ಹನೂರು: ತಾಲೂಕಿನ ಮಾರ್ಟಳ್ಳಿ ಸಮೀಪದ ಅಂತೋಣಿಯರ್ ಕೋವಿಲ್ ಗ್ರಾಮದ ಸಂತವನ ಅಂತೋಣಿ ಅವರ ಹಬ್ಬವನ್ನು ಶುಕ್ರವಾರ ರಾತ್ರಿ ಕ್ರೈಸ್ತರು ಭವ್ಯತೇರಿನ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಆಚರಿಸಿದರು.
ಹಬ್ಬದ ಹಿನ್ನಲೆ ಚರ್ಚ್‌ಅನ್ನು ವಿವಿಧ ವಿದ್ಯುತ್ ದೀಗಳಿದ ಅಲಂಕರಿಸಲಾಗಿತ್ತು. ಬೆಳಗ್ಗೆ ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬಿಷಪ್ ಬರ್ನಾಡ್ ಮೋರಸ್ ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ ನೆರವೇರಿಸಿದರು. ರಾತ್ರಿ 7.30ರ ವೇಳೆಯಲ್ಲಿ ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿದ್ದ ಭವ್ಯ ತೇರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಮಾರ್ಟಳ್ಳಿ ಹಾಗೂ ಈ ಭಾಗದ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪ್ರಾರ್ಥನೆ ಹಾಗೂ ಸ್ತುತಿ ಗೀತೆಗಳನ್ನು ಹಾಡುವುದರ ಮೂಲಕ ಮೆರವಣಿಗೆಗೆ ಮೆರಗು ತಂದರು. ಈ ಸಂದರ್ಭದಲ್ಲಿ ಧರ್ಮಕೇಂದ್ರದ ಫಾದರ್ ಜಾನ್‌ಪಾಲ್ ಇತರೆ ಧರ್ಮಕೇಂದ್ರದ ಗುರುಗಳು ಹಾಗೂ ಭಕ್ತರು ಇದ್ದರು.