ಸಿನಿಮಾ

ತೋಟಗಾರಿಕೆ ಬೆಳೆಗಾರರಿಗೆ ಮೇಳ ಬೆನ್ನೆಲುಬು

*ಮಾವಿನೊಂದಿಗೆ ದ್ರಾಕ್ಷಿ ಮೇಳಕ್ಕೆ ಚಿಂತನೆ

*ರೈತರಿಂದ ಗ್ರಾಹಕರಿಗೆ ನೇರ ಮಾರಾಟ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಗಿ ಪ್ರಧಾನ ಬೆಳೆಯಾಗಿರುವ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಾಗಿ ಮಾವು ಹಾಗೂ ದ್ರಾಕ್ಷಿ ಬೆಳೆ ಮುಂಚೂಣಿಯಲ್ಲಿದೆ. ಅಕಾಲಿಕ ಮಳೆ, ಮಳೆ ಕೊರತೆ ಸೇರಿ ಇನ್ನಿತರ ಕಾರಣಗಳಿಂದ ನಿರೀಕ್ಷಿತ ಸಲು ಕಾಣದ ತೋಟಗಾರಿಕೆ ಬೆಳೆಗಾರರ ಬೆನ್ನೆಲುಬಾಗಿ ನಿಲ್ಲಲು ಮುಂದಡಿ ಇಟ್ಟಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಮಾವು ಹಾಗೂ ದ್ರಾಕ್ಷಿ ಮೇಳ ಆಯೋಜಿಸುವ ಚಿಂತನೆ ನಡೆಸಿದೆ.
ತೋಟಗಾರಿಕೆ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಕಸರತ್ತು ನಡೆಸುತ್ತಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಜಿಲ್ಲೆಯಲ್ಲಿ ಮಾವು ಹಾಗೂ ದ್ರಾಕ್ಷಿ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜನೆಗೆ ಸಿದ್ಧತೆ ನಡೆಸಿದೆ.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಾವು ಮೇಳ ಆಯೋಜಿಸಲಾಗಿತ್ತು. ಬಳಿಕ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ. ಇದಾದ ಬಳಿಕ ಕಳೆದ ವರ್ಷ ಜಿಲ್ಲಾ ತೋಟಗಾರಿಕೆ ಇಲಾಖೆ ಮಾವು ಮೇಳ ಆಯೋಜಿಸುವ ಮೂಲಕ ಎರಡನೇ ಬಾರಿ ದೊಡ್ಡಮಟ್ಟದ ಯಶಸ್ಸು ಕಂಡಿತ್ತು. ತೋಟಗಾರಿಕೆ ಬೆಳೆಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈ ಬಾರಿಯೂ ಇದೇ ಮಾದರಿಯಲ್ಲಿ ಮೇಳ ಆಯೋಜಿಸುವ ಸಂಬಂಧ ಅಧಿಕಾರಿಗಳು ಚರ್ಚೆ ನಡೆಸಿದ್ದು, ತೋಟಗಾರಿಕೆ ಬೆಳೆಗಾರರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ.50ಕ್ಕೂ ಹೆಚ್ಚು ವನಹಳ್ಳಿಯ ನಂದಿ ಉಪಚಾರ್ ಹೋಟೆಲ್ ಮುಂಭಾಗದ ರಾಣಿ ಸರ್ಕಲ್ ಬಳಿ ಎರಡೂ ಬಾರಿ ಮೇಳ ಆಯೋಜನೆ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ನಾಲ್ಕೂ ತಾಲೂಕುಗಳ ರೈತರಿಗೆ ಸೂಕ್ತ ಸ್ಥಳ ಎನಿಸಿತ್ತು. ಮೇಳದಲ್ಲಿ 50ಕ್ಕೂ ಹೆಚ್ಚು ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ದೊಡ್ಡಮಟ್ಟದಲ್ಲಿಯೇ ಮೇಳ ಆಯೋಜಿಸಲು ಚಿಂತನೆ ನಡೆಸಿದ್ದು, ಮೊದಲಿಗೆ ಮಾವು ಮೇಳ, ಜನವರಿ ವೇಳೆಗೆ ದ್ರಾಕ್ಷಿ ಮೇಳ ಹಮ್ಮಿಕೊಳ್ಳುವ ಸಂಬಂಧ ಚರ್ಚೆ ನಡೆಯುತ್ತಿದೆ.


