ರತ್ನಗಿರಿ ವಿರಾಗಿಗೆ ನಮನ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿಗೆ 10 ದಿನಗಳ ಪರ್ಯಂತ ನಡೆಯಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವದ ಧಾರ್ವಿುಕ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ಸಿಕ್ಕಿದೆ. ಪ್ರಾತಃಕಾಲ ಭಗವಾನ್ ಶ್ರೀ ಚಂದ್ರನಾಥ ತೀರ್ಥಂಕರರಿಗೆ ಪಂಚಾಮೃತಾಭಿಷೇಕ ನೆರವೇರಿಸಿ ಮಹಾಪೂಜೆ ನಡೆಯಿತು. ಬಳಿಕ ಕ್ಷೇತ್ರದ ಆರಾಧ್ಯ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಅನಂತರ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿ ಬೆಟ್ಟಕ್ಕೆ ನಡೆದ ಅಗ್ರೋದಕ ಮೆರವಣಿಗೆಯ ಪಲ್ಲಕ್ಕಿಯಲ್ಲಿ ಚಂದ್ರನಾಥ ಸ್ವಾಮಿ ಹಾಗೂ ಶಾಂತಿನಾಥ ತೀರ್ಥಂಕರ ಮೂರ್ತಿ ಕೊಂಡೊಯ್ಯಲಾಯಿತು. ಜೈನ ಮುನಿಗಳು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಹಿತ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಮುಹೂರ್ತಕ್ಕೆ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಬಸದಿಗಳಿಂದ ಪ್ರಸಾದ ತಂದು ಪಾದಾಭಿಷೇಕಕ್ಕೆ ಬಳಸಲಾಯಿತು. ಸಂಜೆ ಮೃತ್ತಿಕಾ ಸಂಗ್ರಹಣೆ, ಯಜ್ಞ ಶಾಲಾ ಪ್ರವೇಶ, ಅಂಕುರಾರ್ಪಣೆ ವಿಧಾನ ಮಹಾಮಂಗಳಾರತಿ ನಡೆಯಿತು. ರಾತ್ರಿ ರತ್ನಗಿರಿ ಬೆಟ್ಟದಲ್ಲಿ ಲೇಸರ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜನಕಲ್ಯಾಣ ಕಾರ್ಯಕ್ರಮ
ಅಮೃತವರ್ಷಿಣಿ ಸಭಾಭವನದಲ್ಲಿ ಜನಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಕ್ಷೇತ್ರದಲ್ಲಿ ಸಂಭ್ರಮ ವಾತಾವರಣ
12 ವರ್ಷಗಳ ಬಳಿಕ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯುತ್ತಿರುವುದರಿಂದ ಕ್ಷೇತ್ರದಲ್ಲಿ ಸಂಭ್ರಮ ಕಂಡುಬಂದಿದೆ. ದೇಶದ ನಾನಾ ರಾಜ್ಯ ಹಾಗೂ ವಿದೇಶಗಳಿಂದಲೂ ಕ್ಷೇತ್ರದ ಭಕ್ತರು, ಜೈನ ಧರ್ವನುಯಾಯಿಗಳು ಆಗಮಿಸುತ್ತಿದ್ದಾರೆ. ದಿಗಂಬರ ಮುನಿಗಳು ವಾಸ್ತವ್ಯ ಮಾಡಿರುವ ಚಂದ್ರನಾಥ ಬಸದಿ ಬಳಿಯ ಚಂದ್ರಾಪುರ, ಸಾಕೇತಪುರ, ಕುಂದ ಕುಟೀರಕ್ಕೆ ಜಿನ ಅನುಯಾಯಿಗಳು ಭೇಟಿ ನೀಡುತ್ತಿದ್ದಾರೆ.

ಹಸಿರು ಕ್ರಾಂತಿ ಆಗಲಿ…
ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕೆರೆ ಕಟ್ಟೆಗಳ ಅಭಿವೃದ್ಧಿಗೆ ಹೆಗ್ಗಡೆಯವರ ಚಿಂತನೆಗೆ ಸರ್ಕಾರ ಪೂರ್ಣ ಬೆಂಬಲ ನೀಡಲಿದೆ. ಈ ಯೋಜನೆ ರಾಜ್ಯದಲ್ಲಿ ಹಸಿರು ಕ್ರಾಂತಿಯಾಗಬೇಕು ಎಂದು ಸಿಎಂ ಕುಮಾರಸ್ವಾಮಿ ಆಶಿಸಿದರು. ಧರ್ಮಸ್ಥಳದ ಮಹಾಮಸ್ತಕಾಭಿಷೇಕದ ಪ್ರಯುಕ್ತ 23 ಕೋಟಿ ರೂ.ವೆಚ್ಚದಲ್ಲಿ ನಿರ್ವಿುಸಲಾಗುತ್ತಿರುವ ಧರ್ಮಸ್ಥಳ ನೇತ್ರಾವತಿ ಸಂಪರ್ಕ ರಸ್ತೆಯ ಚತುಷ್ಪಥ ಕಾಮಗಾರಿ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಸರ್ಕಾರ 28.50 ಕೋಟಿ ರೂ.ಗಳ ನೆರವಿನೊಂದಿಗೆ ಕೆರೆಗಳ ಅಭಿವೃದ್ಧಿಗೆ ಚಿಂತಿಸಿದೆ. ಇದರ ಪ್ರಥಮ ಅನುದಾನ ಹಂತವಾಗಿ 87.5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು. ಬಳಿಕ ಕೆರೆ ಸಂಜೀವಿನಿ ಯೋಜನೆ ಒಡಂಬಡಿಕೆಗೆ ಸಹಿ ಹಾಕಲಾಯಿತು.