ಅನುದಾನ ಕೊರತೆ, ಕಾಮಗಾರಿ ಸ್ಥಗಿತ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯು ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದ್ದು, ಭಕ್ತರಲ್ಲಿ ನಿರಾಸೆ ಮೂಡಿಸಿದೆ.

ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ಅಮ್ಮನವರ ದೇವಸ್ಥಾನವು ನೂರಾರು ವರ್ಷಗಳ ಹಳೆಯದಾಗಿದ್ದು, ಶಿಥಿಲಗೊಂಡಿತ್ತು. ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಬೇಕೆಂಬ ಕೂಗು ಭಕ್ತ ವಲಯದಲ್ಲಿ ಹಲವು ವರ್ಷಗಳಿಂದಲೂ ಕೇಳಿ ಬಂದಿತ್ತು.

ದೇವಸ್ಥಾನದ ಜೀರ್ಣೋದ್ಧಾರಕ್ಕೆ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯು 2.40 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ, 2017 ಮಾರ್ಚ್‌ನಲ್ಲಿ ಕಾಮಗಾರಿ ಪ್ರಾರಂಭಿಸಿತು. ಈಗಾಗಲೇ ಪ್ರಾಚ್ಯ ವಸ್ತು ಇಲಾಖೆಯು ನೀಡಿದ್ದ ಅನುದಾನ ಮುಗಿದಿದ್ದು, ದೇವಸ್ಥಾನದ ಉಳಿದ ಕಾಮಗಾರಿಗೆ ಅನುದಾನದ ಕೊರತೆ ಎದುರಾಗಿದೆ.

ಬಾಕಿ ಉಳಿದ ಕಾಮಗಾರಿಗಳು: ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯು ಪೂರ್ಣಗೊಂಡಿದೆ. ಉಳಿದಂತೆ ದೇವಸ್ಥಾನದ ಸುತ್ತ ಕಲ್ಲಿನ ನೆಲಹಾಸು ಕಾಮಗಾರಿಯು ಬಾಕಿ ಉಳಿದಿದ್ದು, ಅನುದಾನದ ಕೊರತೆಯಿಂದ ಪ್ರಾಚ್ಯವಸ್ತು ಇಲಾಖೆಯು ಈ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ.

ಸರ್ಕಾರದಿಂದ ಅನುದಾನ ದೊರೆತರೆ ನೆಲಹಾಸು ಕಾಮಗಾರಿಯನ್ನು ಪೂರ್ಣಗೊಳಿಸಿ ತನ್ನ ಕಾರ್ಯ ಮುಗಿಸಲಿದೆ.

ಉಳಿದಂತೆ ದೇವಸ್ಥಾನದ ಆಡಳಿತವು ದೇವಸ್ಥಾನದ ಸುತ್ತ ಕಾಂಪೌಂಡ್, ಯಾಗಶಾಲೆ, ಪಾಕಶಾಲೆ ಹಾಗೂ ಮೆಟ್ಟಿಲುಗಳ ನಿರ್ಮಾಣ ಮಾಡಬೇಕಿದೆ. ಆದರೆ, ದೇವಸ್ಥಾನದ ಆಡಳಿತಕ್ಕೂ ಅನುದಾನದ ಕೊರತೆ ಎದುರಾಗಿದ್ದು, ಸರ್ಕಾರ ಹಾಗೂ ದಾನಿಗಳು ಧನ ಸಹಾಯ ಮಾಡಿದರೆ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ.

ಜನಪ್ರತಿನಿಧಿಗಳ ನಿರ್ಲಕ್ಷೃ: ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. 3 ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ರಾಜಗೋಪುರವನ್ನು ಇನ್ನೂ ಉದ್ಘಾಟನೆ ಮಾಡಿಲ್ಲ.

ಜತೆಗೆ ನಂತರ ಪ್ರಾರಂಭವಾದ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯ ಉಳಿದ ಕಾರ್ಯವನ್ನು ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡಿಸುವಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ದೇವಸ್ಥಾನದ ಅಭಿವೃದ್ಧಿಗೆ ಮನಸ್ಸು ಮಾಡಬೇಕಿದೆ.

