ಅಲ್ಲಂಪುರ ಗ್ರಾಮ ಪಂಚಾಯಿತಿಯ 8 ಮಂದಿ ಸದಸ್ಯತ್ವ ರದ್ದು

ಚಿಕ್ಕಮಗಳೂರು: ಗ್ರಾಪಂಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ದುರುಪಯೋಗ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಅಲ್ಲಂಪುರ ಗ್ರಾಪಂ ಅಧ್ಯಕ್ಷರೂ ಸೇರಿ 8 ಮಂದಿಯ ಸದಸ್ಯತ್ವ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಲ್ಲಂಪುರ ಗ್ರಾಪಂನ ಅಧ್ಯಕ್ಷೆ ಗಾಯತ್ರಿ ಮತ್ತು ಸದಸ್ಯರಾದ ಬೇಬಿ, ಸಿ.ಜಿ.ಲೀಲಾ, ಗೋಪಾಲಕೃಷ್ಣ, ಪ್ರದೀಪ್, ಬಿ.ಪಿ.ಹಾಲೇಶ್, ಎಂ.ರಮೇಶ್ ಮತ್ತು ಡಿ.ರವಿ ತಮ್ಮ ಸದಸ್ಯತ್ವಕ್ಕೆ ಕುತ್ತು ತಂದುಕೊಂಡವರು. ಭ್ರಷ್ಟಾಚಾರದ ಆರೋಪ ಹೊತ್ತ ಜನಪ್ರತಿನಿಧಿಗಳು ಸದಸ್ಯತ್ವ ರದ್ದತಿಯ ಶಿಕ್ಷೆಗೆ ಒಳಗಾದ ಅಪರೂಪದ ಪ್ರಕರಣ ಇದಾಗಿದ್ದು, ಇತರರಿಗೂ ಇದೊಂದು ಪಾಠವಾಗಲಿದೆ. ಪ್ರಸ್ತುತ ಅಧ್ಯಕ್ಷರು ಸೇರಿ ಎಂಟು ಸದಸ್ಯರ ಸದಸ್ಯತ್ವ ರದ್ದಾಗಿದ್ದು, ಮುಂದೆ ಗ್ರಾಪಂ ಸೂಪರ್​ಸೀಡ್ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ.

ತನಿಖೆಯ ಸಂದರ್ಭ ಈ ಸದಸ್ಯರು ಹಣ ದುರುಪಯೋಗಪಡಿಸಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 43(ಎ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ನಿರ್ದೇಶಕ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಮುಬಾರಕ್ ಅಹ್ಮದ್ ಈ ಆದೇಶ ಹೊರಡಿಸಿದ್ದಾರೆ.

