಟರ್ ವಿಭಾಗಗಳಿಗೆ ವಿಸ್ತರಿಸಲಾಯಿತು. ಬಳಿಕ ಸಂಸ್ಥೆಯನ್ನು ಭಾರತೀಯ ಪರಮಾಣು ಇಲಾಖೆಯ ಸುಪರ್ದಿಗೆ ತರಲಾಯಿತು. ಪುಣೆಯಲ್ಲಿ ರೇಡಿಯೋ ಖಗೋಳ ವಿಜ್ಞಾನದ ಸಂಶೋಧನಾ ಕೇಂದ್ರ, ಬೆಂಗಳೂರಿನಲ್ಲಿ ಅನ್ವಯಿತ ಗಣಿತ, ಜೈವಿಕ ವಿಜ್ಞಾನದ ಕೇಂದ್ರಗಳು ಶುರುವಾದವು. ಭಾರತದ ಮೊದಲ ಸ್ವದೇಶಿ ಡಿಜಿಟಲ್ ಕಂಪ್ಯೂಟರ್ ನಿರ್ವಿುಸಿದ ಶ್ರೇಯ ಖಐಊ ಗೆ ಸಲ್ಲುತ್ತದೆ. 1957ರಲ್ಲಿ ‘ಟೈಫ್ರಾಕ್’ ಕಂಪ್ಯೂಟರನ್ನು ಪರಮಾಣು ಸಂಶೋಧನಾ ಕಾರ್ಯದಲ್ಲಿ ವ್ಯಾಪಕವಾಗಿ ಬಳಸಲಾಯಿತು.

  ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತು
  ವೈಜ್ಞಾನಿಕ ಮತ್ತು ಔದ್ಯೋಗಿಕ ಇಲಾಖೆಯಡಿಯಲ್ಲಿ 1942ರಲ್ಲಿ ಸ್ಥಾಪಿಸಲಾದ ಈ ವೈಜ್ಞಾನಿಕ ಸಂಸ್ಥೆ ಜಾಗತಿಕವಾಗಿ ಎಲ್ಲ ಸರ್ಕಾರಿ ಸಂಶೋಧನಾ ಸಂಸ್ಥೆಗಳ ಪೈಕಿ 37ನೇ ಸ್ಥಾನದಲ್ಲಿದ್ದು, ಟಾಪ್ 100ರಲ್ಲಿ ಕಾಣಬರುವ ಏಕೈಕ ಭಾರತೀಯ ಸಂಸ್ಥೆಯಾಗಿದೆ. ಸಮುದ್ರಶಾಸ್ತ್ರ, ಭೂಭೌತಶಾಸ್ತ್ರ, ಜೇನೋಮ್ ಶಾಸ್ತ್ರ, ರಾಸಾಯನಿಕ, ಗಣಿ ಕೈಗಾರಿಕೆ, ನ್ಯಾನೋ ತಂತ್ರಜ್ಞಾನ ಹೀಗೆ ವೈವಿಧ್ಯಮಯ ವಿಷಯಗಳ ಮೇಲೆ ಸಂಶೋಧನೆ ನಡೆಸುತ್ತಿರುವ ಸಿಎಸ್​ಐಆರ್ ಇದೀಗ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯಡಿಯಲ್ಲಿ 37 ರಾಷ್ಟ್ರೀಯ ಪ್ರಯೋಗಶಾಲೆಗಳು, 39 ಸೇವಾಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹಲವು ವರ್ಷಗಳಿಂದ ಸಿಎಸ್​ಐಆರ್ ನಡೆಸಿದ ಸಂಶೋಧನೆಗಳಿಂದ ಕೃಷಿ, ನೈರ್ಮಲ್ಯ, ಇಂಧನ, ಆಹಾರ, ವಸತಿ ಕ್ಷೇತ್ರಗಳು ನೇರ ಫಲಾನುಭವಿಗಳಾಗಿವೆ. ತನ್ನ ಸಂಶೋಧನಾ ಕಾರ್ಯಗಳ ರಕ್ಷಣೆಗೆ ಈವರೆಗೆ 1100ಕ್ಕೂ ಹೆಚ್ಚು ಪೇಟೆಂಟ್​ಗಳನ್ನು ಹೊಂದಿದೆ.

  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
  ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಸಿ ಕೊಂಡಿದ್ದ ಹಲವು ಸಣ್ಣ ಸಂಸ್ಥೆಗಳನ್ನು ಒಗ್ಗೂಡಿಸಿ 1958ರಲ್ಲಿ ‘ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್​ವೆುಂಟ್ ಆರ್ಗನೈಸೇಷನ್’ (ಡಿಆರ್​ಡಿಒ) ಎಂದು ಮರುನಾಮಕರಣ ಮಾಡಲಾಯಿತು. ಭಾರತೀಯ ರಕ್ಷಣಾ ಇಲಾಖೆಯ ಸುಪರ್ದಿಯಲ್ಲಿರುವ ಈ ಸಂಸ್ಥೆ ರಕ್ಷಣಾ ಸಂಶೋಧನೆಯಲ್ಲಿ ಹಲವು ಸಾಧನೆಗಳನ್ನು ಮಾಡಿದೆ. ಈ ಸಂಸ್ಥೆ ಆರಂಭಿಸಿದ ‘ಪ್ರಾಜೆಕ್ಟ್ ಡೆವಿಲ್’ ಅಗ್ನಿ ಕ್ಷಿಪಣಿಯ ಅಭಿವೃದ್ಧಿಗೆ ನಾಂದಿ ಹಾಡಿತು. ನಂತರ ಪೃಥ್ವಿ, ಆಕಾಶ್, ತ್ರಿಶೂಲ್, ನಾಗ್ ಕ್ಷಿಪಣಿಗಳು ಬಂದವು. ಹಗುರ ಯುದ್ಧ ವಿಮಾನವಾದ ತೇಜಸ್, ದೂರದಿಂದ ಚಲಾಯಿಸಬಹುದಾದ ನಿಶಾಂತ್ ಯುದ್ಧ ವಿಮಾನ, ಪೈಲಟ್ ಇಲ್ಲದೆಯೇ ಚಲಾಯಿಸಬಹುದಾದ ಲಕ್ಷ ್ಯ 1, ದುರ್ಗಮ ಪ್ರದೇಶಗಳಲ್ಲಿಯೂ ಕೊಂಡೊಯ್ಯಬಹುದಾದ ಸೇತುವೆ ವ್ಯವಸ್ಥೆ ಸರ್ವತ್ರ, ಇವೆಲ್ಲವುದರ ಜತೆಗೆ ಹಲವು ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆಗಳಿಂದ ಭಾರತೀಯ ರಕ್ಷಣಾ ತಂತ್ರಜ್ಞಾನಕ್ಕೆ ಹೊಸ ಆಯಾಮವನ್ನು ಈ ಸಂಸ್ಥೆ ನೀಡುತ್ತ ಬಂದಿದೆ.

  ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿಕಾಂತ್ ಗಲಿಬಿಲಿಗೊಂಡಿದ್ದರು!

  ಅಪ್ಪಿತಪ್ಪಿ ಈ ಆಹಾರಗಳ ಜತೆ ಬಾಳೆಹಣ್ಣು ತಿನ್ನಬೇಡಿ… ತಿಂದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts