ಕಡೂರು ಕ್ಷೇತ್ರಕ್ಕೆ ದೇವೇಗೌಡರು ನಯಾಪೈಸೆಯನ್ನೂ ಕೊಟ್ಟಿಲ್ಲ

ಕಡೂರು: ಕಡೂರು ಕ್ಷೇತ್ರಕ್ಕೆ ಎಚ್.ಡಿ.ದೇವೇಗೌಡರು ನಯಾಪೈಸೆ ಅನುದಾನ ನೀಡಿಲ್ಲ. ಸಂಸದರ ನಿಧಿಯಿಂದ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ನೀಡಿದ್ದಾರೆ ಎಂದು ಬಹಿರಂಗಪಡಿಸಲಿ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಸವಾಲೆಸೆದರು.

ತಾಲೂಕಿನ ವೈ.ಮಲ್ಲಾಪುರ ಗೇಟ್​ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಲೋಕಸಭಾ ಕ್ಷೇತ್ರದಲ್ಲಿ 5 ಬಾರಿ ಸಂಸದರಾಗಿ ಆಯ್ಕೆಯಾಗಿರುವ ದೇವೇಗೌಡರು ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದ್ದಾರೆ. ಕಡೂರು ಕ್ಷೇತ್ರಕ್ಕೆ ನೀರು ತರುತ್ತೇನೆ ಎಂಬ ಹಸಿ ಸುಳ್ಳನ್ನು ಹೇಳಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.

ಕಡೂರು ಕ್ಷೇತ್ರದ ನೀರಾವರಿ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ನರೇಂದ್ರ ಮೋದಿ ಅವರ ಕನಸಾದ ನದಿ ಜೋಡಣೆ ಫಲಪ್ರದವಾದಲ್ಲಿ ಕರ್ನಾಟಕದ ಬಹುತೇಕ ನೀರಾವರಿ ಸಮಸ್ಯೆ ಇತ್ಯರ್ಥವಾಗಲಿದೆ. ಕಡೂರು ವಿಧಾನಸಭಾ ಕ್ಷೇತ್ರ ನನ್ನ ತಲೆ ಮೇಲಿನ ಕಿರೀಟವಿದ್ದಂತೆ. ಅನುದಾನ ಮತ್ತು ಯೋಜನೆಗಳ ವಿಷಯದಲ್ಲಿ ಈ ಕ್ಷೇತ್ರಕ್ಕೆ ಮೊದಲ ಆದ್ಯತೆ ಎಂದು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಹೊಂದಿಕೊಳ್ಳದ ಕ್ಷೇತ್ರದ ತಳಮಟ್ಟದ ಮುಖಂಡರು ಮತ್ತು ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಧಿಕಾರ ಪಡೆದ ನಾನು ಈಗ ಬಿಜೆಪಿ ಸೇರಿದ್ದೇನೆ. ಆದರೆ ಆ ಪಕ್ಷ ಋಣ ತೀರಿಸಿದ್ದೇನೆ. ಜಿಪಂ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜಿಪಂ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಸದಸ್ಯರನ್ನು ಗೆಲ್ಲಿಸಿಕೊಟ್ಟಿದ್ದೇನೆ. ಕಡೂರು ಕ್ಷೇತ್ರ ಕಳೆದ ಬಾರಿ ನನಗೆ 17 ಸಾವಿರ ಮತಗಳ ಲೀಡ್ ನೀಡಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಅಂತರವನ್ನು ಮತದಾರರು ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಕಾರವಿಲ್ಲದ ಕುಟುಂಬ: ಈ ಕ್ಷೇತ್ರದ ಮಾಜಿ ಶಾಸಕ ವೈಎಸ್​ವಿ ದತ್ತ ಅವರನ್ನು ನಾವೆಲ್ಲಾ ಮೇಷ್ಟ್ರೇ ಎಂದು ಸಂಬೋಧಿಸಿದರೆ ದೇವೇಗೌಡರ ಕುಟುಂಬ ದತ್ತ ಎಂದು ಏಕವಚನದಲ್ಲಿಯೇ ಕರೆಯುತ್ತದೆ ಎಂದು ಎ.ಮಂಜು ಹೇಳಿದರು. ಅವರದು ಗೌರವ ಮತ್ತು ಸಂಸ್ಕಾರ ಇಲ್ಲದ ಕುಟುಂಬ. ಮೊಮ್ಮಕ್ಕಳ ಸಲುವಾಗಿ ಕ್ಷೇತ್ರ ಹುಡುಕಿಕೊಂಡು ತಿರುಗಾಡಿದ ದೇವೇಗೌಡರು ಕೊನೆಗೆ ತೂಮಕೂರಲ್ಲಿ ತಳವೂರಿದ್ದಾರೆ ಎಂದು ಲೇವಡಿ ಮಾಡಿದರು.