ಶ್ರಮ ಸಂಸ್ಕೃತಿ ಬೆಳವಣಿಗೆಗೆ ಅನುದಾನ ಅಗತ್ಯ

ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯಲ್ಲಿರುವ ವಿಶ್ವದ ಮೊದಲ ಜಾನಪದ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಹಿರೇತಿಟ್ಟು ಬಯಲು ರಂಗಮಂದಿರಲ್ಲಿ ವಿವಿ ಕುಲಾಧಿಪತಿ, ರಾಜ್ಯಪಾಲ ವಜುಭಾಯ್ ವಾಲಾ, ಉನ್ನತ ಶಿಕ್ಷಣ ಸಚಿವರ ಗೈರು ಹಾಜರಿಯಲ್ಲಿ ಬುಧವಾರ ಜರುಗಿತು.

ಸಮಾರಂಭದಲ್ಲಿ ಉತ್ತರ ಕರ್ನಾಟಕದ ರಂಗಕಲೆ ದೊಡ್ಡಾಟದ ಬೆಳವಣಿಗೆಗೆ ಶ್ರಮಿಸಿದ ಹಿರಿಯ ಕಲಾವಿದ ಟಿ.ಬಿ. ಸೊಲಬಕ್ಕನವರಿಗೆ ಗೌರವ ಡಾಕ್ಟರೇಟ್, ಜನಪದ ಸಾಹಿತ್ಯದಲ್ಲಿ ಮೊದಲ ರ್ಯಾಂಕ್​ನೊಂದಿಗೆ ಸುಜಾತ ಮಲ್ಲೊಳ್ಳಿ ಅವರಿಗೆ 2 ಚಿನ್ನದ ಪದಕ, ವಿಜ್ಞಾನ, ಕಲೆ, ಪ್ರವಾಸೋದ್ಯಮ, ಜನಪದ ಮಾಧ್ಯಮ ಮತ್ತು ಸಂವಹನ ವಿಭಾಗ ಮತ್ತಿತರ ಕೋರ್ಸ್​ಗಳಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದವಿ, ಗ್ರಾಮೀಣ ಮತ್ತು ಬುಡಕಟ್ಟು ನಿರ್ವಹಣೆ ವಿಭಾಗ-ಅನ್ವಯಿಕ ಜಾನಪದ ನಿಕಾಯದಲ್ಲಿ ಮೊದಲ ಬಾರಿಗೆ ಪಿಎಚ್​ಡಿ ಮಾಡಿದ ಮೀರಾ ಎಚ್.ಎನ್. ಅವರಿಗೆ ಪದವಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವ ಭಾಷಣ ಮಾಡಿದ ನಾಡೋಜ ಪ್ರೊ. ಬರಗೂರ ರಾಮಚಂದ್ರಪ್ಪ ಅವರು, ಸರ್ಕಾರಗಳಿಗೆ ವಿವಿ ಸ್ಥಾಪಿಸುವಾಗ ಇರುವ ಉತ್ಸಾಹ, ಸಂಭ್ರಮ ನಂತರ ಇರುವುದಿಲ್ಲ. ಅವುಗಳಿಗೆ ಮೂಲಸೌಲಭ್ಯ, ಚಟುವಟಿಕೆ ಕೈಗೊಳ್ಳಲು ಅನುದಾನ ನೀಡಲು ಉದಾಸೀನ ಮಾಡುವುದು ವಿಷಾದನೀಯ. ಪ್ರತಿವರ್ಷ ಜಾನಪದ ವಿವಿ ನಿರ್ವಹಣೆಗೆ ನಾಲ್ಕು ಕೋಟಿ ರೂ. ಬರುತ್ತದೆ. ಅದರಲ್ಲಿ 3.5 ಕೋಟಿ ರೂ. ಖರ್ಚಾಗುತ್ತದೆ. ಕೊಡುವ ನಿರ್ದಿಷ್ಟ ಅನುದಾನದಲ್ಲೂ ಸರ್ಕಾರ ಕೆಲವು ವರ್ಷ ಕಡಿಮೆ ಹಣ ಬಿಡುಗಡೆ ಮಾಡುತ್ತದೆ. ಹೀಗಾದರೆ ವಿವಿ ಘನತೆ ಹೆಚ್ಚಿಸುವುದು ಹೇಗೆಂದು ಸರ್ಕಾರಗಳೇ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ ಎಂದರು.

ವಿವಿ ಶ್ರಮಸಂಸ್ಕೃತಿ ಪ್ರತೀಕವಾಗಿ ಬೆಳೆಯಲು ಸರ್ಕಾರ ಸಾಕಷ್ಟು ಅನುದಾನ ಕೊಡಬೇಕು. ಸೂಕ್ತ ಕ್ರಿಯಾಯೋಜನೆಗಳು ಸಿದ್ಧವಾಗಬೇಕು. ವಿಧಾನಸೌಧದಲ್ಲಿ ಕೆಲಸ ಮಾಡಿಸಿಕೊಳ್ಳಲು ಹಲವರಿಗೆ ವೈರಾಗ್ಯ ಮೂಡಿದೆ. ಏಕೆಂದರೆ ಅಲ್ಲಿ ಕೊಕ್ಕೇಶ್ವರರು ಜಾಸ್ತಿ ಇದ್ದಾರೆ. ಅಂಥವರನ್ನು ಗೆದ್ದು ಅನುದಾನ ತರಬೇಕಾಗಿರುವುದು ದುರಂತದ ಸಂಗತಿ. ಜನಪದ ಸಂಸ್ಕೃತಿರಹಿತರ ಲೋಕ ಎಂಬಂತೆ ನೋಡುವುದು ಜನಪದ ಲೋಕಕ್ಕೆ ಮಾಡುವ ಅವಮಾನ. ಓದು ಬರಹ ಬರಲಿ, ಬಾರದಿರಲಿ ಇಲ್ಲಿ ಎಲ್ಲರೂ ಅಕ್ಷರಿಗಳೇ. ಲಿಪಿ ಬಾರದ ನಿರಾಕರಿ ಮೌಖಿಕ ಅಕ್ಷರಿಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದರು.

