More

  ಸಿಂಹಾಸನಕ್ಕಾಗಿ ಹಳೇ ಎದುರಾಳಿಗಳ ಮೊಮ್ಮಕ್ಕಳ ಕದನ

  | ರಮೇಶ್ ಹಂಡ್ರಂಗಿ ಹಾಸನ

  ಯಾವ ಚುನಾವಣೆ ನಡೆದರೂ ಒಂದಲ್ಲಾ ಒಂದು ವಿಷಯಕ್ಕೆ ಜಿಲ್ಲೆ ರಾಜ್ಯದ ಗಮನ ಸೆಳೆಯುತ್ತದೆ. ಇದೀಗ ಲೋಕಸಭಾ ಚುನಾವಣೆಯಲ್ಲೂ ಅದೇ ಕುತೂಹಲ ಮೂಡಿದ್ದು, ಘಟಾನುಘಟಿಗಳ ಮೊಮ್ಮಕ್ಕಳ ಕಾಳಗಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾಂಗ್ರೆಸ್​ನಿಂದ ಶ್ರೇಯಸ್ ಪಟೇಲ್ ಪ್ರಬಲ ಸ್ಪರ್ಧೆ ಒಡ್ಡಲು ಸಿದ್ಧರಾಗಿದ್ದಾರೆ.

  ಇವರಿಬ್ಬರ ಸ್ಪರ್ಧೆಯ ಹಿಂದೆ ಮಹತ್ತರ ರಾಜಕೀಯ ಹಿನ್ನೆಲೆ ಇದೆ. 1999ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕಾಂಗ್ರೆಸ್​ನ ಜಿ.ಪುಟ್ಟಸ್ವಾಮಿಗೌಡ ಸೋಲಿಸಿದ್ದರು. ಇದೀಗ ಅದೇ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್, ದೇವೇಗೌಡರ ಮೊಮ್ಮಗನಿಗೆ ಎದುರಾಳಿಯಾಗಿದ್ದು, ಇತಿಹಾಸ ಮರುಕಳಿಸುವ ತವಕದಲ್ಲಿದ್ದಾರೆ. 25 ವರ್ಷಗಳಿಂದಲೂ ಜೆಡಿಎಸ್ ಹಿಡಿತದಲ್ಲೇ ಇರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಜ್ವಲ್ ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಇಬ್ಬರೂ ಸಮಬಲರಾಗಿದ್ದು, ಜೆಡಿಎಸ್ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಮೊಮ್ಮಗನ ಪರವಾಗಿ ಅಖಾಡಕ್ಕೆ ಇಳಿದಿರುವ ದೇವೇಗೌಡರು ತಾಲೂಕು ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದು, ಜನರ ಮನಮುಟ್ಟುವಲ್ಲಿ ಸಫಲರಾಗುತ್ತಿದ್ದಾರೆ. ಈಗಾಗಲೆ ಒಂದು ಹಂತದ ಸಭೆ ಮುಗಿಸಿ ಎರಡನೇ ಹಂತದ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

  ಬಿಜೆಪಿ ನಾಯಕರ ನಡೆ ನಿಗೂಢ?: ಹಾಸನ ಕ್ಷೇತ್ರದ ಬಿಜೆಪಿ ಮುಖಂಡರು ಜೆಡಿಎಸ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿಲ್ಲ. ಎನ್​ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್, ಆಯಾ ತಾಲೂಕುಗಳ ಸ್ಥಳೀಯ ಮುಖಂಡರನ್ನು ಭೇಟಿಯಾಗಿ ಸಹಕಾರ ಕೋರುತ್ತಿದ್ದಾರೆ. ಆದರೆ, ಪ್ರಮುಖವಾಗಿ ಪ್ರೀತಂಗೌಡ, ಸಿದ್ದೇಶ್ ನಾಗೇಂದ್ರ, ಸಿಮೆಂಟ್ ಮಂಜು, ಎ.ಟಿ.ರಾಮಸ್ವಾಮಿ ಈವರೆಗೂ ಮೌನವಾಗಿದ್ದಾರೆ. ಇವರ ಸಹಕಾರ ಜೆಡಿಎಸ್​ಗೆ ಅತ್ಯಗತ್ಯ. ಹೀಗಾಗಿ ಅವರ ಮನವೊಲಿಸಲು ಬಿಜೆಪಿ ಸ್ಟಾರ್ ಪ್ರಚಾರಕ ಸ್ಥಾನವನ್ನು ಕರುಣಿಸಿದೆ. ಜತೆಗೆ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿಶೇಷ ಸಮನ್ವಯ ಸಮಿತಿ ಸಭೆ ನಡೆಸಿದ್ದು, ಭಿನ್ನಮತ ಬಹುತೇಕ ಶಮನಗೊಳಿಸಿದ್ದಾರೆ. ಆದರೆ ಸ್ಥಳೀಯ ನಾಯಕರು ಹೇಗೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬುದೇ ಪ್ರಶ್ನೆ.

