Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಶಿವ ಧ್ಯಾನದಲ್ಲಿ ಮಿಂದೆದ್ದ ನಗರ

Wednesday, 14.02.2018, 3:03 AM       No Comments

ಮಹಾಶಿವರಾತ್ರಿ ಆಚರಣೆ ಪ್ರಯುಕ್ತ ಮಂಗಳವಾರ ನಗರದ ನೂರಾರು ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕಿದರೆ,ರಾತ್ರಿಪೂರ್ಣ ರುದ್ರಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಸಂಭ್ರಮ ಹೆಚ್ಚಿಸಿದವು. ಪ್ರಮುಖ ಶಿವ ಸನ್ನಿಧಿಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಸ್ಥಾನ, ಚಾಮರಾಜಪೇಟೆಯ ರಾಮೇಶ್ವರ, ಕೆ.ಆರ್. ರಸ್ತೆಯ ಉಮಾ ಮಹೇಶ್ವರ ದೇವಸ್ಥಾನ ಸೇರಿ ರಾಜಧಾನಿಯ ನೂರಾರು ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಸಂಪನ್ನಗೊಂಡವು. ಮಂಗಳವಾರ ಬೆಳಗ್ಗೆ 5 ರಿಂದ ಬುಧವಾರ ನಸುಕಿನ ವರೆಗೆ ಹಲವು ರೀತಿಯ ಧಾರ್ವಿುಕ ವಿಧಿ, ವಿಧಾನಗಳು ನಡೆದ ಕಾರಣ ದೇವಸ್ಥಾನಗಳಲ್ಲಿ ಹಗಲು ರಾತ್ರಿ ಭೇದವಿಲ್ಲದೇ ಭಕ್ತರ ದಂಡು ನೆರೆದಿತ್ತು.

ನಾಗಾ ಸಾಧುಗಳಿಂದ ಅರ್ಚನೆ

ನಾಯಂಡಹಳ್ಳಿಯ ಶ್ರೀಬಲಮುರಿ ವಿನಾಯಕ ದೇವಸ್ಥಾನ ಸೇವಾ ಟ್ರಸ್ಟ್​ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಗಾ ಸಾಧುಗಳು ಶ್ರೀಮಂಜುನಾಥೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಿದ್ದು ಭಕ್ತರ ಗಮನ ಸೆಳೆಯಿತು. ಲೋಕ ಕಲ್ಯಾಣಾರ್ಥವಾಗಿ ರುದ್ರ ಹೋಮವೂ ನಡೆಯಿತು. ಭಕ್ತರಿಗೆ ಸ್ಪಟಿಕ ಲಿಂಗವನ್ನೂ ವಿತರಿಸಿದ್ದು ವಿಶೇಷ ವಾಗಿತ್ತು.

ಶಿವನಾಮ ಸ್ಮರಣೆಯಲ್ಲಿ ಭಕ್ತರು

ವಿಜಯನಗರದ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಮುಖ ಪಶುಪತಿನಾಥ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನ ಮತ್ತು ದಕ್ಷಿಣಮುಖ ನಂದಿ ತೀರ್ಥ ಕ್ಷೇತ್ರ, ಗವಿಪುರದ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನಗಳಲ್ಲಿ ಭಾರಿ ಸಂಖ್ಯೆಯ ಭಕ್ತರು ನರೆದಿದ್ದರು. ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದು ಧನ್ಯತೆ ಮೆರೆದರು. ಗಣ್ಯರ ಭೇಟಿ

ವನ್ನಾರಪೇಟೆಯಲ್ಲಿ ಶ್ರೀಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್​ನಿಂದ ಅದ್ದೂರಿಯಾಗಿ ಮಹಾಶಿವರಾತ್ರಿ ಆಚರಿಸಲಾಯಿತು. ಗೃಹ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಸಂಪತ್​ರಾಜ್ ಮತ್ತಿತರರು ವಿಶೇಷ ಪೂಜೆ ಸಮರ್ಪಿಸಿದರು. ಮಲ್ಲೇಶ್ವರ ಆಟದ ಮೈದಾನ ಬಳಿಯಿರುವ ಶ್ರೀಕಂಠೇಶ್ವರ ಭವನದಲ್ಲಿ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದಿಂದ ಮೃತ್ತಿಕಾ ಶಿವಲಿಂಗ ದರ್ಶನ ಏರ್ಪಡಿಸಲಾಗಿತ್ತು. ರುದ್ರ ಪಾರಾಯಣ, ಭಜನಾ ಕಾಯಕ್ರಮಗಳು ನಡೆದು ಸಂಜೆ ರುದ್ರಾಭಿಷೇಕ ನಡೆಯಿತು.

