ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

ಸಂಬರಗಿ: ಶಿರೂರ ಗ್ರಾಪಂ ವ್ಯಾಪ್ತಿಯ ಪಾಂಡೇಗಾಂವ, ಖೋತವಾಡಿ ಹಾಗೂ ಶಿರೂರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಹೋರಾಟಗಾರ ದೋಂಡಿರಾಮ ಸುತಾರ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು.

ದೋಂಡಿರಾಮ ಸುತಾರ ಮಾತನಾಡಿ, ಹಲವು ಬಾರಿ ಗ್ರಾಪಂ, ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ, ಜನರು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಪಿಡಿಒ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಗ್ರಾಮಸ್ಥರು ಹಲವು ಬಾರಿ ವಿನಂತಿಸಿದರೂ ನೀರಿನ ಟ್ಯಾಂಕರ್ ಪ್ರಾರಂಭ ಮಾಡಿಲ್ಲ. ಶೀಘ್ರ ಆರಂಭಿಸದಿದ್ದರೆ, ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಪಂ ಇಒ ರವಿ ಬಂಗಾರೆಪ್ಪನವರ ಸ್ಥಳಕ್ಕೆ ಭೇಟಿ ನೀಡಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿ ಗ್ರಾಪಂ ಕಾರ್ಯಾಲಯದ ಬೀಗ ತೆರೆದರು. ಪ್ರತಿಭಟನೆ ಹಿಂಪಡೆಲಾಯಿತು. ತುಕಾರಾಮ ಗಾಯಕವಾಡ, ಮಚಿಂದ್ರ ಖಾಂಡೇಕರ, ಶ್ರೀಮಂತ ಕಾರ್ಕೆ, ಸುಖದೇವ ಹರಳೆ, ರಾಮದಾಸ ಪಾಟೀಲ, ರಮೇಶ ದೇಶಿಂಗೆ, ತಾನಾಜಿ ಖೋತ ಇದ್ದರು.