ಬೆಂಗಳೂರು: ಕೇಂದ್ರ ಸರ್ಕಾರ ಮಂದಿಸಿರುವ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಈ ಬಾರಿ ಕಳೆದ ಬಜೆಟ್‌ಗಿಂತ ಶೇ.12.96 ಅನುದಾನ ಹೆಚ್ಚಳ ಮಾಡಿದೆಯಾದರೂ, ಒಟ್ಟಾರೆ ಬಜೆಟ್ ಗಾತ್ರದಲ್ಲಿ ಶೇ.3ಕ್ಕಿಂತ ಕಡಿಮೆ ಇದೆ. ಇನ್ನೂ ಹೆಚ್ಚಿನ ಅನುದಾನ ನೀಡುವ ಅಗತ್ಯವಿತ್ತು. ಇತರೆ ಮುಂದುವರಿದ ದೇಶಗಳಲ್ಲಿ ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ, ಸವಲತ್ತು ಹಾಗೂ ಅನುದಾನ ನೀಡಲಾಗುತ್ತ್ತಿದೆ. ಆದರೆ ನಮ್ಮ ದೇಶದಲ್ಲಿ ಆರೋಗ್ಯಕ್ಕೆ ನೀಡುತ್ತಿರುವ ಆದ್ಯತೆ ಹಾಗೂ ಅನುದಾನ ಎರಡೂ ತೀರಾ ಕಡಿಮೆ ಇದೆ.
ಕ್ಯಾನ್ಸರ್ ಗುಣಪಡಿಸಲು ನೀಡುವ ಮೂರು ಔಷಧಗಳ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿ ೋಷಿಸಿರುವುದು ಸ್ವಾಗತಾರ್ಹ. ಕೇವಲ ಮೂರು ಔಷಧಗಳಿಗೆ ವಿನಾಯಿತಿ ನೀಡಿದರೆ ಏನು ಪ್ರಯೋಜನ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೀಡಲಾಗುವ ಎಲ್ಲ ಪ್ರಮುಖ ಆದ್ಯತಾ ಔಷಧಗಳ ಮೇಲೂ ಕಷ್ಟಮ್ಸ್ ಸುಂಕ ವಿನಾಯಿನಿ ನೀಡಬೇಕಿತ್ತು. ಕಳೆದ ಬಜೆಟ್‌ನಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ ವಿತರಿಸುವ ಬಗ್ಗೆ ೋಷಣೆ ಮಾಡಲಾಗಿತ್ತು. ಆದರೆ ಆ ಬಗ್ಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಂತಿಲ್ಲ. ಈ ಬಗ್ಗೆ ತುರ್ತು ಗಮನಹರಿಸಿ 9ರಿಂದ 15 ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ಒದಗಿಸಿದಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ಸಂಪೂರ್ಣ ನಿವಾರಣೆ ಮಾಡಬಹುದಾಗಿದೆ.
ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಕ್ಯಾನ್ಸರ್ ಬಾಧಿತರಲ್ಲಿ ಶೇ.60 ಮಂದಿ 3 ಮತ್ತು 4ನೇ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಹೀಗೆ ಬಂದವರಿಗೆ ಚಿಕಿತ್ಸೆಯು ಗಂಭೀರವಾಗಿರುತ್ತದೆ. ಆಸ್ಪತ್ರೆ ವಾಸದ ಅವಧಿಯೂ ಹೆಚ್ಚಿರುತ್ತದೆ. ಇದರಿಂದ ದೇಶಕ್ಕೆ ಹಾಗೂ ರೋಗಿಗಳ ಕುಟುಂಬಕ್ಕೆ ಆರ್ಥಿಕ ಹೊರೆಯಾಗಲಿದೆ. ಅದೇ ಕ್ಯಾನ್ಸರ್ ಸ್ಕ್ರೀನಿಂಗ್‌ಗೆ ಆದ್ಯತೆ ನೀಡಿದ್ದರೆ, ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಿದರೆ ಚಿಕಿತ್ಸೆ ಪ್ರಮಾಣ ಹಾಗೂ ಆಸ್ಪತ್ರೆ ವಾಸಿ ಎರಡೂ ಕಡಿಮೆಯಾಗುತ್ತಿತ್ತು.
ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಸದ್ಯ ಲಭ್ಯವಿರುವ 5 ಲಕ್ಷ ರೂ. ಮಿತಿಯ ಚಿಕಿತ್ಸಾ ವೆಚ್ಚವನ್ನು 10 ಲಕ್ಷಕ್ಕೆ ಹೆಚ್ಚಿಸಬೇಕಿತ್ತು. ಆದರೆ ಅದು ಆಗಿಲ್ಲ. ಜತೆಗೆ ಅಂಗಾಂಗ ಕಸಿ ಹಾಗೂ ಅಸ್ತಿಮಜ್ಜೆ ಕಸಿ ಚಿಕಿತ್ಸೆಯನ್ನು ಯೋಜನೆ ತರಬೇಕಿತ್ತು. ಅಸ್ತಿಮಜ್ಜೆ ಕಸಿ ಚಿಕಿತ್ಸೆಗೆ ಒಳಗಾದವರಿಗೆ ಜೀವನ ಪರ್ಯಂತ ಅಗತ್ಯ ಇರುವ ಇಮ್ಯೂನೋ ಸಪ್ರೆಷನ್ ಔಷಧ ಉಚಿತವಾಗಿ ಒದಗಿಸಬೇಕಿತ್ತು. ಈ ಯಾವುದೂ ಆಗಿಲ್ಲ. ಇದರಿಂದ ಬಡವರಿಗೆ ಕ್ಯಾನ್ಸರ್ ಸೇರಿ ದೀರ್ಘಾವಧಿ ಕಾಡುವ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದು ಕಷ್ಟವಾಗಲಿದೆ. ಹಾಗಾಗಿ ಸರ್ಕಾರ ಎಮರ್ಜೆನ್ಸಿ ಟ್ರಾಮಾ ಸೇರಿ ಕೆಲ ಗಂಭೀರ ಕಾಯಿಲೆಗಳಿಗೆ ಪ್ರತ್ಯೇಕ ನಿಧಿ ಸ್ಥಾಪಿಸಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ.
ಆರೋಗ್ಯ ಸೇವೆ ಉತ್ತಮ ಪಡಿಸುವುದಾಗಿ ಕೇವಲ ಕಟ್ಟಡಗಳನ್ನು ನಿರ್ಮಿಸುತ್ತಾ ಹೋದರೆ ಪ್ರಯೋಜನವಿಲ್ಲ. ಬದಲಿಗೆ ಇರುವ ಕಟ್ಟಡಗಳನ್ನೇ ಮೇಲ್ದರ್ಜೆಗೇರಿಸಿ ಅಗತ್ಯ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಹೆಚ್ಚಿಸಿದರೆ ಇರುವ ವ್ಯವಸ್ಥೆಯಲ್ಲಿಯೂ ಗುಣಮಟ್ಟದ ಸೇವೆ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿತ್ತು.