ಅನುದಾನ ತಾರದ ಶಾಸಕ ಸಿ.ಟಿ.ರವಿಯಿಂದ ವೇಷ ಹಾಕಿ ಡ್ರಾಮಾ

ಚಿಕ್ಕಮಗಳೂರು: ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆ ಅಭಿವೃದ್ಧಿಗೆ ಅನುದಾನ ತಾರದ ಶಾಸಕ ಸಿ.ಟಿ.ರವಿ ಈಗ ವೇಷ ಹಾಕಿ ಡ್ರಾಮಾ ಮಾಡುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಲೇವಡಿ ಮಾಡಿದರು.

ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಸ್ಪತ್ರೆ, ಕರಗಡ ಯೋಜನೆ ಹಾಗೂ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ. ಆದರೆ ಇದನ್ನು ತಾವೇ ತಂದಿದ್ದೇವೆಂಬಂತೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

ಕ್ಷೇತ್ರದಲ್ಲಿ ಹದಿನೈದು ವರ್ಷದಿಂದ ಶಾಸಕರಾಗಿರುವ ರವಿ ಅವರಿಂದ ಯಾವುದೆ ಅನುದಾನ ತರಲು ಸಾಧ್ಯವಾಗಿಲ್ಲ. ಅವರದೇ ಸರ್ಕಾರ ಇದ್ದಾಗಲೂ ಒಂದೂ ಯೋಜನೆ ಸರಿಯಾಗಿ ಪೂರ್ಣಗೊಳಿಸಿಲ್ಲ. ಮೈತ್ರಿ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹಾಗೂ ಉಪ ಸಭಾಪತಿ ಎಸ್.ಎಲ್. ಧಮೇಗೌಡ ಅವರ ಪರಿಶ್ರಮದಿಂದ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ 50 ಕೋಟಿ ರೂ., ಕರಗಡ ಏತ ನೀರಾವರಿ ಯೋಜನೆಗೆ 10 ಕೋಟಿ ರೂ. ಮಂಜೂರಾಗಿದೆ ಎಂದರು.

ಬಜೆಟ್​ನಲ್ಲಿ ಜಿಲ್ಲೆಗೆ ನಯಾ ಪೈಸೆ ಮೀಸಲಿಟ್ಟಿಲ್ಲವೆಂದು ಸಿ.ಟಿ.ರವಿ ಆರೋಪ ಮಾಡಿದ್ದರು. ಈಗ ಮೈತ್ರಿ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ನೋಡಿ ಶಾಸಕರು ಜಾಗೃತರಾಗಿದ್ದಾರೆ. ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿ ಸಭೆ ಕರೆದು ನೀಲಿ ನಕ್ಷೆ ತಯಾರಿಸುವಂತೆ ಸೂಚನೆ ನೀಡಿ ಸಾರ್ವಜನಿಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅನುದಾನ ತರುವ ಕೆಲಸವನ್ನು ವಿಧಾನಪರಿಷತ್ ಸದಸ್ಯ ಸಹೋದರರು ಮಾಡುತ್ತಿದ್ದಾರೆ. ಅನುದಾನ ಬಿಡುಗಡೆ ಮಾಡಿಸಿದ ನಂತರ ರವಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಗೆ ನೂರಾರು ಕೋಟಿ ರೂ. ಅನುದಾನ ಬರುತ್ತಿದೆ. ಇದು ಇಲ್ಲಿನ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ಸಾಧನೆ ಎಂದು ಹೇಳಿದರು.