ಅಲ್ಲಂಪುರ ಗ್ರಾಪಂನಲ್ಲಿ ಆದದ್ದೇನು?: ಗ್ರಾಪಂನ ವಿವಿಧ ಯೋಜನೆಯ ಕಾಮಗಾರಿಗಳ ಬಾಬ್ತು ಅಧ್ಯಕ್ಷರೂ ಸೇರಿ ಈ ಸದಸ್ಯರಲ್ಲಿ ಮಹಿಳಾ ಸದಸ್ಯರು ತಮ್ಮ ಪತಿಯ ಹೆಸರಿಗೆ ಹಾಗೂ ಇನ್ನು ಕೆಲವರು ನೇರವಾಗಿ ತಮ್ಮ ಹೆಸರಿಗೆ ಚೆಕ್ ಪಡೆದುಕೊಂಡಿದ್ದಾರೆ. ಇದರಿಂದ ಅಧಿನಿಯಮ 1993ರ 43-ಎ(4) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು 2018ರ ಜನವರಿಯಲ್ಲಿ ಜಿಪಂ ಸಿಇಒ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಕಾಮಗಾರಿಗೆ ಬಿಡುಗಡೆ ಮಾಡಿದ ಹಣ: ತಮ್ಮ ವಾರ್ಡ್ ವ್ಯಾಪ್ತಿಯ ರಸ್ತೆಯು ದತ್ತಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಮತ್ತು ಕೆಮ್ಮಣ್ಣುಗುಂಡಿಗೆ ಹೋಗುವ ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಜತೆಗೆ ಕಲ್ಲೇದೇವರಪುರದ ದಲಿತ ಜನಾಂಗ ವಾಸಿಸುವ ಅಕ್ಕಪಕ್ಕದ ಚರಂಡಿಗಳು ಕೆಸರು, ಕಡ್ಡಿಗಳಿಂದ ತುಂಬಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದ ಹಿನ್ನೆಲೆಯಲ್ಲಿ ಹೊರಗಿನಿಂದ ದಿನಗೂಲಿ ಕೆಲಸಗಾರರನ್ನು ಕರೆಸಿ ಅದನ್ನು ಸ್ವಚ್ಛ ಮಾಡಿಸಿದ್ದರು. ಕಾರ್ವಿುಕರು ಬೇರೆ ಊರಿನವರಾಗಿ ಅವರಿಗೆ ಬ್ಯಾಂಕ್ ಖಾತೆ ಇಲ್ಲದ ಹಿನ್ನೆಲೆಯಲ್ಲಿ ಅವರಿಗೆ ನೀಡಬೇಕಾದ ಕೂಲಿ ಹಣವನ್ನು ನನ್ನ ಪತಿ ಚೆಕ್ ಮೂಲಕ ಹಾಗೂ ಇತರ ಸದಸ್ಯರು ನೇರವಾಗಿ ಗ್ರಾಪಂನಿಂದ ಪಡೆದು ಕಾರ್ವಿುಕರಿಗೆ ಸಂದಾಯ ಮಾಡಿದ್ದಾಗಿ ಹೀಗೆ ತನಿಖೆಯ ಸಂದರ್ಭ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಬೇಬಿ, ಗೋಪಾಲಕೃಷ್ಣ ಮತ್ತು ಪ್ರದೀಪ್ ಸಮಜಾಯಿಷಿ ನೀಡಿದ್ದಾರೆ.

ಮಾಹಿತಿ ಕೊರತೆಯ ಪ್ರಮಾದ: ಗ್ರಾಪಂ ನೌಕರರು ಮಾಹಿತಿ ನೀಡದೆ ಇರುವುದರಿಂದ ಈ ಪ್ರಮಾದ ಸಂಭವಿಸಿದೆ ಎಂದು ಕೆಲವರು ತಿಳಿಸಿದ್ದಾರೆ. ಸದಸ್ಯರಾಗಿ ಚೆಕ್ ಪಡೆಯಬಾರದೆಂಬ ಮಾಹಿತಿಯ ಕೊರತೆಯಿಂದಾಗಿ ಈ ಪ್ರಮಾದ ಉಂಟಾಗಿದೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಸದಸ್ಯತ್ವ ಮುಂದುವರಿಸಿಕೊಡುವಂತೆ ನೇರ ಚೆಕ್ ಪಡೆದುಕೊಂಡ ಸದಸ್ಯರು ಕೋರಿದ್ದರು.

ಸದಸ್ಯೆ ಲೀಲಾ ನೋಟಿಸ್​ಗೆ ಉತ್ತರ ನೀಡಿ ತಮ್ಮ ವ್ಯಾಪ್ತಿಯ ಬ್ಯಾಗದಹಳ್ಳಿಯ ದಲಿತ ಕಾಲನಿಯ ಪೈಪ್​ಲೈನ್ ದುರಸ್ತಿ ಮಾಡಿಸಿದ್ದು ಕಾಮಗಾರಿಯ ಹಣವನ್ನು ಚೆಕ್ ಮೂಲಕ ನನ್ನ ಪತಿಗೆ ಪಾವತಿಸಿದ್ದು, ಬಳಿಕ ಅದನ್ನು ಸಂಬಂಧಪಟ್ಟ ಸಾಮಗ್ರಿ ಮತ್ತು ಕಾರ್ವಿುಕರಿಗೆ ನೀಡಲಾಗಿದೆ ಎಂದು ತಿಳಿಸಿದ್ದರು. ಬಿ.ಪಿ.ಹಾಲೇಶ್ ಉತ್ತರಿಸಿ, ಬ್ಯಾಗದಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಯ ವೆಚ್ಚವನ್ನು ನನ್ನ ಕೈಯಿಂದಲೇ ಭರಿಸಿ ಪೂರ್ಣಗೊಳಿಸಿ ಬಳಿಕ ಗ್ರಾಪಂನಿಂದ ಚೆಕ್ ಮೂಲಕ ಹಣ ಪಡೆದಿದ್ದು, ಈ ಪ್ರಮಾದಕ್ಕೂ ತಮಗಿರುವ ಮಾಹಿತಿ ಕೊರತೆಯೇ ಕಾರಣ ಎಂದು ವಿವರಣೆ ನೀಡಿದ್ದಾರೆ.