ವಿವಿಗಳು ಇಂದು ವಿತ್ತ ವಿವಿಗಳಾಗಿ ಮಾರ್ಪಾಡಾಗಿವೆ. ವಿತ್ತ ವಿವಿಗಳ ಪಿತ್ತ ಏರಿಸಿಬಿಟ್ಟಿವೆ. ಶಿಕ್ಷಣ ಮಾರುಕಟ್ಟೆ ಬದಲು ಮೌಲ್ಯಕಟ್ಟೆ ನಿರ್ವಿುಸಬೇಕು. ಅದಕ್ಕೆ ಪಠ್ಯಗಳ ಪುನರ್ ಸಂಯೋಜನೆ ಅಗತ್ಯವಿದೆ. ಈ ಕುರಿತು ಯೋಜನೆ ರೂಪಿಸುವ ಶಿಕ್ಷಣ ತಜ್ಞರೂ ಕಡಿಮೆಯಾಗಿದ್ದು ಶಿಕ್ಷಣ ಉದ್ಯಮಿಗಳೇ ಜಾಸ್ತಿಯಾಗಿರುವುದು ಖೇದಕರ ಸಂಗತಿ. ಇದನ್ನು ಗಂಭೀರವಾಗಿ ಪರಿಗಣಿಸಿ ಬದಲಾವಣೆಗೆ ಒತ್ತಡ ಹೇರಬೇಕು. ಉನ್ನತ ಶಿಕ್ಷಣವೆಂದರೆ ಕೆಲವರ ಉನ್ಮತ್ತ ಶಿಕ್ಷಣವಲ್ಲ ಎಂಬುದು ಸಾಬೀತಾಗಬೇಕು ಎಂದರು.

ವಿವಿ ಕುಲಪತಿ ಪ್ರೊ. ಡಿ.ಬಿ. ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ. ಚಂದ್ರಶೇಖರ, ಮೌಲ್ಯಮಾಪನ ಕುಲಸಚಿವ ಡಾ. ಎಂ.ಎನ್. ವೆಂಕಟೇಶ, ಶೈಕ್ಷಣಿಕ ಪರಿಷತ್ತಿನ ಸದಸ್ಯ ಶ್ರೀರಾಮ ಹಿಟ್ಟಣ್ಣನವರ ವೇದಿಕೆಯಲ್ಲಿದ್ದರು. ಶಾಸಕ ಬಸವರಾಜ ಬೊಮ್ಮಾಯಿ, ಇತರರಿದ್ದರು.

1,331 ವಿದ್ಯಾರ್ಥಿಗಳಿಗೆ ಪದವಿ: ಎಂಎ, ಎಂಬಿಎ ವಿಭಾಗದ 29, ಪಿಜಿ ಡಿಪ್ಲೋಮಾದ 23, ಡಿಪ್ಲೋಮಾದ 937, ಸರ್ಟಿಫಿಕೇಟ್ ಕೋರ್ಸ್​ನ 341 ಸೇರಿ 1,331 ವಿದ್ಯಾರ್ಥಿಗಳಿಗೆ ಪದವಿ ಲಭಿಸಿದೆ. ವಿವಿಧ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅತಿಥಿಗಳು ಪದವಿ, ಪ್ರಶಸ್ತಿ ಪ್ರದಾನ ಮಾಡಿದರು.

ಸರ್ಕಾರದ ಜಯಂತಿಗಳ ರೀತಿಯಲ್ಲಿ ಇಂದು ವಿವಿಗಳ ಪೀಠಗಳು ಆರಂಭವಾಗುತ್ತಿವೆ. ಅವು ಮುಂದೆ ಒಂದೊಂದು ಜಾತಿಯ ಪೀಠಗಳಾಗುತ್ತಿವೆ. ಈ ಪೀಠಗಳಲ್ಲಿ ಇಡಗಂಟು ಇಟ್ಟು ಅದರ ಬಡ್ಡಿಯಲ್ಲಿ ಚಟುವಟಿಕೆ ನಡೆಸುವುದರಿಂದ ಇವು ಬಡ್ಡಿಪೀಠ ಎನಿಸಿವೆ. ಇವುಗಳಿಗೆ ಸರ್ಕಾರ ಅನುದಾನ ಕೊಟ್ಟು ಕ್ರಿಯೆ ಪ್ರಕ್ರಿಯೆಯಾಗುವಂತೆ ನೋಡಿಕೊಳ್ಳಬೇಕು. ಗೌರವ ಡಾಕ್ಟರೇಟ್​ಗಳು ಗೌರವ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಜಾನಪದ ವಿವಿ ಪ್ರತಿಭಾವಂತ ಕಲಾವಿದ ಟಿ.ಬಿ. ಸೊಲಬಕ್ಕನವರಗೆ ಗೌರವ ಡಾಕ್ಟರೇಟ್ ಕೊಟ್ಟು ಪದವಿ ಗೌರವ ಹೆಚ್ಚಿಸುವ ಕಾರ್ಯ ಮಾಡಿದೆ.

| ಪ್ರೊ. ಬರಗೂರ ರಾಮಚಂದ್ರ