ಮುಂಡರಗಿ: ಪಿಂಜಾರ/ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ನದಾಫ್/ಪಿಂಜಾರ ಸಂಘದ ತಾಲೂಕು ಘಟಕದಿಂದ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯಾದ್ಯಂತ 22ರಿಂದ 25 ಲಕ್ಷ ಜನಸಂಖ್ಯೆ ಹೊಂದಿರುವ ನದಾಫ್/ಪಿಂಜಾರ ಜನಾಂಗ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದ ಮತ್ತು ಕಡುಬಡತನದ ನೆರಳಲ್ಲಿ ಕಷ್ಟಕರ ಜೀವನ ನಡೆಸುತ್ತಿರುವ ಶೋಷಿತ ಸಮಾಜವಾಗಿದೆ.
ಸರ್ಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಇತರ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸತತ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯೆಯಿಂದ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗುತ್ತಿದ್ದಾರೆ. ಹಲವಾರು ವರ್ಷಗಳಿಂದ ಹೋರಾಡಿ ಸಮಾಜದ ಅಭಿವೃದ್ಧಿಗೆ ನೇರವಾಗಿ ಅನುಕೂಲವಾಗಲೆಂದು ಪ್ರತ್ಯೇಕ ನಿಗಮ ಮಂಡಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಹಿಂದಿನ ಸರ್ಕಾರ ಈ ಜನಾಂಗಕ್ಕೆ ನೇರವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಭಿವೃದ್ಧಿ ನಿಗಮದ ಆದೇಶದೊಂದಿಗೆ ಘೊಷಣೆ ಮಾಡಿದೆ. ಆದರೆ, ಅನುದಾನ ನೀಡುವಲ್ಲಿ ಸ್ಪಂದಿಸಿಲ್ಲ. ಈಗಿನ ಸರ್ಕಾರವು ಪಿಂಜಾರ/ನದಾಫ್ ಪ್ರತ್ಯೇಕ ನಿಗಮಕ್ಕೆ ಅವಶ್ಯವಿರುವ ಅನುದಾನ ನೀಡಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಬಹಿರಂಗವಾಗಿ ಪ್ರತಿಭಟನೆ, ಧರಣಿಗಳನ್ನು ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಹಸೀಲ್ದಾರ್ ಪರವಾಗಿ ಗ್ರೇಡ್-2 ತಹಸೀಲ್ದಾರ್ ಕೆ.ರಾಧಾ ಮನವಿ ಸ್ವೀಕರಿಸಿದರು. ತಾಲೂಕು ಘಟಕದ ಅಧ್ಯಕ್ಷ ಮೌಲಾಸಾಬ್ ನದಾಫ್, ಜಿಲ್ಲಾ ಉಪಾಧ್ಯಕ್ಷ ರಾಜಾಭಕ್ಷೀ ಹರ್ಲಾಪುರ, ಬಾಲೆಸಾಬ ನದಾಫ್, ರಸೂಲ್ಸಾಬ್ ಕಿನ್ನಾಳ, ಪೀರಸಾಬ್ ನದಾಫ್, ರಾಜೇಸಾಬ್ ಡಂಬಳ, ಮಾಬುಸಾಬ್ ಕವಲೂರ, ಪ್ರೇಮಸಾಬ್ ಹರ್ಲಾಪೂರ, ಇಮಾಮಸಾಬ್ ಕಲ್ಲೂರ, ಎಂ.ಐ. ವೆಂಟಾಪೂರ, ಕೆ.ಎಂ. ಹಳ್ಳಿಗುಡಿ, ಇತರರಿದ್ದರು.