ರಂಜಿಸಿದ ಗಾಯನ

ಹಂಪಿನಗರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಡಾ.ರಾಜ್​ಕುಮಾರ್ ಗೀತೆಗಳ ಪ್ರಥಮ ಮ್ಯೂಜಿಕಲ್ ಸ್ಟಾರ್ ನೈಟ್​ಗೆ ಸಹಸ್ರಾರು ಜನ ಸಾಕ್ಷಿಯಾದರು. ಸ್ವರ ಸನ್ನಿಧಿ ಅಧ್ಯಕ್ಷೆ ಶಮಿತಾ ಮಲ್ನಾಡ್ ನಿರ್ವಹಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದರಾದ ಅರ್ಜುನ್ ಜನ್ಯ, ಅನುಶ್ರೀ ಸೇರಿ ಹಲವು ಖ್ಯಾತಗಾಯಕರು ಪಾಲ್ಗೊಂಡಿದ್ದರು. ಸಚಿವ ಎಂ. ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ ಉಪಸ್ಥಿತರಿದ್ದರು. ಜೆ.ಪಿ.ನಗರದ ಶ್ರೀಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಪ್ರಣತಿ ರಾಘವೇಂದ್ರ ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಲಕ್ಷ ಲಾಡು ವಿತರಣೆ

ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಶಿವಾಲಯಗಳಲ್ಲಿ ಬಿಜೆಪಿ ಮುಖಂಡ ಎಂ.ಬಿ. ಶಿವಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಒಂದು ಲಕ್ಷ ಲಾಡು ಪ್ರಸಾದ ವಿತರಿಸಿದರು. ಭಕ್ತರು ದರ್ಶನ ಮುಗಿಸಿ ತೆರಳುತ್ತಿದ್ದ ವೇಳೆ ಕಾರ್ಯಕರ್ತರು ಶಿಸ್ತುಬದ್ಧವಾಗಿ ಪ್ರಸಾದ ವಿತರಿಸಿ ಮೆಚ್ಚುಗೆಗೆ ಪಾತ್ರರಾದರು.

ಭಜನೆ, ಕಾವ್ಯ, ನೃತ್ಯ

ಆಧ್ಯಾತ್ಮಿಕ ಆಚರಣೆ ಅಷ್ಟೇ ಅಲ್ಲದೇ ಸಾಂಸ್ಕೃತಿಕವಾಗಿಯೂ ರಾಜಧಾನಿ ಬೆಂಗಳೂರು ಮಂಗಳವಾರ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಹಂಪಿನಗರದ ಗ್ರಂಥಾಲಯ ಸಭಾಂಗಣದಲ್ಲಿ ಕಾವ್ಯಮಂಡಲ, ದಿವ್ಯಾಂಶಿ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆಯಿಂದ ಕಾವ್ಯ ಶಿವರಾತ್ರಿ ಏರ್ಪಡಿಸಲಾಗಿತ್ತು. ವಸತಿ ಸಚಿವ ಎಂ. ಕೃಷ್ಣಪ್ಪ, ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್, ವಿಜಯವಾಣಿ ಅಂಕಣಕಾರ ಪ್ರೊ.ಕೃಷ್ಣೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

60 ಕಲಾವಿದರಿಂದ ನೃತ್ಯೋತ್ಸವ

ಕನ್ನಡ ಭವನದ ನಯನ ರಂಗಮಂದಿರದಲ್ಲಿ ಅಭಿವ್ಯಕ್ತಿ ಆಧ್ಯಾತ್ಮಿಕ ರಾಷ್ಟ್ರೀಯ ನೃತ್ಯ ಉತ್ಸವ ಏರ್ಪಡಿಸಲಾಗಿತ್ತು. 60 ಕಲಾವಿದರು ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿ ಗಮನಸೆಳೆದರು.

ನಕ್ಕು ನಗಿಸಿದ ನಗೆ ಜಾಗರಣೆ

ಮಂತ್ರಿಮಾಲ್ ಬಳಿಯ ಶಿರೂರು ಪಾರ್ಕ್​ನಲ್ಲಿ ಜಾಣಜಾಣೆಯರ ನಗೆಜಾಗರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ. ಕೃಷ್ಣೇಗೌಡ, ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ, ಹಾಸಕಲಾವಿದರಾದ ಮಿಮಿಕ್ರಿ ಗೋಪಿ, ಕಸ್ತೂರಿ, ಲಕ್ಷ್ಮಣ್ ಸುವರ್ಣ, ರವಿಭಜಂತ್ರಿ ಸೇರಿ ಅನೇಕ ಕಲಾವಿದರು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.

Leave a Reply

Your email address will not be published. Required fields are marked *

Back To Top