  ಮತ ಲೆಕ್ಕಾಚಾರ: 2019ರ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರು ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್​ಗೆ ಬಿಟ್ಟುಕೊಟ್ಟರು. ಕಾಂಗ್ರೆಸ್ ಮೈತ್ರಿಯೊಂದಿಗೆ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಗಳಿಸಿದ್ದರು. ಮೈತ್ರಿ ವಿರೋಧಿಸಿ ಕಾಂಗ್ರೆಸ್​ನಿಂದ ಹೊರಬಂದ ಎ.ಮಂಜು ಬಿಜೆಪಿಯಿಂದ ಸ್ಪರ್ಧಿಸಿ 5,35,282 ಮತಗಳನ್ನು ಪಡೆದು, 1,41,324 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

  ಜಾತಿ ಲೆಕ್ಕಾಚಾರ: ಜಿಲ್ಲೆಯಲ್ಲಿ 16 ಲಕ್ಷ ಮತದಾರರಿದ್ದು, ಒಕ್ಕಲಿಗರೇ ಪ್ರಬಲರು. ಎರಡನೇ ಸ್ಥಾನದಲ್ಲಿ ಪರಿಶಿಷ್ಟ ಮತದಾರರಿದ್ದಾರೆ. ಅಲ್ಪಸಂಖ್ಯಾತ ಮತಗಳೂ ಇದ್ದು, ಕುರುಬರು, ಲಿಂಗಾಯತರು ನಂತರದ ಸ್ಥಾನದಲ್ಲಿದ್ದಾರೆ. ಅಭ್ಯರ್ಥಿಗಳಿಬ್ಬರೂ ಒಕ್ಕಲಿಗರಾಗಿದ್ದು, ಮತಗಳು ವಿಭಜನೆಯಾಗಲಿವೆ. ಪರಿಶಿಷ್ಟ ಜಾತಿ ಹಾಗೂ ಮುಸ್ಲಿಂ ಮತಗಳು ನಿರ್ಣಾಯಕ ಎನಿಸಲಿವೆ.

  ಕೈಗೆ ಆಂತರಿಕ ಕಲಹ ಚಿಂತೆ: ಶ್ರೇಯಸ್​ಗೆ ಬಂಡಾಯದ ಚಿಂತೆ ಇಲ್ಲ. ಪುಟ್ಟಸ್ವಾಮಿಗೌಡರ ಮೇಲಿನ ಗೌರವದ ಜತೆಗೆ ಮುಖಂಡರನ್ನು ಒಟ್ಟಿಗೆ ಕೊಂಡೊಯ್ಯುವ ಚಾಕಚಕ್ಯತೆ ಇದೆ. ಆದರೆ, ಮೂಲ ಹಾಗೂ ವಲಸಿಗರು ಎಂಬ ಕಲಹ ಹೆಚ್ಚಾಗಿದ್ದು, ತಮಗೆ ಯಾವುದೇ ಸ್ಥಾನಮಾನ, ಅಧಿಕಾರ ಸಿಗುತ್ತಿಲ್ಲ ಎಂಬುದು ಮೂಲ ಕಾಂಗ್ರೆಸಿಗರ ಆಪಾದನೆ ಇದೆ. ಬಹಿರಂಗವಾಗಿಯೇ ನಾಯಕರು ಪಕ್ಷದ ಸಭೆಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಜಿಲ್ಲಾ ಮುಖಂಡರ ಬಂಡಾಯಕ್ಕೆ ಸಿಎಂ, ಡಿಸಿಎಂ ಅವರೇ ಗಾಬರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಭ್ಯರ್ಥಿಗೆ ಗ್ಯಾರಂಟಿಗಳು ವರವಾದರೂ ಇವೇ ತಿರುಗುಬಾಣವಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಪುರುಷ ಮತದಾರರು ಗ್ಯಾರಂಟಿಗಳಿಂದ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಜತೆಗೆ ವಿರೋಧ ಪಕ್ಷಗಳು ಕಾಂಗ್ರೆಸ್ ಬಂದಿದ್ದರಿಂದಲೇ ಬರ ಆವರಿಸಿದೆ ಎಂದು ಆರೋಪಿಸುತ್ತಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ.