ಇಳುವರಿ ಕುಸಿತ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಮಾವು ಇಳುವರಿ ಕಡಿಮೆಯಾಗಿದೆ. ಸಾಮಾನ್ಯವಾಗಿ ಮಾವಿನ ಇಳುವರಿಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಳಿತವಾಗುತ್ತದೆ ಎನ್ನಲಾಗಿದ್ದು, ಕಳೆದ ಬಾರಿಗಿಂತ ಕಡಿಮೆ ಇಳುವರಿ ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಬಿರುಗಾಳಿ ಸಹಿತ ಮಳೆಯಿಂದಾಗಿ ಮರದಿಂದ ಸಲು ಉದುರಿಬಿದ್ದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಜಿಲ್ಲೆಯಲ್ಲಿ 7,586.94 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾಗುತ್ತಿದ್ದು, ಪ್ರಮುಖವಾಗಿ ತೋತಾಪುರಿ, ಮಲ್ಲಿಕಾ, ರಸಪುರಿ, ಸೇಂದೂರ, ಬಾದಾಮಿ ತಳಿಗಳಿಗೆ ಬೇಡಿಕೆ ಇದೆ. ವಾರ್ಷಿಕವಾಗಿ 22 ರಿಂದ 25 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಗುಣಮಟ್ಟದ ಹಣ್ಣುಗಳ ನೇರ ಮಾರಾಟ ವ್ಯವಸ್ಥೆಯೊಂದಿಗೆ ರೈತರಿಗೆ ಉತ್ತಮ ಬೆಲೆ ಸಿಗಬೇಕು ಗ್ರಾಹಕರಿಗೂ ರಿಯಾಯಿತಿ ದರದಲ್ಲಿ ಹಣ್ಣು ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

16 ಲಕ್ಷ ರೂ ವಹಿವಾಟು: ಕಳೆದ ವರ್ಷ 3 ದಿನ ಆಯೋಜಿಸಿದ್ದ ಮಾವು ಹಾಗೂ ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ 16 ಲಕ್ಷ ರೂ. ವಹಿವಾಟು ನಡೆದಿತ್ತು. ಕಳೆದೆರಡು ವರ್ಷದಿಂದ ಕರೊನಾ ಕಾರಣದಿಂದ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು. ಈಗ ಮತ್ತೊಮ್ಮೆ ಆಯೋಜನೆ ಮೂಲಕ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮೇಳೆ ಆಯೋಜನೆ ಕುರಿತು ಸಿದ್ಧತೆ ನಡೆಯುತ್ತಿದೆ.ಜಿಲ್ಲೆಯ ತೋಟಗಾರಿಕೆ ಬೆಳೆಗಾರರ ಆರ್ಥಿಕ ಲಾಭದ ದೃಷ್ಟಿಯಿಂದ ಮೇಳ ಆಯೋಜಿಸುವ ಚಿಂತನೆ ನಡೆಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಮಾವು ಇಳುವರಿ ಕಡಿಮೆ ಇದೆ. ಆದರೆ ದ್ರಾಕ್ಷಿ ಹೆಚ್ಚಿನ ಸಲಿನ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮೇಳದ ಜತೆಗೆ ದೊಡ್ಡಮಟ್ಟದಲ್ಲಿ ಜನವರಿ ವೇಳೆಗೆ ದ್ರಾಕ್ಷಿ ಮೇಳ ಆಯೋಜಿಸುವ ಚಿಂತನೆ ನಡೆಸಲಾಗಿದೆ. ರೈತರಿಂದ ಗ್ರಾಹಕರಿಗೆ ನೇರ ಮಾರಾಟದ ಮೇಳದ ಕುರಿತು ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ.
ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

Latest Posts

ಲೈಫ್‌ಸ್ಟೈಲ್