ಸದಸ್ಯ ಎಂ.ರಮೇಶ್ ವಿವರಣೆ ನೀಡಿ, ವಾರ್ಡ್​ನಲ್ಲಿ ಡೆಂಘೆ ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಚರಂಡಿ ಸ್ವಚ್ಛತೆ ಮಾಡಿಸಲು ದೂರದ ಊರಿಂದ ದಿನಗೂಲಿ ಕೆಲಸಗಾರರನ್ನು ಕರೆತಂದು ಸ್ವಚ್ಛ ಮಾಡಿಸಿ ಕೈಯಿಂದಲೇ ಕೂಲಿ ನೀಡಿದ್ದು, ಬಳಿಕ ನನ್ನ ಹೆಸರಿಗೆ ಚೆಕ್ ಮೂಲಕ ಹಣ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ. ಡಿ.ರವಿ ಸಮಜಾಯಿಷಿ ನೀಡಿ, ತಮ್ಮ ವಾರ್ಡ್​ನಲ್ಲಿ ಸ್ವಚ್ಛತೆ ಕಾರ್ಯಕ್ಕೆ ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ಕಾರ್ಯ ನಿರ್ವಹಿಸಲಾಗಿದ್ದು, ಈ ಸಂಬಂಧ ಗ್ರಾಪಂನ ತಾತ್ಕಾಲಿಕ ಸಿಬ್ಬಂದಿ ನನ್ನ ಹೆಸರಿನಲ್ಲೇ ಚೆಕ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಯಾವ್ಯಾವ ಸದಸ್ಯರಿಗೆ ಎಷ್ಟೆಷ್ಟು ಹಣ?: ಸದಸ್ಯೆ ಬೇಬಿ ಅವರ ಪತಿ ಕೃಷ್ಣ ಹೆಸರಿಗೆ 86,662 ರೂ., ಹಾಲಿ ಅಧ್ಯಕ್ಷೆ ಗಾಯತ್ರಿ ಅವರ ಪತಿ ಧ್ರುವೀಶ್ ಹೆಸರಿಗೆ 35,782 ರೂ., ಸದಸ್ಯೆ ಲೀಲಾ ಅವರ ಪತಿ ಪರಮೇಶ್ ಹೆಸರಿಗೆ 10 ಸಾವಿರ ರೂ. ಹಾಗೂ ಸದಸ್ಯ ಗೋಪಾಲಕೃಷ್ಣ ಹೆಸರಿಗೆ 32,556 ರೂ., ಸದಸ್ಯ ಪ್ರದೀಪ್ ಹೆಸರಿಗೆ 26,250 ರೂ., ಹಾಲೇಶ್ ಹೆಸರಿಗೆ 2,824 ರೂ., ಎಂ.ರಮೇಶ್ ಹೆಸರಿಗೆ 6,192 ರೂ. ಹಾಗೂ ಡಿ.ರವಿ 5,400 ರೂ. ನೇರವಾಗಿ ತಮ್ಮ ಹೆಸರಿಗೆ ಚೆಕ್ ಮೂಲಕ ಪಡೆದಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

Leave a Reply

Your email address will not be published. Required fields are marked *