ಭಕ್ತರ ಸಂಖ್ಯೆ ಇಳಿಮುಖ: ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಹಿನ್ನೆಲೆಯಲ್ಲಿ 2017ರ ಮಾರ್ಚ್‌ನಿಂದ ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಜೀರ್ಣೋದ್ಧಾರ ಪ್ರಾರಂಭಕ್ಕೂ ಮೊದಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಮೂಲ ದೇವರ ಪೂಜಾ ಕೈಂಕರ್ಯಗಳು ನೆರವೇರದ ಹಿನ್ನೆಲೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಅಷ್ಟಾಗಿ ಬರುತ್ತಿಲ್ಲ.

ಉದ್ಘಾಟನೆಯಾಗದ ರಾಜಗೋಪುರ: ಇಲ್ಲಿನ ರಾಜಗೋಪುರವನ್ನು 3.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 3 ವರ್ಷಗಳ ಹಿಂದೆಯೇ ರಾಜಗೋಪುರ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಇನ್ನೂ ಉದ್ಘಾಟನೆಯಾಗಿಲ್ಲ. 2017ರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭದಿಂದಾಗಿ ಉದ್ಘಾಟನೆಯನ್ನು ಮುಂದೂಡಲಾಗಿದೆ. ಮುಂದಿನ 2019ರ ವೇಳೆಗೆ ರಾಜಗೋಪುರ ಹಾಗೂ ದೇವಸ್ಥಾನವನ್ನು ಒಟ್ಟಿಗೆ ಉದ್ಘಾಟನೆ ಮಾಡಬೇಕೆನ್ನುವುದು ಇಲ್ಲಿನ ದೇವಸ್ಥಾನ ಆಡಳಿತ ಮಂಡಳಿ ಉದ್ದೇಶವಾಗಿದೆ.

ದಾಸೋಹ ಭವನ ಅಭಿವೃದ್ಧಿಯಾಗಬೇಕು?: ನಿತ್ಯ ಭಕ್ತರಿಗೆ ಅನ್ನ ದಾಸೋಹ ಕಾರ್ಯ ನಡೆಯುವ ಇಲ್ಲಿನ ದಾಸೋಹ ಭವನ ಅಭಿವೃದ್ಧಿಯಾಗಿಲ್ಲ. ದೇವಸ್ಥಾನದ ಬಳಿಯ ಕಮರಿಯ ಶೆಡ್‌ನಲ್ಲಿ ದಾಸೋಹ ಭವನ ಪ್ರಾರಂಭಿಸಲಾಗಿದ್ದು, ಪ್ರತಿನಿತ್ಯ 150 ರಿಂದ 200 ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತಿದೆ.

ದಾಸೋಹ ಭವನವು ಚಿಕ್ಕದಾಗಿದ್ದು, ಕೆಲವೇ ಜನರು ಕುಳಿತು ಊಟ ಮಾಡಬಹುದು. ಜತೆಗೆ ನೆಲದಲ್ಲಿ ಕುಳಿತು ಊಟ ಮಾಡಬೇಕಾಗಿದೆ. ಆದ್ದರಿಂದ ದೇವಸ್ಥಾನದ ಅಭಿವೃದ್ಧಿಯ ಜತೆಗೆ ಸುಸಜ್ಜಿತ ದಾಸೋಹ ಭವನವನ್ನು ನಿರ್ಮಾಣ ಮಾಡಿದರೆ ಭಕ್ತರಿಗೆ ಅನುಕೂಲವಾಗಲಿದೆ.

ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದಂತೆ ನೆಲಹಾಸು, ಕಾಂಪೌಂಡ್ ನಿರ್ಮಾಣ, ಪಾಕಶಾಲೆ, ಯಾಗಶಾಲೆ, ಮೆಟ್ಟಿಲುಗಳ ನಿರ್ಮಾಣ ಆಗಬೇಕಿದೆ. ಆದರೆ, ಅನುದಾನದ ಕೊರತೆಯಿಂದಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ಸಚಿವರು, ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ವೆಂಕಟೇಶ್ ಪ್ರಸಾದ್, ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ, ಬಿಳಿಗಿರಿರಂಗನಬೆಟ್ಟ.