  ಪ್ರಜ್ವಲ್ ರೇವಣ್ಣ ಪ್ಲಸ್-ಮೈನಸ್

  • ಹಾಲಿ ಸಂಸದ, ಎಚ್.ಡಿ. ದೇವೇಗೌಡರ ಮೊಮ್ಮಗ
  • ಕಳೆದೊಂದು ವರ್ಷದಿಂದ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವುದು
  • ನರೇಂದ್ರ ಮೋದಿ ಅಭಯ
  • ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಕಾಣಿಸಿಕೊಳ್ಳ ದಿರುವುದು
  • ಸ್ಥಳೀಯ ಬಿಜೆಪಿ ನಾಯಕರೊಂದಿಗೆ ವೈಯಕ್ತಿಕ ಮುನಿಸು

  ಶ್ರೇಯಸ್ ಪಟೇಲ್

  • ಜಿ.ಪುಟ್ಟಸ್ವಾಮಿಗೌಡ ಮೊಮ್ಮಗ
  • ಕುಟುಂಬ ಸದಸ್ಯರು 3 ಬಾರಿ ಸೋತಿರುವ ಅನುಕಂಪ
  • ಎಲ್ಲರೊಂದಿಗೆ ಬೆರೆಯುವ ಗುಣ
  • ಜಿಲ್ಲೆಯ ಎಲ್ಲ ಭಾಗದ ಜನರಿಗೆ ಪರಿಚಯ ಇಲ್ಲದಿರುವುದು
  • ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಿರುವುದು

  ಪ್ರಧಾನಿ ಮೋದಿ ಹಾಗೂ ಎಚ್.ಡಿ.ದೇವೇಗೌಡರ ಆಶೀರ್ವಾದದಿಂದ ಐದು ವರ್ಷದಲ್ಲಿ ಜಿಲ್ಲೆಯ ಅಭಿವೃದ್ಧಿಗೆ 14 ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆ. ಮುಂದೆಯೂ ಇದೇ ರೀತಿ ಸೇವೆ ಮಾಡಲು ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ.

  | ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿ

  ಕಾಂಗ್ರೆಸ್ ಮುಖಂಡರು ವಿಶ್ವಾಸವಿಟ್ಟು ಕಣಕ್ಕಿಳಿಸಿ ದ್ದಾರೆ. ಜಿಲ್ಲೆಯಲ್ಲೂ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ. ನಮ್ಮ ತಾತ 1999ರಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಿದ ಇತಿಹಾಸವನ್ನು ಮರುಸೃಷ್ಟಿಸುವ ವಿಶ್ವಾಸವಿದೆ.

  | ಶ್ರೇಯಸ್ ಪಟೇಲ್ ಕಾಂಗ್ರೆಸ್ ಅಭ್ಯರ್ಥಿ

  Viral News: 12 ವರ್ಷದ ಬಾಲಕಿಯನ್ನು ಮದುವೆಯಾದ 63ರ ಧರ್ಮಗುರು! ಕಾರಣ ಹೀಗಿದೆ..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts