More

  ಯಾತ್ರಿನಿವಾಸ ಅಪೂರ್ಣ ‘ಪ್ರವಾಸಿಗರು ಹೈರಾಣ’

  ಡಂಬಳ: ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಕಲಿಸುವ ಹಿತದೃಷ್ಟಿಯಿಂದ ಸರ್ಕಾರ ಯಾತ್ರಿನಿವಾಸಗಳನ್ನು ನಿರ್ಮಾಣ ಮಾಡುತ್ತಿದೆ. 2019ರಲ್ಲಿ ಡಂಬಳ, ಹಿರೇವಡ್ಡಟ್ಟಿ ಗ್ರಾಮಗಳಲ್ಲಿ ಯಾತ್ರಿನಿವಾಸಗಳ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗಿದೆ. 4 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

  ಮುಂಡರಗಿ ತಾಲೂಕಿನ ಡಂಬಳದ ತೋಂಟದಾರ್ಯ ಮಠ, ಹಿರೇವಡ್ಡಟ್ಟಿಯ ಶ್ರೀ ವೀರೇಶ್ವರ ಶಿವಾಚಾರ್ಯ ಹಿರೇಮಠ, ಮುಂಡರಗಿಯ ಮಾರುತಿ ದೇವಸ್ಥಾನಗಳ ಆವರಣಗಳಲ್ಲಿ 2019ರಲ್ಲಿ ತಲಾ 25 ಲಕ್ಷ ರೂ. ವೆಚ್ಚದಲ್ಲಿ ಯಾತ್ರಿನಿವಾಸ ಕಟ್ಟಡಗಳನ್ನು ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಆರಂಭಿಸಿದ ಕರ್ನಾಟಕ ಭೂಸೇನಾ ನಿಗಮ ಅರೆಬರೆ ಕೆಲಸ ನಿರ್ವಹಿಸಿದೆ. ಹಲವು ವರ್ಷಗಳಿಂದ ಬಾಕಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಉಳಿದ ಕಾಮಗಾರಿ ಬೇಗ ಪ್ರಾರಂಭಿಸಿ ಕಟ್ಟಡವನ್ನು ಪೂರ್ಣಗೊಳಸುವ ಕಾರ್ಯಆಗಬೇಕಿದೆ.

  ಅನುದಾನದ ನೆಪ: ಅನುದಾನ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂಬ ನೆಪವನ್ನು ಇಲಾಖೆಗಳ ಅಧಿಕಾರಿಗಳು ಹಲವು ದಿನಗಳಿಂದ ಹೇಳುತ್ತಲೇ ಇದ್ದಾರೆ. ಸರ್ಕಾರದ ಬಳಿ ಅನುದಾನ ಇಲ್ಲದೆ ಕಾಮಗಾರಿಗಳಿಗೆ ಅನುಮೋದನೆ ಹೇಗೆ ಸಿಕ್ಕಿತು?. ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಕಟ್ಟಡಗಳಿಗೆ ಅನುದಾನ ಬಿಡುಗಡೆ ಆಗುವಷ್ಟರಲ್ಲಿ ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಕಟ್ಟಡವು ಹಾಳಾಗುವ ಭೀತಿ ಕಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷೃವೇ ಇದಕ್ಕೆ ಮೂಲ ಕಾರಣ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.

  ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಡಂಬಳದ ದೊಡ್ಡ ಬಸವೇಶ್ವರ ದೇವಸ್ಥಾನ, ಜಪದ ಬಾವಿ, ಐತಿಹಾಸಿಕ ಕೆರೆ, ತೋಂಟದಾರ್ಯ ಮಠ, ಜಮಾಲಶಾವಲಿ ದರ್ಗಾ, ಹಿರೇವಡ್ಡಟ್ಟಿಯ ಮಣಕವಾಡ ಮಠ, ಡೋಣಿ ಗ್ರಾಮದ ಹಾಲೇಶ್ವರ ದೇವಸ್ಥಾನ, ಮುಂಡರಗಿ ಕೊಟೆ ಆಂಜನೇಯ, ಅನ್ನದಾನೇಶ್ವರ, ತೋಂಟದಾರ್ಯ ಮಠಗಳು, ಕಪ್ಪತ್ತಗುಡ್ಡದ ನಂದಿವೇರಿ ಮಠ, ಕಪ್ಪತ್ತಮಲ್ಲಯ್ಯನ ದೇವಸ್ಥಾನ ಇನ್ನು ಹಲವು ಐತಿಹಾಸಿಕ ತಾಣಗಳ ವಿಕ್ಷಣೆಗೆ ಬರುವ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

  ಅಪೂರ್ಣಗೊಂಡ ಕಟ್ಟಡಗಳು ಹಾವು- ಚೇಳುಗಳ ಆವಾಸಸ್ಥಾನಗಳಾಗಿವೆ. ನಿರ್ವಹಣೆ ಇಲ್ಲದೆ ಕಟ್ಟಡಗಳ ಗೊಡೆಗಳು ಹಾಳಾಗುತ್ತಿವೆ. ಶೀಘ್ರವೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಮೊದಲ ಹಂತದಲ್ಲಿ ನಿರ್ಮಿಸಿದ ಗೊಡೆ, ಸ್ಲ್ಯಾಬ್ ಹಾಳಾಗಿ ಸರ್ಕಾರ ಯೋಜನೆ ಮಣ್ಣುಪಾಲಾಗುವಲ್ಲಿ ಸಂದೇಹ ಇಲ್ಲ.

  ಮೊದಲ ಹಂತದಲ್ಲಿ ತಲಾ 10 ಲಕ್ಷ ರೂ. ಬಿಡುಗಡೆ ಆಗಿದೆ. ಸ್ಲ್ಯಾಬ್ ಹಂತದ ವರೆಗೆ ಕಟ್ಟಡ ನಿರ್ಮಿಸಿದ್ದೇವೆ. ಮುಂದಿನ ಅನುದಾನಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇವೆ. ಅನುದಾನ ಬಿಡುಗಡೆ ಆದ ತಕ್ಷಣ ಕಾಮಗಾರಿ ಪೂರ್ಣಗೊಳಿಸಲಾಗುವದು.
  -ಪರ್ವೇಜ್ ಧಾರವಾಡ, ಎಇಇ ಕರ್ನಾಟಕ ಭೂಸೇನಾ ನಿಗಮ

  ಸದರಿ ಕಾಮಗಾರಿಗಳಿಗೆ ಅವಶ್ಯವಿರುವ ಬಾಕಿ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಬೆಂಗಳೂರಿನಲ್ಲಿರುವ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
  -ಆರ್.ಬಿ. ಶ್ರೀಖಂಡೆ, ಪ್ರವಾಸೋದ್ಯಮ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಧಾರವಾಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts